ಕಲಬುರಗಿ : ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ದತ್ತಾತ್ರೇಯ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಕೋಟ್ಯಾಂತರ ರೂ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ನಕಲಿ ವೆಬ್ ಸೈಟ್ ತೆರೆದು ನೂರಾರು ಕೋ.ರೂ ಭಕ್ತರಿಂದ ಲಪಟಾಯಿಸಿರುವ ಆರೋಪದ ಮೇರೆಗೆ ದತ್ತಾತ್ರೇಯ ದೇವಾಲಯದ ಐವರು ಅರ್ಚಕರ (ಪೂಜಾರಿ) ವಿರುದ್ಧ ದೇವಲ್ ಗಾಣಗಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ತಾಲೂಕಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಾಮದೇವ ಬಾಗಶೆಟ್ಟಿ ಗುರುವಾರ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ವಂಚನೆ, ಸೈಬರ್ ಅಪರಾಧದಡಿ ಪ್ರಕರಣ ದಾಖಲಾಗಿದೆ.
ದೇವಲ್ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ದೇವಸ್ಥಾನದ ಆದಾಯ ಸರ್ಕಾರ ಕ್ಕೆ ಸೇರಬೇಕು. ಆದರೆ ಅರ್ಚಕರು ನಕಲಿ ವೆಬ್ ಸೈಟ್ ತೆರೆದು ವಂಚಿಸಿದ್ದರ ಹಿನ್ನೆಲೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Related Articles
ಇದನ್ನೂ ಓದಿ : ದೇವರ ತೀರ್ಥ ಸೇವಿಸುವ ವೇಳೆ ಲೋಹದ ಕೃಷ್ಣನನ್ನು ನುಂಗಿದ್ದ ವ್ಯಕ್ತಿ: ಯಶಸ್ವಿ ಶಸ್ತ್ರಚಿಕಿತ್ಸೆ
ಅರ್ಚಕರಾದ ವಲ್ಲಭ ತಂದೆ ದಿನಕರ ಭಟ್ ಪೂಜಾರಿ, ಅಂಕುರ ತಂದೆ ಆನಂದರಾವ ಪೂಜಾರಿ, ಪ್ರತೀಕ ತಂದೆ ತಂದೆ ಸದಾಶಿವ ಪೂಜಾರಿ, ಗಂಗಾಧರ ತಂದೆ ಶ್ರೀಕಾಂತ ಭಟ್ ಪೂಜಾರಿ ಹಾಗೂ ಪೂಜಾರಿ ಶರತ್ ಭಟ್ ತಂದೆ ನಂದುಭಟ್ಟ ಎನ್ನುವ ಅರ್ಚಕರ ವಿರುದ್ಧ ದೂರು ದಾಖಲಾಗಿದೆ.
ಕಳೆದ ಐದಾರು ವರ್ಷಗಳಿಂದ ಅರ್ಚಕರು ನಕಲಿ ವೆಬ್ ಸೈಟ್ ತೆರೆದು ನೂರಾರು ಕೋ.ರೂ ವಂಚಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆದಲ್ಲಿ ಮಾತ್ರ ನ್ಯಾಯ ದೊರಕಲು ಸಾಧ್ಯ.