ಗದಗ: ಇಲ್ಲಿನ ರಂಗನವಾಡದ ವೃದ್ಧೆಗೆ ಕೋವಿಡ್ ಸೋಂಕು ದೃಢಪಟ್ಟು ವಾರ ಕಳೆದರೂ ಸೋಂಕಿನ ಮೂಲ ಇನ್ನೂ ಬಯಲಾಗಿಲ್ಲ. ಸೋಂಕಿತ ವೃದ್ಧೆಯೊಂದಿಗೆ (ಪಿ. 166) ಪ್ರಾಥಮಿಕ ಸಂಪರ್ಕದಲ್ಲಿದ್ದವರ ಸಂಖ್ಯೆ ಶತಕದ ಹತ್ತಿರಕ್ಕೆ ಸಮೀಪಿಸಿದೆ. ಇದೀಗ ದ್ವಿತೀಯ ಸಂಪರ್ಕದಲ್ಲಿದ್ದವರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ. ಆದರೂ ಸೋಂಕಿನ ಮೂಲ ಭೇದಿಸುವುದು ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದ್ದು, ತನಿಖೆಯ ಹೊಣೆ ಎಸ್‌ಪಿ ಹೆಗಲೇರಿದೆ.
ನಗರದ ರಂಗನವಾಡದ ವೃದ್ಧೆಗೆ ಏ. 7ರಂದು ಕೋವಿಡ್-19 ಸೋಂಕು ದೃಢಪಟ್ಟಿರುವುದನ್ನು ಜಿಲ್ಲಾಡಳಿತ ಪ್ರಕಟಿಸಿತು. ವೃದ್ಧೆಗೆ ಸೋಂಕು ತಗುಲಿದ್ದು, ಹೇಗೆ ಎಂಬುದನ್ನು ಸದ್ಯದಲ್ಲೇ ಪತ್ತೆ ಮಾಡಿ, ಅವರನ್ನೂ ಚಿಕಿತ್ಸೆಗೆ ಒಳಪಡಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ ವೃದ್ಧೆಗೆ ಸೋಂಕು ತಗುಲಿದ್ದು ಹೇಗೆ ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ. ವೃದ್ಧೆಗೆ ಸಂಬಂಧಿ ಸಿದಂತೆ ರಂಗನವಾಡ ಓಣಿ ಹಾಗೂ ಎಸ್.ಎಂ. ಕೃಷ್ಣ ನಗರದ ಮನೆ ಮನೆಯನ್ನು ಜಾಲಾಡುತ್ತಿದ್ದಾರೆ.
ಎಸ್‌ಪಿ ಹೆಗಲಿಗೆ ತನಿಖೆ ಹೊಣೆ: ವೃದ್ಧೆಯೊಂದಿಗೆ ವಾಸವಾಗಿದ್ದ ತಂಗಿ, ತಂಗಿಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು, ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನರು ಹಾಗೂ ಚಿಕಿತ್ಸೆ ನೀಡಿದ 7 ಜನ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 42 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅವರೆಲ್ಲರ ವರದಿ ನೆಗೆಟಿವ್ ಬಂದಿದೆ.
ವೃದ್ಧೆಯಲ್ಲಿ ಕೋವಿಡ್ ಸೋಂಕು ಇರುವುದು ಏ. 7ರಂದು ದೃಢವಾಗುತ್ತಿದ್ದಂತೆ ರಂಗನವಾಡ ಹಾಗೂ ಎಸ್.ಎಂ. ಕೃಷ್ಣಾ ನಗರಗಳನ್ನು ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತರು, ಕಿರಿಯ ವೈದ್ಯಕೀಯ ಸಹಾಯಕಿಯರು ಸೋಂಕು ಪತ್ತೆಗಾಗಿ ಸಮೀಕ್ಷೆ ನಡೆಸುತ್ತಿದ್ದಾರೆ. ಆ ನಂತರ ದಿನಗಳೆದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ, ನಿರಂತರವಾಗಿ ಕೋವಿಡ್ ಪರೀಕ್ಷೆಗಾಗಿ ಮಾದರಿಗಳನ್ನು ಕಳಹಿಸಲಾಗುತ್ತಿದೆ. ಇಲ್ಲಿವರೆಗೆ ಪಿ-166 ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 82 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲವೂ ನಕಾರಾತ್ಮಕ ವರದಿ ಬಂದಿವೆ. ಇದರಿಂದಾಗಿ ವೃದ್ಧೆಗೆ ಸೋಂಕಿನ ಮೂಲ ಹರಡಿದ್ದು ಎಲ್ಲಿ ಮತ್ತು ಯಾರಿಂದ ಎಂಬುದು ಯಕ್ಷಪ್ರಶ್ನೆಯಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್, ಪ್ರಕರಣದ ತನಿಖೆಯ ಹೊಣೆಯನ್ನು ಎಸ್‌ಪಿ ಯತೀಶ್ ಎನ್. ಅವರಿಗೆ ವಹಿಸಿದ್ದಾರೆ. ಎಸ್‌ಪಿ ಯತೀಶ್ ಎನ್. ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ವೃದ್ಧೆಯೊಂದಿಗೆ ದ್ವಿತೀಯ ಸಂಪರ್ಕ ಸುಮಾರು 25 ಜನರು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ವೃದ್ಧೆಗೆ ಸೋಂಕಿನ ಮೂಲ ನಿಗೂಢವಾಗಿದೆ. ಇದು ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕ ಹೆಚ್ಚುತ್ತಿದೆ. ಹೀಗಾಗಿ ಯಾರಿಗಾದರೂ ತಮ್ಮಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಹಾಗೂ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿದ್ದರೆ, ಸ್ವಯಂ ಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಮುಂದಾಗುವಂತೆ ನೀಡಿದ ಕರೆಗೆ ಜನರಿಂದ ಸ್ಪಂದನೆ ಇಲ್ಲ. ಹೀಗಾಗಿ ಸೋಂಕಿನ ಮೂಲ ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸ.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ವೃದ್ಧೆಗೆ ಕೊರೊನಾ ಸೋಂಕು ಹರಡಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಶೀಘ್ರವೇ ಸೋಂಕಿನ ಮೂಲ ಪತ್ತೆ ಮಾಡುತ್ತೇವೆ.
ಯತೀಶ್ ಎನ್.,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವೀರೇಂದ್ರ ನಾಗಲದಿನ್ನಿ