ಗದಗ: ಪ್ರಬಲ ನಾಮಧಾರಿ ರಡ್ಡಿ ಸಮುದಾಯದ ಹಾಗೂ ಸುಧೀರ್ಘ 40 ವರ್ಷಗಳ ರಾಜಕೀಯ ಅನುಭವ ಹೊಂದಿರುವ 70ರ ಹರೆಯದ ಎಚ್.ಕೆ. ಪಾಟೀಲ ಅವರು 6ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿರಿಯ ಅನುಭವಿ, ಹುಲಕೋಟಿ ಹುಲಿ ಎಂದೇ ಹೆಸರುವಾಸಿಯಾಗಿದ್ದ ಕೆ.ಎಚ್. ಪಾಟೀಲ ಅವರ ಪುತ್ರರಾಗಿರುವ ಎಚ್.ಕೆ. ಪಾಟೀಲ ಅವರು 1984ರಿಂದ 2008ರ ವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸತತ ನಾಲ್ಕು ಅವಧಿಯವರೆಗೆ ವಿಧಾನ ಪರಿಷತ್ ಸದಸ್ಯರಾಗಿ, ನಂತರ ಗದಗ ವಿಧಾನಸಭೆ ಮತಕ್ಷೇತ್ರದಿಂದ 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪ್ರಸ್ತುತ 2023ರ ಚುನಾವಣೆಯಲ್ಲಿ ಗದಗ ಮತಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿ ಹ್ಯಾಟ್ರಿಕ್ ಬಾರಿಸಿದ್ದರು.
1993ರಲ್ಲಿ ಮೊದಲ ಬಾರಿಗೆ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 1994ರಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ, 1999ರಲ್ಲಿ ಜಲಸಂಪನ್ಮೂಲ ಸಚಿವರಾಗಿ, 2003ರಲ್ಲಿ ಕೃಷಿ ಸಚಿವರಾಗಿ, 2004ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
2013ರಿಂದ 2018ರ ವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದರು. ತದನಂತರ 2020ರಿಂದ ಈವರೆಗೆ ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಎಚ್.ಕೆ. ಪಾಟೀಲ ಅವರದ್ದಾಗಿದೆ.