ಬೆಂಗಳೂರು: ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸುವಲ್ಲಿ ತನಿಖಾಧಿಕಾರಿ ವಿಫಲವಾದ ಹಿನ್ನೆಲೆಯಲ್ಲಿ 12 ಮಂದಿ ವಿರುದ್ಧ ದಾಖಲಾಗಿದ್ದ ಗ್ಯಾಂಬ್ಲಿಂಗ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಗ್ಯಾಂಬ್ಲಿಂಗ್ ಆರೋಪಕ್ಕೆ ಸಂಬಂಧಿಸಿ ದಂತೆ ತಮ್ಮ ವಿರುದ್ಧ ನಗರದ ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ “ಸ್ಟ್ರೈಕರ್ ಅಸೋಸಿಯೇಟ್ಸ್ ರಿಕ್ರಿಯೇಷನ್ ಕ್ಲಬ್‌ನ ಐವರು ಸಿಬ್ಬಂದಿ ಹಾಗೂ ಇತರೆ ಏಳು ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೂರು ದಾಖಲಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಅನುಮತಿ ಆದೇಶದ ಪ್ರತಿ ಸಲ್ಲಿಸದ ಮತ್ತು ಆರೋಪಿಗಳು ಜೂಜಾಟವಾಡುತ್ತಿದ್ದರು ಎಂಬ ಅಂಶವನ್ನು ತನಿಖಾಧಿಕಾರಿ ದೃಢಪಡಿಸದ ಕಾರಣಕ್ಕೆ ಹಣ ಕಟ್ಟಿ “ಡಾರ್ಟ್ ಗೇಮ್’ ಆಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದ 12 ಮಂದಿ ವಿರುದ್ಧದ ಗ್ಯಾಬ್ಲಿಂಗ್ (ಜೂಜಾಟ) ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ವಿವರ: ಜೂಜಾಟದ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆದು ಸ್ಟ್ರೈಕರ್ ಅಸೋಸಿ ಯೇಟ್ಸ್ ರಿಕ್ರಿಯೇಷನ್ ಕ್ಲಬ್ ಮೇಲೆ 2020ರ ಮಾರ್ಚ್ 13ರಂದು ದಾಳಿ ನಡೆಸಿ ಅದೇ ದಿನ ಎಫ್ಐಆರ್ ದಾಖಲಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಲಾಗಿದೆ.
ದಾಳಿ ವೇಳೆ ಒಟ್ಟು 12,800 ನಗದು ಹಾಗೂ ಇನ್ನಿತರ ವಸ್ತು ವಶಪಡಿಸಿಕೊಳ್ಳಲಾಗಿದೆ, ಸ್ಥಳದಲ್ಲಿದ್ದ 12 ವ್ಯಕ್ತಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79 ಮತ್ತು 80ರ (ಜೂಜಾಟ ಆಡಿದ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪೂರ್ಣಗೊಳಿಸಿ 2020ರ ಸೆ.5ರಂದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಆದರೆ, ದಾಳಿ ನಡೆಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನೀಡಿದ ಆದೇಶದ ಪ್ರತಿ ಹಾಗೂ ಅನುಮತಿ ಕೋರಿ ಸಲ್ಲಿಸಿದ ಮನವಿಯನ್ನು ಎಫ್ಐಆರ್‌ನೊಂದಿಗೆ ಹೈಕೋರ್ಟ್‌ಗೆ ಸಲ್ಲಿಸಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣ ದಾಖಲಿಸಲು ಯಾವಾಗ ಅನುಮತಿ ನೀಡಿತು ಎಂಬು ದನ್ನೇ ತನಿಖಾಧಿಕಾರಿ ಸ್ಪಷ್ಟಪಡಿಸಿಲ್ಲ. ಕಾನೂನು ಪ್ರಕಾರ ಎಫ್ಐಆರ್ ಮತ್ತು ತನಿಖಾಧಿಕಾರಿಯ ಹೇಳಿಕೆಯೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಆದೇಶ ಪ್ರತಿಯನ್ನು ಸಲ್ಲಿಸಬೇಕಿತ್ತು.
ಇನ್ನೂ ಡಾರ್ಟ್ ಗೇಮ್ ಜೂಜಾಟವೇ ಅಥವಾ ಕೌಶಲ್ಯದ ಆಟವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಆದೇಶಿಸಿತು.