Advertisement

ವಿಶ್ವಶ್ರಮ ನೆಲದಲ್ಲಿ ಬೇಂದ್ರೆ ಕಂಡ ಬೆನಕ

10:18 AM May 17, 2022 | Team Udayavani |

ಹುಬ್ಬಳ್ಳಿ: ನೋಡಲಿಕ್ಕೆ ಅದೊಂದು ವಿಘ್ನ ನಿವಾರಕನ ದೇವಾಲಯ. ಆದರೆ ಅದು ಬೇಂದ್ರೆ ಕಂಡ ಬೆನಕನ ದೇವಾಲಯ. ಅಲ್ಲಿ ಗಜಾನನ ಕೇವಲ ಗರ್ಭ ಗುಡಿಯ ಆಸನಧಾರಿ. ಇಡೀ ದೇವಾಲಯ ಶ್ರಾವಣ ಕವಿ ಅಂಬಿಕಾತನಯನೇ ಪಾರಮ್ಯ. ಇಡೀ ದೇವಾಲಯ ವರಕವಿ ಕಂಡ ಬೆನಕನ ಬಗೆಗಿನ ಸಮಗ್ರ ಸಾಹಿತ್ಯವನ್ನು ಉಣಬಡಿಸುತ್ತಿದೆ.

Advertisement

ಇಂತಹ ಅಪರೂಪದ ದೇವಾಲಯಕ್ಕೆ ಸಾಕ್ಷಿಯಾಗಿರುವುದು ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡಾ| ಕೆ.ಎಸ್‌.ಶರ್ಮಾ ಅವರ ವಿಶ್ವಶ್ರಮ ಚೇತನ ಆವರಣ. ಕಾರ್ಮಿಕ ಹೋರಾಟದ ನೆಲದಲ್ಲಿ ಗಣಪ ನೆಲೆಸಿದ್ದರೂ ಇಡೀ ದೇವಾಲಯವು ಬೇಂದ್ರೆಯವರು ಗಣಪನನ್ನು ಕಂಡ ಸಾಹಿತ್ಯವನ್ನು ತೆರೆದಿಡುತ್ತದೆ. ಎಲ್ಲಿಯೂ ಕಾಣ ಸಿಗದ ಬಲು ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಉತ್ಸಾಹದ ಚಿಲುಮೆಯನ್ನುಕ್ಕಿಸುವ, ಸಮಾಜದ ಅಂಕು ಡೊಂಕುಗಳನ್ನು ಅಣುಕಿಸುವ, ಅನ್ನ, ಕಾರ್ಮಿಕ, ಪ್ರೀತಿ-ಪ್ರೇಮ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲಂತಹ ಕವನಗಳನ್ನು ರಚಿಸಿದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಈ ಆವರಣದಲ್ಲಿ ನಡೆಯುತ್ತಿದ್ದು, ಇದರೊಂದಿಗೆ ಇದೀಗ ಬೇಂದ್ರೆಯವರು ಕಂಡ ಬೆನಕನು ಕೂಡ ಇಲ್ಲಿ ನೆಲೆಸಿದ್ದಾನೆ.

