Advertisement

ಗ್ರಾಮೀಣದಲ್ಲಿ ಅತ್ಯುತ್ಸಾಹದ ಮತದಾನ

04:39 PM Apr 24, 2019 | Team Udayavani |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಅತ್ಯುತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

Advertisement

ಈ ಬಾರಿಯ ಲೋಕಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಮಂಗಳವಾರ ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ, ಎಲ್ಲ ಬೂತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು ತಮ್ಮ ಪುತ್ರರು ಹಾಗೂ ಮೊಮ್ಮಕ್ಕಳ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೊಂದೆಡೆ ಪಟ್ಟಣದ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿನ ಪಿಂಕ್‌ ಮತಗಟ್ಟೆಯಲ್ಲಿ ಮತ ಚಲಾಯಿಸಲು ಮಹಿಳೆಯರು ನಿರುತ್ಸಾಹ ತೋರಿದ್ದು ಕಂಡು ಬಂದಿತು.

ಆಟೋ ವ್ಯವಸ್ಥೆ: ಮತದಾನದಿಂದ ಯಾರೂ ವಂಚಿತರಾಗಬಾರದು ಮತದಾನದ ಪ್ರಮಾಣ ಹೆಚ್ಚಿಸಬೇಕೆನ್ನುವ ದಿಸೆಯಲ್ಲಿ ಜಿಲ್ಲಾಡಳಿತ ಕಳೆದೊಂದು ತಿಂಗಳಿಂದ ಮತದಾನದ ಮಹತ್ವ ಸಾರಿ ಹೇಳುತ್ತಿದೆ. ಅದರಂತೆಯೇ ವೃದ್ಧರು ಹಕ್ಕು ಚಲಾವಣೆಯಿಂದ ಹಿಂದೆ ಸರಿಯ ಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತದಿಂದಲೇ ಆಯಾ ಬೂತ್‌ಗಳಿಗೆ ಪ್ರತ್ಯೇಕ ಆಟೋ ವ್ಯವಸ್ಥೆ ಕಲ್ಪಿಸುವ ಮೂಲಕ ವೃದ್ಧರಿಗೆ ಮತ ಚಲಾವಣೆ ಮಾಡುವ ಅವಕಾಶ ಕಲ್ಪಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು.

ಬಿಸಿಲಿನ ನರ್ತನ: ಬೆಳಿಗ್ಗೆಯಿಂದ ಮತಗಟ್ಟೆಗಳು ಜನರಿಂದ ತುಂಬಿದ್ದವು. ಆದರೆ ಬೆಳಿಗ್ಗೆ 11ಗಂಟೆ ಸುಮಾರಿಗೆ ಮತಗಟ್ಟೆಯಲ್ಲಿ ಜನರು ಸುಳಿಯಲೇ ಇಲ್ಲ. ಬಿಸಿಲಿನ ಪ್ರಖರತೆ ಗಂಟೆ ಕಳೆದಂತೆ ಏರುತ್ತಲೇ ಇತ್ತು. ಇದರಿಂದ ಸಾರ್ವಜನಿಕರು ಬಿಸಿಲಿನ ಪ್ರಖರತೆ ಕಂಡು ಸೂರ್ಯ ದೇವನಿಗೆ ಹಿಡಿಶಾಪ ಹಾಕಿದರು.

ಸ್ವಾತಂತ್ರ್ಯ ಹೋರಾಟಗಾರನಿಗೆ ಮತ ಸಂಭ್ರಮ
ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ 102 ವರ್ಷದ ಶತಾಯುಷಿ ವೆಂಕೂಸಾ ಬಾಂಡಗೆ ಅವರು ಕುಟುಂಬ ಸಮೇತ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿನ ಮತಗಟ್ಟೆಗೆ ಆಗಮಿಸಿ ಹಕ್ಕನ್ನು ಚಲಾಯಿಸಿದರು. ವೆಂಕೂಸಾ ಭಾಂಡಗೆ ಅವರ ಕಡ್ಡಾಯ ಮತದಾನದ ವಿಡಿಯೋ ಕಳೆದ ಮೂರ್‍ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಮನ್ನಣೆಗೆ ಮಾತ್ರವಾಗಿತ್ತು. ಸ್ವಾತಂತ್ರ್ಯ ಭಾರತದಿಂದ ಹಿಡಿದು ಈವರೆಗೂ 17 ಲೋಕಸಭೆ, 15 ವಿಧಾನಸಭೆ ಜೊತೆಗೆ 14 ಪುರಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ನಿಷ್ಠೆಯಿಂದ ಚಲಾಯಿಸಿದರು. ಯಾವೊಂದು ಚುನಾವಣೆಗೂ ಮತದಾನವನ್ನು ನಿರ್ಲಕ್ಷ್ಯಿಸದೇ ಎಂತಹ ಸಂದರ್ಭದಲ್ಲಿಯೂ ತಪ್ಪದೇ ಮತ ಚಲಾಯಿಸಿದ್ದೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ವೆಂಕುಸಾ ಭಾಂಡಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.