Advertisement

26ರಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ

09:19 AM Jan 24, 2019 | Team Udayavani |

ಗದಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಜ. 26ರಿಂದ ಎರಡು ದಿನಗಳ ಕಾಲ ನಗರದ ಹಾತಲಗೇರಿ ರಸ್ತೆಯಲ್ಲಿರುವ ಅಂಜುಮನ್‌ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹೈದರಾಬಾದ್‌-ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರ ರೈ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಭಾಗವಾಗಿ ಜ. 26ರಂದು ಬೆಳಗ್ಗೆ 9.30ಕ್ಕೆ ನಗರದ ತೋಂಟದಾರ್ಯ ಮಠದ ಮಹಾಧ್ವಾರದವರೆಗೆ ನಡೆಯಲಿರುವ ಮೆರವಣಿಗೆಗೆ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಚಾಲನೆ ನೀಡುವರು. ಮಹಿಳೆಯರ 12 ಕಲಾ ತಂಡಗಳು, 100 ಮಹಿಳೆಯರಿಂದ ಪೂರ್ಣಕುಂಭ ಸೇರಿದಂತೆ ವರ್ಣರಂಜಿತ ಮೆರವಣಿಗೆ ನಡೆಯುವುದು.

ಬೆಳಗ್ಗೆ 10:30ಕ್ಕೆ ಆರಂಭಗೊಳ್ಳುವ ಮಹಿಳಾ ಸಮಾವೇಶವನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರಿ ಪದ್ಮಲತಾ ನಿರಂಜನ್‌ಕುಮಾರ ಉದ್ಘಾಟಿಸುವರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರು ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡುವರು. ಸಾಧಕ ಮಹಿಳೆಯರನ್ನು ಮಾಜಿ ಶಾಸಕ ಡಿ.ಆರ್‌. ಪಾಟೀಲ ಸನ್ಮಾನ ಮಾಡುವರು. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್. ಮಂಜುನಾಥ್‌ ಅವರು ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸುವರು. ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು.

ಮಧ್ಯಾಹ್ನ 2 ಗಂಟೆಗೆ ‘ಸ್ವ-ಉದ್ಯೋಗದಿಂದ ಮಹಿಳಾ ಸ್ವಾವಲಂಬನೆ’ ಕುರಿತ ಗೋಷ್ಠಿಯಲ್ಲಿ ರೋಣ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತ ಕಳಕಪ್ಪ ಬಂಡಿ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್. ಮಂಜುನಾಥ ಪ್ರಧಾನ ಭಾಷಣ ಮಾಡಲಿದ್ದು, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ ಡಾ| ಸುಧಾವೆ ಮಂಕಣಿ ಉಪನ್ಯಾಸ ನೀಡುವರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವನಿ ವಿ. ಜಗತಾಪ ಅಧ್ಯಕ್ಷತೆಯಲ್ಲಿ ‘ಆಧುನಿಕ ಬದುಕಿನಲ್ಲಿ ಮಹಿಳಾ ಸಬಲೀಕರಣ ಮತ್ತು ಸವಾಲುಗಳು’ ವಿಷಯ ಕುರಿತು ವಿಚಾರ ಗೋಷ್ಠಿಗಳು ಹಾಗೂ ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

Advertisement

ಜ. 27ರಂದು ಬೆಳಗ್ಗೆ 10ಕ್ಕೆ ಸಹಕಾರ ಇಲಾಖಾ ಅಧಿಕಾರಿಗಳೊಂದಿಗೆ ಮಹಿಳೆಯರ ಸಂವಾದ ಆಯೋಜಿಸಲಾಗಿದೆ. ಮಧ್ಯಾಹ್ನ 12:30ಕ್ಕೆ ಮಹಿಳಾ ಆರೋಗ್ಯ ವರ್ಧನೆಗೆ ನೈರ್ಮಲ್ಯ ಮತ್ತು ಶೌಚಾಲಯದ ಬಳಕೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶಿರಹಟ್ಟಿ ಯ ಜ| ಫಕ್ಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಹಿಳಾ ಸಮಾವೇಶದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪಾಲ್ಗೊಳ್ಳುವರು. ಧರ್ಮಸ್ಥಳ ಯೋಜನೆಯ ಹೈದರಾಬಾದ್‌- ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರ ರೈ ಸಮಾರೋಪ ಭಾಷಣ ಮಾಡುವರು.

ಇದೇ ವೇಳೆ ಮಹಿಳಾ ಸಾಧಕರು ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಬಳಿಕ ಮಂಗಳೂರಿನ ಅಶೋಕ ಪೊಳಲಿಯವರಿಂದ ಮುಖವಾಡ ನೃತ್ಯಗಳು ಹಾಗೂ ಝೀ ಟಿವಿ ಕಲಾವಿದರಿಂದ ಸಂಗೀತ ಮತ್ತು ಕಾಮಿಡಿ ಕಿಲಾಡಿಗಳಿಂದ ವಿಶೇಷ ಮನೋರಂಜನೆ ಕಾರ್ಯ ಕ್ರಮ ಜರುಗಲಿದೆ ಎಂದು ತಿಳಿಸಿದರು.

ಈ ಮಹಿಳಾ ಸಮಾವೇಶದಲ್ಲಿ ಸುಮಾರು 20 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಮಹಿಳೆಯರ ಸಮಸ್ಯೆಗಳ ಕುರಿತು 4 ಮಹಿಳಾ ವಿಚಾರ ಗೋಷ್ಠಿಗಳು ಮತ್ತು ಸಂವಾದದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗುತ್ತಿದೆ. ಸಿರಿ ಧಾನ್ಯಗಳ ಶುಚಿ-ರುಚಿಯಾದ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ, ಮಹಿಳೆಯರ ಗೃಹೋಪಯೋಗಿ ವಸ್ತುಗಳು, ಕೃಷಿ ಯಾಂತ್ರಿಕರಣ, ಕರಕುಶಲ ಇತ್ಯಾದಿ 150 ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

ಮಹಿಳಾ ಸಮಾವೇಶದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ಕ್ಷೇತ್ರ ಯೋಜನಾಧಿಕಾರಿ ಸುಕೇಶ ಎ.ಎಸ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next