Advertisement

ಖಾಸಗಿ ಶಾಲೆಗೆ ಸೆಡ್ದು ಹೊಡೆದ ಸರ್ಕಾರಿ ಶಾಲೆ 

04:18 PM Mar 27, 2019 | Naveen |
ಗದಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ನಲಿ-ಕಲಿ ಎಂದರೆ ಕೆಲ ಶಿಕ್ಷಕರಿಗೂ ನಿರುತ್ಸಾಹ. ಆದರೆ, ಇಲ್ಲೊಂದು ಶಾಲೆಯಲ್ಲಿ ನಲಿ-ಕಲಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಖಾಸಗಿ ಶಾಲೆಯ ಮಕ್ಕಳನ್ನೂ ತನ್ನತ್ತ ಸೆಳೆಯುತ್ತಿದೆ.
ಗದಗ ತಾಲೂಕಿನ ಅಡವಿಸೋಮಾಪುರ ದೊಡ್ಡ ತಾಂಡಾ ಜಲಾಶಂಕರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದ್ದು, ಗುಣಮಟ್ಟದ ಶಿಕ್ಷಣದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. 1 ರಿಂದ 5ನೇ ತರಗತಿವರೆಗೆ 47 ಗಂಡು, 47 ಹೆಣ್ಣು
ಮಕ್ಕಳು ಸೇರಿ ಒಟ್ಟು 94 ವಿದ್ಯಾರ್ಥಿಗಳಿದ್ದಾರೆ, ಎಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರೇ. ಆ ಪೆೃಕಿ 1ರಿಂದ 3ನೇ ತರಗತಿವರೆಗೆ ತಲಾ 17ರಂತೆ ಒಟ್ಟು 51 ಮಕ್ಕಳು ನಲಿ-ಕಲಿಯಲ್ಲಿದ್ದಾರೆ. ಮುಖ್ಯಗುರು, ಮೂವರು ಸಹ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ.
ನಲಿ- ಕಲಿ ಹಂತದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಅನ್ವಯ ಐದು ತಟ್ಟೆಗಳಲ್ಲಿ ವರ್ಗೀಕರಿಸಲಾಗುತ್ತದೆ. ತರಗತಿಯ ಕೊಠಡಿಯೊಂದರಲ್ಲಿ ನೆಲದ ಮೇಲೆ ಐದು ತಟ್ಟೆಯಾಕಾರದಲ್ಲಿ ಬಣ್ಣ ಬಳಿದು ಮಕ್ಕಳನ್ನು ಕೂರಿಸಲಾಗುತ್ತದೆ. ಮಕ್ಕಳು ಗೋಡೆ ಮೇಲೆ ತನ್ನ ಚಟುವಟಿಕೆಗಳನ್ನು ಬರೆಯುವುದು ಸಾಮಾನ್ಯ. ಆದರೆ, ಅಡವಿಸೋಮಾಪುರ ದೊಡ್ಡ ತಾಂಡಾದಲ್ಲಿರುವ ಶಾಲೆ ವಿಭಿನ್ನ. ದಾನಿಗಳಿಂದ ಸುಮಾರು 18 ಸಾವಿರ ಮೌಲ್ಯದ ತಟ್ಟೆಯಾಕಾರದ ಐದು ಕಬ್ಬಿಣದ ಡೆಸ್ಕ್ ಹಾಗೂ 15 ಸಾವಿರ ಮೊತ್ತದ ಬಣ್ಣ ಬಣ್ಣದ ಮಕ್ಕಳ ಕುರ್ಚಿಗಳನ್ನು ದೇಣಿಗೆ ಪಡೆಯಲಾಗಿದೆ. ಖಾಸಗಿ ಶಾಲೆಯಂತೆ ಆ ಮೇಜಿನ ಮೇಲೆಯೇ ಮಕ್ಕಳು ಅಭ್ಯಾಸದ ಚಟುವಟಿಕೆಗಳನ್ನು ಮಾಡುತ್ತಾರೆ. ತರಗತಿಯಲ್ಲಿ ಕಲಿಕಾ ತೋರಣಗಳೊಂದಿಗೆ ಕಟ್ಟಿರುವ ಗುಬ್ಬಚ್ಚಿ ಗೂಡುಗಳೂ ಮಕ್ಕಳನ್ನು ಆಕರ್ಷಿಸುತ್ತಿವೆ.
