ದೆಹಲಿ : ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಪ್ರತಿಷ್ಠಾನದ ಮೂಲಕ ದೆಹಲಿಯ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಆಂಟಿ-ವೈರಲ್ ಡ್ರಗ್ ಫ್ಯಾಬಿಫ್ಲೂ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ವಿತರಿಸಲಿದ್ದೇವೆ ಎಂದು ಭಾನುವಾರ ತಿಳಿಸಿದ್ದಾರೆ.
ಈ ಹಿಂದೆ ದೆಹಲಿಯ ತಮ್ಮ ಕ್ಷೇತ್ರವಾದ ಪೂರ್ವ ದೆಹಲಿಯ ಜನರಿಗೆ ತಮ್ಮ ಪ್ರತಿಷ್ಠಾನದ ಮೂಲಕ ಕೋವಿಡ್ ಸೋಂಕಿತರಿಗೆ ಫ್ಯಾಬಿಫ್ಲೂ ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡುತ್ತಿದ್ದಾರೆ. ಔಷಧ ಮತ್ತು ಆಕ್ಸಿಜನ್ ಸಿಲಿಂಡರ್ ಪಡೆಯಲು ಬರುವ ಜನ ತಮ್ಮ ಆಧಾರ್ ಕಾರ್ಡ್ ಜೊತೆಗೆ ಬರಬೇಕು ಎಂದು ಸೂಚನೆ ನೀಡಲಾಗಿತ್ತು.
ದೆಹಲಿ ನನ್ನ ಮನೆ. ನನ್ನ ಕೊನೆಯ ಉಸಿರು ಇರವ ತನಕ ಇಲ್ಲಿನ ಜನರ ಸೇವೆಯನ್ನು ಮಾಡುತ್ತೇನೆ. ಆಕ್ಸಿಜನ್, ಬೆಡ್, ಮತ್ತು ಔಷಧದ ಸಹಾಯ ಮಾಡಿ ಎಂದು ಹಲವಾರು ಮನವಿಗಳು ಬಂದಿವೆ. ನನಗೆ ಎಷ್ಟು ಸಾಧ್ಯ ಆಗುತ್ತದೆಯೋ ಅಷ್ಟು ಸಹಾಯವನ್ನು ನಾನು ಮಾಡುತ್ತೇನೆ. ಇದು ನಿಜವಾಗಿಯೂ ಕಠಿಣ ಸಮಯ ಎಂದು ಗಂಭೀರ್ ಹೇಳಿದ್ದಾರೆ.
ಇತ್ತಿಚೆಗೆ ಗೌತಮ್ ಗಂಭೀರ್ ಪ್ರತಿಷ್ಠಾನವು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ 1 ಕೋಟಿ ರೂ.ಗಳ ದೇಣಿಗೆ ಪಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಲಾಕ್ ಡೌನ್ ಅನ್ನು ಇನ್ನು ಒಂದು ವಾರಗಳ ಕಾಲ ಮುಂದುವರೆಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಕಳೆದ ವಾರ ಆರು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಅದರ ಅವಧಿ ನಾಳೆ ಅಂದ್ರೆ ಸೋಮವಾರಕ್ಕೆ ಮುಕ್ತಾಯವಾಗಲಿದ್ದು, ಇದೀಗ ಮತ್ತೆ ದೆಹಲಿ ಲಾಕ್ ಆಗಲಿದೆ.