ಈಗಾಗಲೇ ಕೆಲವೊಂದು ಗ್ರಾಮಗಳಲ್ಲಿ ಮೆಕ್ಕೆಜೋಳ ಕಟಾವು ಆರಂಭವಾಗಿ ಒಣಗಿಸುವ, ಮೆಕ್ಕೆಜೋಳ ಕಾಳುಬಿಡಿಸಿ ಒಣಗಿಸುವ ಪ್ರಕ್ರಿಯೆ ನಡೆದಿದೆ. ಈ ವರ್ಷ ಮೆಕ್ಕೆಜೋಳ ಕಟಾವಿಗೆ ಬಂದು 15ರಿಂದ 20 ದಿನವಾಗಿದೆ. ಆದರೂ ಮಳೆಯಿಂದಾಗಿ ತೆನೆ ಮುರಿಯುದಂತಾಗಿದೆ. ಅಕಸ್ಮಾತ್ ತೆನೆ ಮುರಿದರೆ ಒಣಗಿಸಲು ಜಾಗವಿಲ್ಲ, ಹಾಗೆಯೇ ರಾಶಿ ಹಾಕಿದರೆ ಕಾಳು ಮುಗ್ಗಲು ಹಿಡಿದು ಕಪ್ಪಾಗುತ್ತದೆ. ಕಾಳು ಕಪ್ಪಾದರೆ ಬೆಲೆ ಕಳೆದುಕೊಳ್ಳುತ್ತದೆ. ಇನ್ನು 15 ದಿನದಲ್ಲಿ ಜೋಳ ಮುರಿಯದಿದ್ದರೆ ಕೈಗೆ ಬಂದಿದ್ದು, ಬಾಯಿಗೆ ಬರದಂತಾಗುತ್ತದೆ.
Advertisement
ನರೇಗಲ್ಲ ಹೋಬಳಿ, ಗಜೇಂದ್ರಗಡ ಭಾಗ ಸೇರಿದಂತೆ ಅಂದಾಜು 9512 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ರೈತರು ಕೃಷಿ ಇಲಾಖೆ ನಿರೀಕ್ಷೆಗಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸತತ ಮಳೆಯಿಂದಾಗಿಮೆಕ್ಕೆಜೋಳದ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿತು. ಇದರಿಂದ ಬಹಳಷ್ಟು ಕಡೆ ರೈತರು ಹರಗಿ ಮತ್ತೂಮ್ಮೆ ಬಿತ್ತಿದ್ದರು.
ಮಳೆಯಿಂದಾಗಿ ಈ ವರ್ಷ ಅಂದಾಜು 7972 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ.
ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ 1850 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಖರೀದಿ ಕೇಂದ್ರ ಆರಂಭಿಸದಿದ್ದರೆ ಬೆಂಬಲ ಬೆಲೆ ಘೋಷಿಸಿಯೂ ಪ್ರಯೋಜನ ಇಲ್ಲದಂತಾಗುತ್ತದೆ. ಅಲ್ಲದೇ ನರೇಗಲ್ಲ ಹೋಬಳಿಯಲ್ಲಿ ಕಳೆದ
ಹತ್ತು ವರ್ಷಗಳಿಂದ ಖರೀದಿ ಕೇಂದ್ರ ಆರಂಭಗೊಂಡಿಲ್ಲ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ 1200ರಿಂದ 1300 ರೂ. ವರೆಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದರ ಕುಸಿಯುತ್ತಿರುವ ಕಾರಣ ರೈತರು ಆತಂಕಗೊಂಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ಭಾಗದಲ್ಲಿ ಕೂಡಲೇ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿದರೆ
ಅನುಕೂಲವಾಗುತ್ತಿದೆ ಎಂದು ತೋಟಗಂಟಿ ರೈತ ಉಮೇಶಗೌಡ ಪಾಟೀಲ ಆಗ್ರಹಿಸಿದ್ದಾರೆ. – ಸಿಕಂದರ ಎಂ. ಆರಿ