ಗದಗ: ವರ್ಷದಿಂದ ವರ್ಷಕ್ಕೆ ಕೈಮಗ್ಗಗಳು ನಶಿಸಿ ಹೋಗುತ್ತಿದ್ದು, ಕೈಮಗ್ಗವನ್ನು ಉಳಿಸಲು ಕೈಮಗ್ಗ ನೇಕಾರರ ಬಲ, ಶಕ್ತಿ, ಆರ್ಥಿಕ ಬೆಂಬಲ ನೀಡಬೇಕಿದೆ ಎಂದು ಕಾನೂನು, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಅಭಿವೃದ್ಧಿ ಆಯುಕ್ತರು, ಜವಳಿ ಮಂತ್ರಾಲಯ ಸಂಯುಕ್ತ ಆಶ್ರಯದಲ್ಲಿ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಟಗೇರಿ ಭಾಗದಲ್ಲಿನ ಕೆ.ಎಚ್.ಡಿ.ಸಿ. ನೇಕಾರರು ರಾಜ್ಯದಲ್ಲೇ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿದ್ದರು. ವಿದೇಶಗಳಿಗೂ ರಫ್ತಾಗುತ್ತಿದ್ದವು. ಆದರೆ, ವರ್ಷದಿಂದ ವರ್ಷಕ್ಕೆ ಕೈಮಗ್ಗ ನಿಂತು ಹೋದವು. ಪಾವರ್ ಲೂಮ್ ಬದಲಾದವು. 25 ಸಾವಿರ ಇದ್ದ ಕೈಮಗ್ಗಗಳು 3 ಸಾವಿರಕ್ಕಿಳಿದವು. ಕೈಮಗ್ಗ ನೇಕಾರರ ಆದಾಯ ಕುಸಿಯಿತು. ಮುಂದಿನ ದಿನಗಳಲ್ಲಿ ಅಳಿದುಳಿದಿರುವ ಕೈಮಗ್ಗಗಳು ಉಳಿಯುತ್ತವೆ ಎಂಬುದು ಅನುಮಾನ ಮೂಡಿಸಿದೆ ಎಂದರು.
ಕೈಮಗ್ಗ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಕುಣಿಮಗ್ಗವನ್ನು ನೋಡಿ ಅರ್ಥಮಾಡಿಕೊಳ್ಳಬೇಕು. ಕೈಮಗ್ಗದ ಇತಿಹಾಸ ಆರಂಭವಾಗುವುದೇ ಕುಣಿಮಗ್ಗದಿಂದ. ಕೈಮಗ್ಗದಿಂದ ಉತ್ಪಾದನೆಯಾದ ಬಟ್ಟೆಗಳು ಅತ್ಯಂತ ಗುಣಮಟ್ಟದ್ದಾಗಿವೆ. ಆದರೆ, ನಮ್ಮೆಲ್ಲರ ನಿರ್ಲಕ್ಷ್ಯದ ಪರಿಣಾಮ ಕೈಮಗ್ಗಗಳು ಅಂತ್ಯದ ಹಂತಕ್ಕೆ ಇಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಸೀರೆ ಉಡುವುದನ್ನು ಕಡಿಮೆ ಮಾಡಿರುವುದರಿಂದಲೂ ಕೈಮಗ್ಗ ನಶಿಸಲು ಪ್ರಮುಖ ಕಾರಣವಾಗಿದೆ. ಹೊಸಬರು ಹಬ್ಬ ಹರಿದಿನಗಳಲ್ಲಿ ಮಾತ್ರ ಸೀರೆ ಧರಿಸುವುದನ್ನು ರೂಢಿಸಿಕೊಂಡಿದ್ದಾರೆ. ಸೀರೆಯನ್ನು ಧರಿಸುವವರೇ ಇಲ್ಲದಾಗಿದೆ. ಆದ್ದರಿಂದ ಕೈಮಗ್ಗ ನೇಕಾರರು ಹೊಸ ವಿನ್ಯಾಸದ ಉಡುಪುಗಳನ್ನು ತಯಾರಿಸುವ ಮೂಲಕ ಕೈಮಗ್ಗ ನೇಕಾರಿಕೆಗೆ ಚೈತನ್ಯ ತುಂಬಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು. ಕೈಮಗ್ಗ ಸಲಹೆಗಾರರಾದ ವೃಂದಾ ಶೇಖರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಶೋಕ ಬಣ್ಣದ, ಅನಿಲ ಗಡ್ಡಿ, ಶಿವಕುಮಾರ ಪಾಟೀಲ, ಮಲ್ಲಿಕಾರ್ಜುನ ಬೆಲ್ಲದ, ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ ಸೇರಿ ಅನೇಕರು ಇದ್ದರು.