ದೇವಾಲಯದ ವಿಶೇಷವೇನು? ದೇವಸ್ಥಾನದ ಗೋಡೆ, ಗರ್ಭಗುಡಿಯ ಗೋಡೆ ಮೇಲೆ ಕಣ್ಣಾಡಿಸಿದರೆ ಬೇಂದ್ರೆಯವರ ಸಾಹಿತ್ಯ ರಾರಾಜಿಸುತ್ತದೆ. ಬೇಂದ್ರೆಯವರ ತಂದೆ-ತಾಯಿ, ಮನೆ, ಬೇಂದ್ರೆಯವರ ಮಕ್ಕಳು, ಮೊಮ್ಮಕ್ಕಳೊಂದಿಗಿನ ಚಿತ್ರಗಳಿವೆ. ಮಗ ವಾಮನ ಬೇಂದ್ರೆಯೊಂದಿಗೆ ಬೈಕ್‌ ಪ್ರಯಾಣ, ಮುಖ್ಯಮಂತ್ರಿ ದೇವರಾಜ ಅರಸು ಅವರು ಬೇಂದ್ರೆಯವರಿಗೆ ಕ್ಯಾಲ್ಕುಲೇಟರ್‌ ನೀಡುತ್ತಿರುವುದು, ಬೇಂದ್ರೆಯವರಿಗೆ ಪಾಠ ಮಾಡಿದ ಶಿಕ್ಷಕರೊಂದಿಗೆ, ಕುವೆಂಪು, ಶಿವರಾಮ ಕಾರಂತ, ತೀನಂಶ್ರೀ, ವಿ.ಕೃ. ಗೋಕಾಕ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಪಂ| ಕುಮಾರ ಗಂಧರ್ವ, ಪಂ| ಮಲ್ಲಿಕಾರ್ಜುನ ಮನ್ಸೂರು, ಪಂ|ಭೀಮಸೇನ ಜೋಶಿ ಸೇರಿದಂತೆ ಹಲವು ಗಣ್ಯರೊಂದಿಗೆ ಹತ್ತು ಹಲವು ಚಿತ್ರಗಳಿವೆ. ಬೇಂದ್ರೆಯವರ ಕೈ ಬರಹದ ಪ್ರತಿ ಕೂಡ ಇದೆ. ಬಲು ಐತಿಹ್ಯ ಹೊಂದಿರುವ ಅಪರೂಪದ ಚಿತ್ರಗಳನ್ನು ಮಾತ್ರ ಇಲ್ಲಿ ಪ್ರದರ್ಶಿಸಲಾಗಿದೆ. ದೇವಾಲಯದ ಹುಂಡಿ, ಆರತಿ ತಟ್ಟೆ, ವಿಶೇಷ ಪೂಜೆ ಶುಲ್ಕ ಹೀಗೆ ಎಲ್ಲವನ್ನೂ ಬಡ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ.

ಸಾಹಿತ್ಯ ಸಾರುವ ಗರ್ಭ ಗುಡಿ: ವಿದ್ಯಾ ವಿನಾಯಕನ ಗರ್ಭ ಗುಡಿ ವಿಶೇಷವಾಗಿದೆ. ಇಡೀ ಗರ್ಭ ಗೋಡೆ ಸುತ್ತಲೂ ಕಪ್ಪು ಗ್ರಾನೈಟ್‌ ಅಳವಡಿಸಲಾಗಿದ್ದು, ಎಲ್ಲದರ ಮೇಲೆಯೂ ಬೆನಕನ ಬಗ್ಗೆ ರಚಿಸಿದ ಕವನಗಳನ್ನು ಕೆತ್ತಿಸಲಾಗಿದೆ. ಗಣಪನ ಬಗ್ಗೆ ಬರೆದ 15 ಕವನಗಳು ಗರ್ಭ ಗುಡಿಯ ಸುತ್ತಲೂ ಇವೆ. ಒಂದೊಂದು ಕವನಗಳು ಕೂಡ ಅತ್ಯದ್ಭುತವಾಗಿದ್ದು, ಇಂದಿನ ಸಮಾಜ, ದೇಶವನ್ನು ತೀಡುವ ಭಾವಾರ್ಥಗಳನ್ನು ಹೊಂದಿದ್ದು, ಇದನ್ನು ಅರ್ಥೈಸಿಕೊಳ್ಳುವ ಸಾಹಿತ್ಯ ಪ್ರೌಢಿಮೆ ಬೇಕು. ಎಲ್ಲಾ ಕವನಗಳು ಇರಬೇಕೆನ್ನುವ ಕಾರಣಕ್ಕಾಗಿಯೇ ಗರ್ಭ ಗುಡಿ ವಿಸ್ತರಿಸಲಾಗಿದೆ. ಪುಣೆಯಲ್ಲಿರುವ ಅಷ್ಟ ಗಣಪತಿಗಳನ್ನು ಇಲ್ಲಿ ನೋಡಬಹುದು. ಪ್ರಮುಖವಾಗಿ ಕೃಷ್ಣ ದೇವರಾಜ ಒಡೆಯರ ಅವರ ತತ್ವದರ್ಶಿನಿ ಗ್ರಂಥದಲ್ಲಿ ಬರುವ ವಿವಿಧ ಪ್ರಾಕಾರದ ಗಣೇಶನ ಚಿತ್ರಗಳನ್ನು ಮೈಸೂರಿನಲ್ಲಿ ಬಿಟ್ಟರೆ ಇಲ್ಲಿ ಮಾತ್ರ ಕಾಣಲು ಸಾಧ್ಯ.

