ನರಗುಂದ: ಗ್ರಾಮೀಣ ಭಾಗದಲ್ಲಿ ಕೋಮು ಸೌಹಾರ್ದತೆ ಗಟ್ಟಿಗೊಳಿಸಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ನಮ್ಮೂರ ಜಾತ್ರೆಯ ರೊಟ್ಟಿ ಜಾತ್ರೆ ಬುಧವಾರ ನೆರವೇರಲಿದೆ. ಈ ಜಾತ್ರೆ ಮಲಪ್ರಭಾ ನದಿ ದಂಡೆ
ವ್ಯಾಪ್ತಿಯ ಗ್ರಾಮಗಳಲ್ಲಿ ಬಹಳ ಜನಪ್ರಿಯಗೊಂಡಿದೆ.
ನಮ್ಮೂರ ಜಾತ್ರೆ ಎರಡನೇ ದಿನವಾದ ಬುಧವಾರ ರೊಟ್ಟಿ ಜಾತ್ರೆಯಲ್ಲಿ ಸೇರುವ ಸಹಸ್ರಾರು ಭಕ್ತರಿಗೆ ರೊಟ್ಟಿಯೇ ಪ್ರಸಾದ. ತೋಂಟದಾರ್ಯ ಮಠದ ಆವರಣದಲ್ಲಿ ಸರ್ವ ಧರ್ಮಿಯರ ಸಮಾಗಮ ಜೊತೆಗೆ ಭಕ್ತಾದಿಗಳು ಸಾಮೂಹಿಕವಾಗಿ ಈ ಜಾತ್ರೆ ಸವಿ ಸವಿಯುತ್ತಾರೆ.
ಸಾವಿರಾರು ರೊಟ್ಟಿ ಸಂಗ್ರಹ: ಪ್ರತಿವರ್ಷ ರೊಟ್ಟಿ ಜಾತ್ರೆಗೆ ಈ ಭಾಗದ 20ಕ್ಕೂ ಹೆಚ್ಚು ಗ್ರಾಮಗಳ ಭಕ್ತಾದಿಗಳು ಭೇದ ಭಾವ ಮರೆತು ಮನೆಯಲ್ಲಿ ತಯಾರಿಸಿದ ಖಡಕ್ ರೊಟ್ಟಿ, ಹೊಲಗಳಲ್ಲಿ ಬೆಳೆದ ತರಕಾರಿ, ದವಸ ಧಾನ್ಯ ಶ್ರೀಮಠಕ್ಕೆ ಒಪ್ಪಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು, ಪ್ರಾರಂಭದಲ್ಲಿ 5 ಸಾವಿರ ರೊಟ್ಟಿಗಳಿಂದ ಆಚರಣೆಗೊಂಡ ರೊಟ್ಟಿ ಜಾತ್ರೆ ಇಂದು 60 ಸಾವಿರಕ್ಕೂ ಹೆಚ್ಚು ರೊಟ್ಟಿ ಸಂಗ್ರಹ ಕಂಡಿದ್ದು ಜನಪ್ರಿಯತೆಗೆ ಸಾಕ್ಷಿಯಾಗಿದೆ.
ರೊಟ್ಟಿ ಜಾತ್ರೆಯಲ್ಲಿ ಖಡಕ್ ರೊಟ್ಟಿ ಜೊತೆ ವಿವಿಧ ಪಲ್ಯೆ ವಿತರಿಸಲಾಗುತ್ತದೆ. ರುಚಿಕಟ್ಟಾದ ಕರಿಂಡಿ, ಅನ್ನದಿಂದ ತಯಾರಿಸಿದ ಬಾನ, ಎಲ್ಲ ತರಹದ ಸೊಪ್ಪುಗಳಿಂದ ಸಿದ್ಧಪಡಿಸಿದ ಭಜ್ಜಿ, ವಿಶಿಷ್ಟ ಖಾದ್ಯಗಳು ರೊಟ್ಟಿ ಜಾತ್ರೆ ವಿಶೇಷ. ರೊಟ್ಟಿ ಜಾತ್ರೆಯಲ್ಲಿ ತೋಂಟದ ಡಾ| ಸಿದ್ಧರಾಮ ಸ್ವಾಮೀಜಿ, ಶ್ರೀಮಠದ ಗುರುಬಸವ ಸ್ವಾಮೀಜಿ ಖುದ್ದಾಗಿ ಭಕ್ತರಿಗೆ ರೊಟ್ಟಿ ವಿತರಿಸುವುದು ವಿಶೇಷವಾಗಿದೆ.
ಜಾತಿರಹಿತ ಜಾತ್ರೆ: ಸೌಹಾರ್ದತೆಗೆ ಹೆಸರಾದ ರೊಟ್ಟಿ ಜಾತ್ರೆ ತೋಂಟದ ಲಿಂ| ಡಾ| ಸಿದ್ಧಲಿಂಗ ಸ್ವಾಮೀಜಿ ಕನಸಿನ ಸಾಕಾರವಾಗಿದೆ. ಅವರ ಹಾದಿಯಲ್ಲಿ ಇಂದಿನ ತೋಂಟದ ಡಾ| ಜ| ಸಿದ್ಧರಾಮ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶಿರೋಳ ತೋಂಟದಾರ್ಯ ಮಠದ ಶ್ರೀ ಗುರುಬಸವ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿಗೆ ಪೂರಕವಾಗಿ ಜಾತಿ ರಹಿತ ಜಾತ್ರೆಯಾಗಿ ರೊಟ್ಟಿ ಜಾತ್ರೆ ನೆರವೇರಲಿದೆ¨
*ಸಿದ್ಧಲಿಂಗಯ್ಯ ಮಣ್ಣೂರಮಠ