ಕಲಿಕಾ ಗುಣಮಟ್ಟಕ್ಕೂ ಒತ್ತು: ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನೇಕ ಕ್ರಮ ಕೈಗೊಂಡಿದ್ದಾರೆ. ನಲಿ-ಕಲಿಗೆ ಸರ್ಕಾರ ಸರಬರಾಜು ಮಾಡಿರುವ ಕಲಿಕಾ ಸಾಮಗ್ರಿಗಳೊಂದಿಗೆ ಶಿಕ್ಷಕರು ಮರದ ತುಂಡುಗಳಿಂದ ಚೌಕ, ಆಯತ, ತ್ರಿಭುಜಗಳ ಮಾದರಿಯ ಹತ್ತಾರು ಆಕೃತಿಗಳು ಕೆಲವಾರು ಕಾರ್ಡ್‌ ತಯಾರಿಸಿದ್ದಾರೆ. ಒಂದೊಂದು ಮಗ್ಗುಲದಲ್ಲೂ ಕನ್ನಡ, ಇಂಗ್ಲಿಷ್‌ ಭಾಷೆಯ ಬಿಡಿ ಮತ್ತು ಗುಂಪು ಅಕ್ಷರ ಬರೆದಿದ್ದಾರೆ. ಅದರಂತೆ ಗಣಿತದ ಸಂಖ್ಯೆಯಗಳನ್ನೂ ಬರೆಯಲಾಗಿದೆ. ಅಭ್ಯಾಸದ ವೇಳೆ ಮಕ್ಕಳು ಇಂತಹ ಆಕೃತಿ ಬಳಸುವುದರಿಂದ ಅಕ್ಷರ ಮತ್ತು ಸಂಖ್ಯೆಯಗಳನ್ನು ತಕ್ಷಣ ಗುರುತಿಸುತ್ತಾರೆ. ಸಂಕಲನ, ವ್ಯವಕಲನ ಹಾಗೂ ಗುಣಾಕಾರದ ಲೆಕ್ಕಗಳನ್ನು ಸರಳವಾಗಿ ತಿಳಿದುಕೊಳ್ಳುತ್ತಾರೆ. ಕಲಿಕೆಯ ಬುನಾದಿ ಗಟ್ಟಿಯಾಗುತ್ತದೆ ಎನ್ನುತ್ತಾರೆ ಶಾಲೆ ಶಿಕ್ಷಕ ಎಸ್‌.ವಿ.ಅಂಬೋರೆ.
2011-12ರಿಂದ ಈವರೆಗೆ ಒಟ್ಟು 41 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ, ನವೋದಯ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಅಡವಿಸೋಮಾಪುರ ದೊಡ್ಡ ತಾಂಡಾದಲ್ಲಿ ಬಹುತೇಕ ಲಂಬಾಣಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಪೆೃಕಿ ಬರ ಮತ್ತಿತರೆ ಕಾರಣದಿಂದ ಬಹುತೇಕರು ಗೋವಾಕ್ಕೆ ಗುಳೆ ಹೋಗುತ್ತಾರೆ. ಊರಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರನ್ನು ಮಾತ್ರ ಬಿಟ್ಟಿರುತ್ತಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೂ ಮಕ್ಕಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂಬುದು ವಿಶೇಷ.
ಈ ಹಿಂದೆ ಯಾವುದೋ ಕಾರಣದಿಂದ ಶಾಲೆಯ ಎಲ್ಲ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಿ ನಮ್ಮನ್ನು ಇಲ್ಲಿಗೆ ನಿಯೋಜಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರವೂ ದೊರೆಯುತ್ತಿದೆ. ಸರ್ಕಾರದಿಂದ ಲಭ್ಯವಿಲ್ಲದ ಸೌಲಭ್ಯಗಳನ್ನು ಗ್ರಾಮಸ್ಥರು, ದಾನಿಗಳಿಂದ ಪಡೆಯುತ್ತೇವೆ. ಮಕ್ಕಳ ಭದ್ರ ಬುನಾದಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ನಲಿ-ಕಲಿ ಅನುಷ್ಠಾನಕ್ಕೆ ವಿಶೇಷವಾಗಿ ಒತ್ತು ನೀಡಿದ್ದೇವೆ. ಹೀಗಾಗಿ 2014ರಲ್ಲಿ ಗ್ರಾಮದಿಂದ ಗದಗಿನ ವಿವಿಧ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 2-3ನೇ ತರಗತಿಯ 34 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ವೈ.ಎಸ್‌. ಅರ್ಕಸಾಲಿ,
ಮುಖ್ಯಶಿಕ್ಷಕ
ಶಾಲೆಯಲ್ಲಿ ಶಿಕ್ಷಕರೇ ದಾನಿಗಳ ಮೂಲಕ ಶಾಲೆಯಲ್ಲಿ ಡೆಸ್ಕ್, ಕುರ್ಚಿ, ಮಕ್ಕಳಿಗೆ ಐಡಿ ಕಾರ್ಡ್‌ ವ್ಯವಸ್ಥೆ ಮಾಡಿದ್ದಾರೆ. ಶಾಲೆ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಮಕ್ಕಳೂ ಚೆನ್ನಾಗಿ ಓದುತ್ತಿದ್ದಾರೆ. ನಮಗೂ ಖುಷಿ ಇದೆ.
ಕೃಷ್ಣ ರಾಠೊಡ,
ಎಸ್‌ಡಿಎಂಸಿ ಅಧ್ಯಕ್ಷ 
„ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next