Advertisement

ನಿವೇಶನ ಒದಗಿಸಲು ಪ್ರಸ್ತಾವನೆ ಸಲ್ಲಿಸಿ

01:44 PM Dec 11, 2019 | Naveen |

ಗದಗ: ಸ್ಥಳೀಯ ಸಂಸ್ಥೆಗಳಿಂದ ವಸತಿ, ಬಹುಮಹಡಿ ಅಥವಾ ಗುಂಪು ಮನೆಗಳ ಬದಲಿಗೆ ಸ್ವಚ್ಛತಾ ಕಾರ್ಮಿಕರಿಗೆ ಸ್ವಂತ ನಿವೇಶನ ಒದಗಿಸಲು ಅನುಮತಿಗಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಲ್ಲಿನ ಜಿಲ್ಲಾಡಳಿತ ಭವನದ ಜಿ.ಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಹಾಗೂ ಸಫಾಯಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಸ್ವಚ್ಛತಾ ಕೆಲಸಗಾರರಿಗೆ ನೀಡುವ ವಿವಿಧ ಸೇವಾ ಸೌಲಭ್ಯ ಕುರಿತು ಪರಿಶೀಲಿಸಿ ಮಾತನಾಡಿದ ಅವರು, ಬಹುಮಹಡಿ, ಗುಂಪು ಮನೆಗಳಿಂದ ಬಹುತೇಕ ಅವಿಭಕ್ತ ಕುಟುಂಬ ವ್ಯವಸ್ಥೆ ಇರುವ ಸಫಾಯಿ ಕರ್ಮಚಾರಿ ಕುಟುಂಬಗಳ ವಾಸಕ್ಕೆ ತೊಂದರೆಯಾಗುತ್ತದೆ. ವಸತಿ ಯೋಜನೆಗಳಡಿ, ಸ್ವಂತ ನಿವೇಶನ ಕಲ್ಪಿಸಬೇಕು. ಅವರ ಅವಲಂಬಿತರಿಗೆ ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಯಲ್ಲಿರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ಕುರಿತು ದೇಶದ ಸರ್ವೋತ್ಛ ನ್ಯಾಯಾಲಯ 2007ರಲ್ಲಿ ನೀಡಿದ ತೀರ್ಪಿನನ್ವಯ ಬಾಕಿ ಉಳಿದ ನೇಮಕಾತಿ ಅವಧಿ ವಿಸ್ತರಿಸಬೇಕು. ಕ್ಷೇಮಾಭಿವೃದ್ಧಿ ಯೋಜನೆಯಡಿ ಆದ ನೇಮಕಾತಿ ಹಾಗೂ 2017ರ ಹೊಸ ನಿಯಮಗಳ ರೀತ್ಯ ಆಗಿರುವ ಸಫಾಯಿ ಕಾರ್ಮಿಕರ ನೇಮಕಾತಿ ಕುರಿತು ತಮಗೆ ಮಾಹಿತಿ ನೀಡಬೇಕು ಎಂದು ಜಗದೀಶ ಹಿರೇಮನಿ ಸೂಚಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ರುದ್ರೇಶ ಮಾತನಾಡಿ, ಜಿಲ್ಲೆಯ 9 ಸ್ಥಳೀಯ ಸಂಸ್ಥೆಯಲ್ಲಿ ಒಟ್ಟು 671 ಮಂಜೂರಾದ ಹುದ್ದೆಗಳ ಪೈಕಿ 259 ಖಾಯಂ, 234 ಗುತ್ತಿಗೆ ಆಧಾರಿತ ಸಫಾಯಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 2017ರ ನೇಮಕಾತಿ ನಿಯಮಾವಳಿಯಂತೆ ಒಟ್ಟು 170 ಜನರ ನೇಮಕಾತಿಗೆ ಕ್ರಮ ಜರುಗಿಸಲಾಗುತ್ತಿದೆ. 239 ಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿಯಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ 6 ಲಕ್ಷ ಕೇಂದ್ರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 1.50 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 70 ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಮಂಜೂರಾತಿ ಇದ್ದು, 40 ಮನೆಗಳು ಪೂರ್ಣಗೊಂಡಿವೆ. ಗದಗ-ಬೆಟಗೇರಿ ನಗರಸಭೆಯ 135 ವಸತಿ ರಹಿತ ಕಾರ್ಮಿಕರಿಗೆ ವಸತಿ ಸಂಕೀರ್ಣ ನಿರ್ಮಾಣ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲ ಕಾರ್ಮಿಕರಿಗೆ ತ್ರೈಮಾಸಿಕ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಕಾರ್ಯನಿರ್ವಹಣೆ ವೇಳೆ ಕಡ್ಡಾಯವಾಗಿ ಸುರಕ್ಷತಾ ಪರಿಕರ ಬಳಸಲು ತಿಳಿಹೇಳಲಾಗುತ್ತದೆ. ಡಿ.27ರಂದು ಪೌರ ಕಾರ್ಮಿಕರಿಗಾಗಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ರುದ್ರೇಶ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವತ್ಛತಾ ಕಾರ್ಮಿಕರಿಗೆ ಕಾಳಜಿ ವಹಿಸಿ ಎಲ್ಲ ರೀತಿಯ ಅಗತ್ಯದ ಸುರಕ್ಷತಾ ಪರಿಕರ ಅವರಿಗೆ ಉಪಹಾರ, ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ಸಂಬಳ, ವೈದ್ಯಕೀಯ ತಪಾಸಣೆ, ವಸತಿ ಯೋಜನೆಯಡಿ ಮನೆ ನೀಡುವಂತೆ ಅವರ ಪುನರ್ವಸತಿಗೆ ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚಿನ ನೆರೆ ಹಾವಳಿ ಸಂದರ್ಭದಲ್ಲಿ ಹಾಗೂ ಗದಗ-ಬೆಟಗೇರಿ ನಗರಸಭೆ ಮಾಲ್ಕಿ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಎಲ್ಲ 9 ಸಂಸ್ಥೆಗಳಲ್ಲಿ ಪೌರ ಕಾರ್ಮಿಕರು, ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಆಯೋಗದ ಸದಸ್ಯ ಜಗದೀಶ ಹಿರೇಮನಿ ಮಾತನಾಡಿ, ಹಲವಾರು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಕಾರ್ಮಿಕರ ನೇಮಕಾತಿ ಮಾಹಿತಿ ಅಪ್‌ ಲೋಡ್‌ ಮಾಡುವಾಗ ಹಳಬರನ್ನು ಬಿಟ್ಟು, ಹೊಸಬರನ್ನು ನೇಮಕಾತಿ ಮಾಡಿದ ಬಗ್ಗೆ ದೂರುಗಳಿವೆ. ಹೋಳೆಆಲೂರಿನಲ್ಲಿ 5 ಜನ ಹಳಬರ ಪೈಕಿ ಮೂವರು ಹಳೆ ಸಿಬ್ಬಂದಿ ಕೈಬಿಡಲಾಗಿದೆ. ಆದುದ್ದರಿಂದ ಜಿಪಂ ಸಿಇಒ ಅವರು ತಕ್ಷಣ ಪಿಡಿಒಗಳ ಸಭೆ ಕರೆದು, ಸ್ವಚ್ಛತಾ ಕೆಲಸಗಾರರ ನೇಮಕಾತಿ ಕುರಿತು 15-20 ವರ್ಷದಿಂದ ಕೆಲಸ ಮಾಡುವ ಹಳಬರು ಎಷ್ಟು ಜನ ಇದ್ದಾರೆ. ಅವರನ್ನು ಸೇವೆಯಿಂದ ಕೈಬಿಟ್ಟಿರುವುದು ಏಕೆ ಎಂದು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ರೈಲ್ವೆ ನಿಲ್ದಾಣ, ಆರೋಗ್ಯ ಇಲಾಖೆ, ಆಸ್ಪತ್ರೆಗಳಲ್ಲಿ, ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ, ಖಾಸಗಿ ವಿದ್ಯಾಸಂಸ್ಥೆ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಶುಚಿತ್ವ ಕೆಲಸಗಾರರಿಗೆ ಸರಿಯಾದ ಸುರಕ್ಷತಾ ಉಪಕರಣ, ಕನಿಷ್ಟ ವೇತನ ನೀಡುವಿಕೆ ಕುರಿತಂತೆ ಜಗದೀಶ ಹಿರೇಮನಿ ಅವರು ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡಿದರಲ್ಲದೇ ಕಾರ್ಮಿಕ ಇಲಾಖೆ ಈ ಕುರಿತಂತೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್‌ ಮುಧೋಳ, ವಿವಿಧ ಇಲಾಖೆಯ ಅಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಾಭಿವೃದ್ಧಿ ಕೋಶ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಪೌರ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next