ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಪೂರ್ವ ದೆಹಲಿ ಕ್ಷೇತ್ರಕ್ಕೆ ಮೇ 12ರಂದು ನಡೆಯಲಿರುವ ಮತದಾನಕ್ಕೆ ಹೆಚ್ಚಿನ ಖದರ್ ಬಂದಿದೆ. ಈ ಬಾರಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿ ಸೇರ್ಪಡೆಯಾಗಿ, ಅಲ್ಲಿಂದ ಸ್ಪರ್ಧೆಗೆ ಇಳಿದಿರುವುದೇ ಇದಕ್ಕೆ ಕಾರಣ.
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಮಹೇಶ್ ಗಿರಿ 5,72, 202 ಮತಗಳನ್ನು ಪಡೆದು ಗೆದ್ದಿದ್ದರು. ಆಮ್ ಆದ್ಮಿ ಪಕ್ಷದ ವತಿಯಿಂದ ಕಣಕ್ಕೆ ಇಳಿದಿದ್ದ ರಾಜಮೋಹನ್ ಗಾಂಧಿಗೆ 3,81, 739 ಮತಗಳು ಪ್ರಾಪ್ತವಾಗಿದ್ದವು. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್‌ಗೆ 2,03, 240 ಮತಗಳು ಸಿಕ್ಕಿದ್ದವು.
2019ರ ಚುನಾವಣೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಬದಲಾಗಿದ್ದಾರೆ. ಆಪ್ ವತಿಯಿಂದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸ್ಸೋಡಿಯಾ ಮಾಜಿ ಸಲಹೆಗಾರ್ತಿ, ಆಪ್ ನಾಯಕಿ ಆತಿಶಿ ಮರ್ಲೇನಾ ಕಣಕ್ಕೆ ಇಳಿದಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಪಕ್ಷ ತ್ಯಜಿಸಿ ಮತ್ತೆ ಬಂದಿರುವ ಅರವಿಂದ ಸಿಂಗ್ ಲೌಲಿ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿರುವ ಗೌತಮ್ ಗಂಭೀರ್‌ಗೆ 2 ಮತದಾರರ ಗುರುತಿನ ಚೀಟಿ ಹೊಂದಿರುವ ವಿವಾದದ ಜತೆಗೆ, ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಭೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕ್ರಿಕೆಟ್‌ನಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಅವರು, ಮೊದಲ ಪ್ರಯತ್ನದಲ್ಲಿಯೇ ಚುನಾವಣೆ ಗೆದ್ದು ಲೋಕಸಭೆಗೆ ಪ್ರವೇಶಿಸಲಿದ್ದಾರೆಯೇ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಸುಖ್ಮಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸದ ವೆಚ್ಚದ ಹೊಣೆಯನ್ನು ವಹಿಸಿಕೊಳ್ಳುವ ಮೂಲಕ ಅವರು, ಹೆಚ್ಚು ಜನಜನಿತರಾದರು. ಕ್ರಿಕೆಟ್ ಕ್ಷೇತ್ರದಲ್ಲಿ ಗಂಭೀರ್ ಸಾಧಿಸಿರುವ ಜನಪ್ರಿಯತೆಯನ್ನು ಮುಂದಿಟ್ಟಿದೆ ಬಿಜೆಪಿ. ಗಂಭೀರ್ ನವದೆಹಲಿಯಲ್ಲಿಯೇ ಹುಟ್ಟಿ ಬೆಳೆದವರು ಹೌದಾದರೂ, ರಾಜಕೀಯ ಕ್ಷೇತ್ರ ಅವರಿಗೆ ಹೊಸತಾಗಿರುವ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸಿರುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆ ಎನ್ನುವುದು ಅವರಿಗೆ ಇರುವ ನಕಾರಾತ್ಮಕ ಅಂಶ. ಆದರೆ ಅದನ್ನು ತಳ್ಳಿಹಾಕುತ್ತಾರೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಅರವಿಂದ ಸಿಂಗ್ ಲೌಲಿ ಬಗ್ಗೆ ಹೇಳುವುದಾದರೆ, ಬಿಜೆಪಿ ಮತ್ತು ಆಪ್ ಅಭ್ಯರ್ಥಿಗಳಿಗಿಂತ ಹೆಚ್ಚಿನ ಪ್ರಾಯೋಗಿಕ ರಾಜಕೀಯ ಅನುಭವ ಅವರಿಗೆ ಇದೆ. ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಮೂರು ಬಾರಿ ಶಾಸಕರಾಗಿದ್ದರು ಮತ್ತು ಸಚಿವರಾಗಿಯೂ ಅಧಿಕಾರ ನಡೆಸಿ ಅನುಭವ ಉಳ್ಳವರು. ಜತೆಗೆ ಚುನಾವಣೆಗೆ ಯಾವ ರೀತಿ ಯೋಜನೆ ರೂಪಿಸಿಕೊಳ್ಳಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸುವ ಚಾಣಾಕ್ಷ ತಂಡವನ್ನೂ ಕಟ್ಟಿಕೊಂಡಿದ್ದಾರೆ. ಜತೆಗೆ ಮೂರು ಬಾರಿ ಶಾಸಕ-ಸಚಿವರಾಗಿದ್ದ ಕಾರಣ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲರಿಗೂ ಪರಿಚಿತರೇ ಆಗಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆತಿಶಿ ಮರ್ಲೆನಾ ತಿಂಗಳುಗಳ ಮೊದಲೇ ಕ್ಷೇತ್ರದ ಮೂಲೆ ಮೂಲೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲು ಆರಂಭಿಸಿದ್ದರು. ಜತೆಗೆ ಪೋಸ್ಟರ್, ಬ್ಯಾನರ್‌ಗಳು, ಮನೆ-ಮನೆಗೆ ತೆರಳಿ ಪರಿಚಯ ಮಾಡಿಕೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ಬಿಜೆಪಿಗೆ ಮುನ್ನವೇ ಅವರು ಪ್ರಾಥಮಿಕ ಸಿದ್ಧತೆ ಮಾಡಿಕೊಂಡಿರುವುದು ಕೊಂಚ ಧನಾತ್ಮಕವಾಗಿರಲಿದೆ.
ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಹತ್ತು ವಿಧಾನಸಭಾ ಕ್ಷೇತ್ರಗಳಿವೆ. ಜಂಗ್‌ಪುರ (ಆಪ್), ಓಕ್ಲಾ (ಆಪ್), ತ್ರಿಲೋಕ್‌ಪುರಿ (ಆಪ್), ಕೋಂಡ್ಲಿ (ಆಪ್), ಪತ್ಪಾರ್‌ಗಂಜ್ (ಆಪ್), ಲಕ್ಷ್ಮೀನಗರ (ಆಪ್), ವಿಶ್ವಾಸ್‌ನಗರ್ (ಬಿಜೆಪಿ), ಕೃಷ್ಣಾನಗರ್ (ಆಪ್), ಗಾಂಧಿನಗರ್ (ಆಪ್), ಶಾದ್ರಾ (ಆಪ್)ಗಳಲ್ಲಿ ಆಡಳಿತ ಪಕ್ಷವೇ ಇರುವುದು ಆತಿಶಿ ಮರ್ಲೆನಾ ಅವರಿಗೆ ಅನುಕೂಲವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರ ಇತಿಹಾಸ: 1967ರಲ್ಲಿ ರಚನೆಯಾಗಿರುವ ಈ ಕ್ಷೇತ್ರದಲ್ಲಿ ಮೊದಲು ಗೆದ್ದದ್ದು ಭಾರತೀಯ ಜನ ಸಂಘದ ಹರ್‌ದಯಾಳ್ ದೇವಗುಣ. 1971, 1980, 1984, 1989, 2004, 2009ರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. 1977ರಲ್ಲಿ ಜನತಾ ಪಾರ್ಟಿ, 1991, 1996, 1997, 1998, 1999, 2014ರಲ್ಲಿ ಬಿಜೆಪಿ ಗೆದ್ದಿತ್ತು.
ಈ ಬಾರಿ ಕಣದಲ್ಲಿ
•ಗೌತಮ್ ಗಾಂಭೀರ್ (ಬಿಜೆಪಿ)
•ಆತಿಶಿ ಮರ್ಲೇನಾ (ಆಪ್)
•ಅರವಿಂದ ಸಿಂಗ್ ಲೌಲಿ (ಕಾಂಗ್ರೆಸ್)