Advertisement

ಜನರನ್ನು ಮರಳು ಮಾಡುವ ಕಲೆ ಗಾಲಿ ರೆಡ್ಡಿಗೆ ಕರಗತ : ಗಣಿ ಉದ್ಯಮಿ ಟಪಾಲು ಗಣೇಶ್

05:00 PM Feb 20, 2023 | Team Udayavani |

ಗಂಗಾವತಿ: ಕನ್ನಡ ನಾಡಿನ ಗಡಿ ನಾಶ ಮಾಡಿ ನೂರಾರು ಎಕರೆ ಪ್ರದೇಶವನ್ನು ಆಂಧ್ರಪ್ರದೇಶಕ್ಕೆ ಹೋಗುವಂತೆ ಮಾಡುವ ಮೂಲಕ ಅಕ್ರಮ ಗಣಿಗಾರಿಕೆಯಲ್ಲಿ ಕೋಟ್ಯಾಂತರ ರೂ.ಗಳ ಹಣ ಗಳಿಸಿ ಹಣ ಸುರಿದು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಗ್ಯಾಂಗನ್ನು ಗಂಗಾವತಿ ಜನತೆ ನಂಬದಂತೆ ಸಾಮಾಜಿಕ ಹೋರಾಟಗಾರ ಗಣಿ ಉದ್ಯಮಿ ಬಳ್ಳಾರಿಯ ಟಪಾಲು ಗಣೇಶ ಮನವಿ ಮಾಡಿದರು.

Advertisement

ಅವರು ನಗರದ ಶ್ರೀಕೃಷ್ಣ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”2002-03 ರಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿರುವ ಜನಾರ್ದನರೆಡ್ಡಿ ಹಾಗೂ ಅವರ ಆಪ್ತರು ಪ್ರಸ್ತುತ ಕೋಟ್ಯಧಿಪತಿಗಳಾಗಿದ್ದು ಈ ಹಣ ಅಕ್ರಮ ಗಣಿಗಾರಿಕೆಯಿಂದ ಬಂದಿದೆ. ಆಂಧ್ರಪ್ರದೇಶ ಸರಕಾರದಿಂದ ಗಣಿಗಾರಿಕೆ ಮಾಡುವ ಪರವಾನಿಗೆ ಪಡೆದುಕೊಂಡು ಕರ್ನಾಟಕದ ಹಲವು ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಕರ್ನಾಟಕದ ಗಡಿ ನಾಶ ಮಾಡಿ ನೂರಾರು ಎಕರೆ ಭೂ ಪ್ರದೇಶವನ್ನು ಆಂಧ್ರಪ್ರದೇಶಕ್ಕೆ ಹೋಗುವಂತೆ ಮಾಡಲಾಗಿದೆ ಎಂದು ಎಸ್‌ಐಟಿ, ಲೋಕಾಯುಕ್ತ, ಗಡಿ ಸರ್ವೇ ಇಲಾಖೆ ಸೇರಿ ಹಲವು ತನಿಖಾ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟಾದರೂ ಗಾಲಿ ಜನಾರ್ದನರೆಡ್ಡಿ ಸತ್ಯಹರಿಶ್ಚಂದ್ರ ಎನ್ನುವಂತೆ ಜನರ ಬಳಿಯಲ್ಲಿ ನಾಟಕವಾಡುತ್ತಿದ್ದಾರೆ” ಎಂದರು.

”ಬಳ್ಳಾರಿಯನ್ನು ಅಭಿವೃದ್ಧಿಯ ಸ್ವರ್ಗ ಮಾಡಿರುವುದಾಗಿ ಹೇಳುತ್ತಿದ್ದಾರೆ. ಇವರ ಮನೆ ಹಣವನ್ನು ಹಾಕಿ ಬಳ್ಳಾರಿ ಅಭಿವೃದ್ಧಿ ಮಾಡಿಲ್ಲ. ಬದಲಿಗೆ ಬಳ್ಳಾರಿಯಲ್ಲಿ ಸೋನಿಯಾಗಾಂಧಿ ಹಾಗೂ ಸುಷ್ಮಾಸ್ವರಾಜ್ ಲೋಕಸಭೆ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಸೋನಿಯಾ ಗೆದ್ದ ನಂತರ 3 ಸಾವಿರ ಕೋಟಿ ಪ್ಯಾಕೇಜ್ ಹಣ ಮಂಜೂರಾಗಿದ್ದ ಸಂದರ್ಭದಲ್ಲಿ ಬಳ್ಳಾರಿ ಅಭಿವೃದ್ಧಿಯಾಗಿದೆ. ಅದನ್ನು ಬಿಟ್ಟರೆ ಬೇರೆ ಅಭಿವೃದ್ಧಿ ಶೂನ್ಯವಾಗಿದೆ” ಎಂದರು.

”ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿ ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಯೋಜನೆ ರೂಪಿಸಿ ಹಣ ಸುರಿದು ಗೆಲ್ಲಿಸಿಕೊಂಡು ಬಂದು ಕನ್ನಡ ನಾಡಿನ ರಾಜಕೀಯ ಇತಿಹಾಸವನ್ನು ಅಪವಿತ್ರ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಪ್ರಗತಿಪರ ಹೋರಾಟಗಾರರ ಜತೆ ಸೇರಿ ಎಲ್ಲಾ 40 ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಜನಾರ್ದನರೆಡ್ಡಿ ಅಕ್ರಮಗಳ ಕುರಿತು ಜನತೆಗೆ ಮನವರಿಕೆ ಮಾಡಲಾಗುತ್ತದೆ. ಶೀಘ್ರವೇ ಸಂಡೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವವರಿದ್ದು ಗಾಲಿ ರೆಡ್ಡಿ ಪ್ರಕರಣಗಳ ಸಾಕ್ಷ್ಯ ನಾಶ ಮಾಡುವ ಎಲ್ಲಾ ಕಾರ್ಯ ಮಾಡುವ ಸಂಭವವಿದ್ದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬಾರದು. ಜತೆಗೆ ಕೂಡಲೇ ರೆಡ್ಡಿಯನ್ನು ಬಂಧಿಸುವಂತೆ ಅಗತ್ಯ ದಾಖಲೆ ಸಮೇತ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.

ನಾವು ಒದಗಿಸಿದ ದಾಖಲಾತಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ತೊಡೆ ತಟ್ಟಿ ಪಾದಯಾತ್ರೆ ಮಾಡಿ ಬಂದು ಸರಕಾರ ರಚಿಸಿ ರೆಡ್ಡಿ ವಿರುದ್ಧ ಏನು ಮಾಡಲಿಲ್ಲ. ಎಲ್ಲಾ ರಾಜಕಾರಣಿಗಳು ಒಂದೇ ಆದ್ದರಿಂದ ರೆಡ್ಡಿ ವಿರುದ್ಧ ಕಾಂಗ್ರೆಸ್ ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

Advertisement

ಹಲವು ಪ್ರಕರಣಗಳಲ್ಲಿ ರೆಡ್ಡಿ ಸಾಕ್ಷ್ಯ ನಾಶ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿ ಧರೆಪ್ಪ ನಾಯಕ ಇವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಸೇರಿಸಿಕೊಂಡು ಸಿರಗುಪ್ಪ ಎಸ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಇದು ಸಹ ಸಾಕ್ಷ್ಯ ನಾಶ ಎನ್ನಲಾಗುತ್ತಿದೆ. ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಧರೆಪ್ಪ ನಾಯಕ ಸರ್ವೆ ಕಾರ್ಯ ಮಾಡಿ ಸರಕಾರಕ್ಕೆ ವರದಿ ಒಪ್ಪಿಸಿದ್ದರು ಈಗ ಅದೇ ಅಧಿಕಾರಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ತನಿಖೆಗೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆ ಇದೆ. ಇನ್ನೂ ಮುಂದೆ ಹಲವು ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದ್ದು ಕೂಡಲೇ ಜನಾರ್ದನ ರೆಡ್ಡಿಯನ್ನು ಜೈಲಿನೊಳಗಿಡಬೇಕು. ನಾನು ಗಂಗಾವತಿಯಲ್ಲಿ ಸುದ್ದಿಗೋಷ್ಠಿ ಮಾಡುವ ವಿಷಯ ತಿಳಿದು ಅಪರಿಚಿತರು ಸುದ್ದಿಗೋಷ್ಠಿ ಮಾಡದಂತೆ ಕರೆ ಮಾಡಿ ತಡೆಯಲು ಯತ್ನಿಸಿದರು ಎಂದು ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಆನಂದ ಭಂಡಾರಿ, ಫಯಾಜ್ ಇಂಕಿಲಾಬಿ, ಪಾಮಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next