Advertisement

ಕೋಚ್‌ ಜತೆ ಗಂಭೀರ್‌ ಜಗಳ

09:33 AM Mar 08, 2017 | Team Udayavani |

ಭುವನೇಶ್ವರ: ಕ್ರೀಡಾಂಗಣದಲ್ಲೇ ತಾಳ್ಮೆ ಕಳೆದುಕೊಳ್ಳುವ ದಿಲ್ಲಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಇದೀಗ ಕೋಚ್‌ ಒಬ್ಬರ ಜತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ವಿಜಯ್‌ ಹಜಾರೆ ಏಕದಿನ ಪಂದ್ಯದ ವೇಳೆ ಗಂಭೀರ್‌ ಅನುಚಿತ ವರ್ತನೆ ತೋರಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಗಂಭೀರ್‌ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲೇಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

Advertisement

ಏನಿದು ವಿವಾದ?: ದಿಲ್ಲಿ ತಂಡಕ್ಕೆ ಕೋಚ್‌ ಆಗಿ ಇತ್ತೀಚೆಗೆ ಮಾಜಿ ಕ್ರಿಕೆಟಿಗ ಕೆ.ಪಿ. ಭಾಸ್ಕರ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಗಂಭೀರ್‌ಗೆ ಆರಂಭದಲ್ಲೇ ಅಸಮಾಧಾನವಿತ್ತು ಎನ್ನಲಾಗಿದೆ. ಇದು ವಿಜಯ್‌ ಹಜಾರೆ ಪಂದ್ಯದ ವೇಳೆ ಸ್ಫೋಟಗೊಂಡಿದೆ. ಡ್ರೆಸಿಂಗ್‌ ರೂಮ್‌ನಲ್ಲಿ ಕೋಚ್‌ ಬಾಸ್ಕರ್‌ ಮೇಲೆ ಗಂಭೀರ್‌ ಹರಿಹಾಯ್ದಿದ್ದು, ಬೈಗುಳಗಳ ಮಳೆ ಸುರಿಸಿದ್ದಾರೆ ಎನ್ನಲಾಗಿದೆ. ಆದರೆ ಯಾವ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನುವುದು ಗೊತ್ತಿಲ್ಲ. 

ಗೌತಮ್‌ ಗಂಭೀರ್‌ ನಡವಳಿಕೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಾಲಿ, ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಶೀಘ್ರ ಡಿಡಿಸಿಎ ಮತ್ತು ಬಿಸಿಸಿಐ ಗಂಭೀರ್‌ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಗಂಭೀರ್‌ ಒಟ್ಟು 186 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವನ್ನಾಡಿದ್ದಾರೆ. ಒಟ್ಟು 13,205 ರನ್‌ ಗಳಿಸಿದ್ದಾರೆ.

ಭಾರತ ತಂಡದ ಆರಂಭಕಾರನೂ ಆಗಿದ್ದ ಗೌತಮ್‌ ಗಂಭೀರ್‌ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ ತಂಡದ ನಾಯಕ. ಕ್ರೀಡಾಂಗಣದ ಒಳಗಿದ್ದಾಗ ಅನೇಕ ಸಲ ತಾಳ್ಮೆ ಕಳೆದುಕೊಂಡು ವರ್ತಿಸಿದ್ದಿದೆ. ಮನೋಜ್‌ ತಿವಾರಿ, ಕೊಹ್ಲಿ, ಕಮ್ರಾನ್‌ ಅಕ್ಮಲ್‌, ಶಾಹಿದ್‌ ಅಫ್ರಿದಿ ಹಾಗೂ ವಾಟ್ಸ್‌ನ್‌ ಜತೆ ಕ್ರೀಡಾಂಗಣದಲ್ಲೇ ವಾಕ್ಸಮರ ನಡೆಸಿ ದೊಡ್ಡ ಸುದ್ದಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next