Advertisement

ಬೇಂದ್ರೆಯಿದ್ದರೆ ಮಾತ್ರ ಬೆನಕ: ಎರಡು ದಶಕದ ಹಿಂದೆ ಕಾರ್ಮಿಕರ ಹೋರಾಟದಲ್ಲಿದ್ದ ಮುಖಂಡನೊಬ್ಬ ತಮ್ಮೂರಿನ ದೇವಸ್ಥಾನಕ್ಕಾಗಿ ಡಾ| ಕೆ.ಎಸ್‌.ಶರ್ಮಾ ಅವರ ಸಹೋದರಿ ಸುಲೋಚನಾ ಪೋತ್ನಿಸ್‌ ಅವರ ಬಳಿ ಒಂದು ಗಣೇಶ ಮೂರ್ತಿಗೆ ಬೇಡಿಕೆಯಿಟ್ಟಿದ್ದರು. ಅದರಂತೆ ಒಂದು ಮೂರ್ತಿ ಮಾಡಿಸಿ ಕೊಡಬೇಕು ಎನ್ನುವಾಗ ಮುಖಂಡ ಫೆಡರೇಶನ್‌ ವಿರೋಧಿ ಕಾರ್ಯ ಮಾಡಿದ್ದರಿಂದ ಮೂರ್ತಿ ನೀಡಲಿಲ್ಲ. ಹೀಗಾಗಿಯೇ ಈ ಗಣೇಶ ಆವರಣದಲ್ಲಿ ಉಳಿದು ಬಿಟ್ಟ. ಶರ್ಮಾ ಅವರ ಇಬ್ಬರು ಸಹೋದರಿಯರು ಹಾಗೂ ಸಮುದಾಯ ಈ ದೇವಾಲಯ ನಿರ್ಮಾಣಕ್ಕೆ ಒತ್ತಡ ಹೇರಿತು. ಬೇಂದ್ರೆ ಗುರುಗಳ ಸಾಹಿತ್ಯವೇ ಪಾರಮ್ಯವಾಗಿದ್ದರೆ ಮಾತ್ರ ಅವಕಾಶ ನೀಡುವ ಒಪ್ಪಂದ ಹಾಗೂ ಸ್ವಂತಿಕೆ ಬದಲು ಸಮಾಜದ ಸ್ವತ್ತಾಗಬೇಕೆನ್ನುವ ಉದ್ದೇಶ ದಿಂದ ದಾನಿಗಳ ನೆರವಿನಿಂದ ನಿರ್ಮಾಣಕ್ಕೆ ಒಪ್ಪಿದ ಪರಿಣಾಮ ವಿದ್ಯಾ ವಿನಾಯಕ ನೆಲೆ ನಿಂತಿದ್ದಾನೆ.

