ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಆ.7ರ ಬುಧವಾರ ಸಡಗರ-ಸಂಭ್ರಮದಿಂದ ರೊಟ್ಟಿ ಪಂಚಮಿ ಆಚರಿಸಲಾಯಿತು.
ನಗರದ ಗಂಗಾಪುರ ಪೇಟೆ, ಪಂಚಾಕ್ಷರ ನಗರ, ಸಿದ್ಧಲಿಂಗ ನಗರ, ಬೆಟಗೇರಿ, ನರಸಾಪೂರ, ಖಾದಿ ನಗರ, ನಾಗಸಮುದ್ರ ಭಾಗದಲ್ಲಿ ಮಹಿಳೆಯರು ನೆರೆ-ಹೊರೆ ಮನೆಯವರಿಗೆ ರೊಟ್ಟಿ ಹಂಚುತ್ತ ಉತ್ಸಾಹದಿಂದ ರೊಟ್ಟಿ ಪಂಚಮಿ ಆಚರಿಸಿದರು.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಅಂಗವಾಗಿ ರೊಟ್ಟಿ ಪಂಚಮಿಯನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಕಳೆದ ನಾಲ್ಕೈದು ದಿನಗಳಿಂದ ಜೋಳ, ಸಜ್ಜಿಯ ಖಡಕ್ ರೊಟ್ಟಿ ಹಾಗೂ ಶೇಂಗಾ, ಗುರೆಳ್ಳು, ಪುಟಾಣಿ ಚಟ್ನಿ ಸಿದ್ದಪಡಿಸಿದ್ದ ಮಹಿಳೆಯರು ಬುಧವಾರ ಬೆಳಗ್ಗೆಯಿಂದಲೇ ಬದನೆಕಾಯಿ, ಹೆಸರು, ಮಡಕೆ ಕಾಳು ಪಲ್ಯ, ಉಸುಳಿ, ಹಿಟ್ಟಿನ ವಡೆ, ಮೊಸರಿನ ಉಂಡೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಬಳಿಕ ನೆರೆ-ಹೊರೆ ಮನೆಯವರಿಗೆ ಜೋಳ, ಸಜ್ಜಿಯ ಖಡಕ್ ರೊಟ್ಟಿಯನ್ನು ಹಂಚಿದರು. ಕೆಲವರು ಪರಸ್ಪರ ವಿನಿಮಯ ಮಾಡಿಕೊಂಡರು.