ಏಳು ಸ್ಮಾರಕಗಳ ತಾಣ: ಡಾ| ಕೆ.ಎಸ್‌.ಶರ್ಮಾ ಅವರು ಪ್ರತಿಯೊಂದು ಕೇಂದ್ರಗಳ ಮೂಲಕ ತಮ್ಮ ಗುರುಗಳ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬೇಂದ್ರ ಕಂಡ ಬೆನಕನ ದೇವಾಲದ ಜತೆಗೆ ಬೇಂದ್ರೆ ಪ್ರತಿಮೆ, ಬೇಂದ್ರೆ ಸಂಶೋಧನಾ ಕೇಂದ್ರ, ಬೇಂದ್ರೆ ಸಂಗೀತ ಅಕಾಡೆಮಿ, ಔದುಂಬರದತ್ತ ಚೈತನ್ಯ, ಬೇಂದ್ರೆ ಭೂ ವನ, ರಸಋಷಿ ಅಂಬಿಕಾತನಯದತ್ತ ಮಹಾಕಾವ್ಯ ಕಲಾದರ್ಶನ ಕೇಂದ್ರಗಳಿವೆ. ಇವುಗಳ ಮೂಲಕ ಬೇಂದ್ರೆ ಅವರ ಸಾಹಿತ್ಯ ದರ್ಶನದ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ.

ವರಕವಿ ದ.ರಾ.ಬೇಂದ್ರೆಯವರ ವಂಶ ಪರಂಪರಾಗತವಾಗಿ ಗಣೇಶನ ಉಪಾಸನೆಯಲ್ಲಿರುವ ಇತಿಹಾಸವಿದೆ. ಹೀಗಾಗಿಯೇ ಅವರು ಬೆನಕನ ಮೇಲೆ ಅತ್ಯದ್ಭುತ ಕವನಗಳನ್ನು ರಚಿಸಿದ್ದಾರೆ. ಈ ದೇವಾಲಯದ ಮೂಲಕ ಬೇಂದ್ರೆಯವರ ಬೆನಕ ಜನರಿಗೆ ತಲುಪಬೇಕು ಎಂಬುದು ನನ್ನ ಉದ್ದೇಶ. ಆಸ್ತಿಕರಿಗೆ ದೇವಾಲಯ ಜತೆಗೆ ಸಾಹಿತ್ಯಾಸಕ್ತರಿಗೂ ಇದು ಬೇಂದ್ರೆ ಸಾಹಿತ್ಯ ಮಂದಿರ. ಇದೊಂದು ವಿಶೇಷ ಹಾಗೂ ವಿನೂತನ ಪ್ರಯತ್ನವಾಗಿದೆ. –ಡಾ|ಕೆ.ಎಸ್‌.ಶರ್ಮಾ, ಹಿರಿಯ ಕಾರ್ಮಿಕ ಹೋರಾಟಗಾರರು.

ಈ ದೇವಾಲಯ ನಿರ್ಮಾಣಕ್ಕೆ ಸಹೋದರ ಶರ್ಮಾ ಅವರೊಂದಿಗೆ ಗುದ್ದಾಡಿದ್ದು ಅಷ್ಟಿಷ್ಟಲ್ಲ. ಅವರು ಹಾಕಿದ ಕರಾರಿನಂತೆ ನಿರ್ಮಿಸಲಾಗಿದೆ. ಅವರು ಸೂಚಿಸಿದ ಹೆಸರನ್ನೇ ಇಡಲಾಗಿದೆ. ಸಂಪೂರ್ಣ ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ಇಷ್ಟಾರ್ಥಗಳನ್ನು ಪಡೆದವರೇ ದೇವರಿಗೆ ಬೇಕಾದ ಸಾಮಾಗ್ರಿಗಳನ್ನು ದೇಣಿಗೆ ಕೊಡುತ್ತಿದ್ದಾರೆ. ದೇವಾಲಯದಿಂದ ದೊರೆಯುವ ಎಲ್ಲಾ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. –ಸುಮಿತ್ರಾ ಪೋತ್ನಿಸ್‌, ಡಾ| ಕೆ.ಎಸ್‌.ಶರ್ಮಾ ಸಹೋದರಿ                  

ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next