Advertisement

ಮೋದಿ ಜಲಾಸ್ತ್ರ ಪ್ರಯೋಗ​​​​​​​

06:00 AM May 06, 2018 | |

ಗದಗ: “ಅಹಿಂದ’ದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಈಗ “ಜಲಾಸ್ತ್ರ’ ಪ್ರಯೋಗಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಮೂರುವರೆ ದಶಕಗಳ ಮಹದಾಯಿ ವಿವಾದವನ್ನು ಸೌಹಾರ್ದಯುತವಾಗಿ ಚರ್ಚೆ ಮೂಲಕ ಬಗೆಹರಿಸಲು ಬಿಜೆಪಿ ಸಿದ್ಧವಿದೆ ಎಂದಿದ್ದಾರೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ ಅವರಿಗೆ ಮಹದಾಯಿ ವಿವಾದದ ಇತಿಹಾಸವೇ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

Advertisement

ಗದಗ-ಹಾವೇರಿ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ, ನಗರ ಹೊರವಲಯದ ಮುಂಡರಗಿಯಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್‌ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “”ದೇಶದ ನೀರಿನಲ್ಲಿ ಪ್ರತಿಯೊಬ್ಬರಿಗೆ ಅಧಿಕಾರ ಮತ್ತು ಹಕ್ಕಿದೆ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್ಸಿಗರು ಮಹದಾಯಿ ವಿಚಾರದಲ್ಲಿ ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ವಿವಾದವನ್ನು ಸೌಹಾರ್ದಯುತವಾಗಿ ಚರ್ಚೆ ಮೂಲಕ ಬಗೆಹರಿಸಲು ಬಿಜೆಪಿ ಸಿದ್ಧವಿದೆ. ನಾವು ರಾಜಕೀಯ ಬೆರೆಸದೇ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹೇಳಿದರು.

ಮಹದಾಯಿ ಇತಿಹಾಸವೇ ಗೊತ್ತಿಲ್ಲ:
“”ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹದಾಯಿ ವಿವಾದದ ಇತಿಹಾಸವೇ ಗೊತ್ತಿಲ್ಲ. 2007ರ ಗೋವಾ ವಿಧಾನಸಭಾ ಚುನಾವಣೆ ವೇಳೆ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ನಂತರ ಗೋವಾದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದ್ದು, ಇದೀಗ ಮಹದಾಯಿ ಹೆಸರಲ್ಲಿ ಕನ್ನಡಿಗರನ್ನು ಎತ್ತಿಕಟ್ಟಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರಯಾಸ ನಡೆಸಿದೆ” ಎಂದರು.

“”2007ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿಲ್ಲ. ಕಾಂಗ್ರೆಸ್‌ ಪಕ್ಷದಲ್ಲೇ ಇರಲಿಲ್ಲ. ಆಗ ಅವರು ಜನತಾದಳದಲ್ಲಿದ್ದರು. ಹೀಗಾಗಿ ಮಹದಾಯಿ ವಿಚಾರದ ಕಾಂಗ್ರೆಸ್‌ ನಿಲುವಿನ ಬಗ್ಗೆ ಸಿದ್ದರಾಮಯ್ಯಗೆ ಮಾಹಿತಿಯೇ ಇಲ್ಲ. ಮೊದಲು ಈ ಕುರಿತು ತಮ್ಮ ಪಕ್ಷದ ವರಿಷ್ಠರಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಮಹದಾಯಿ ವಿಚಾರವಾಗಿ ನ್ಯಾಯಾ ಧಿಕರಣ ರಚಿಸುವ ಮೂಲಕ ಈ ಭಾಗದ ಮಹತ್ವದ ವಿಷಯನ್ನು ಜೀವಂತವಾಗಿಟ್ಟಿದೆ. ಯಾವುದೇ ವಿಷಯವನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್‌ ಪರಿಹರಿಸಲ್ಲ. ಇದು  ಅಟಖಾನಾ (ಸಿಲುಕಿಸುವುದು), ಬಟಖಾನಾ(ಉದ್ರೇಕಿಸುವುದು) ಕಾಂಗ್ರೆಸ್‌ ಪರಿಪಾಠ” ಎಂದು ಹೇಳಿದರು.

ಟ್ಯಾಂಕ್‌ ಉಳಿಸಲು ಹರಸಾಹಸ:
ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಇದೀಗ ಕರ್ನಾಟಕದ ಭೀತಿ ಶುರುವಾಗಿದೆ. ಕಾಂಗ್ರೆಸ್‌ ಮಂತ್ರಿಗಳು, ನಾಯಕರು ಒಂದು ಟ್ಯಾಂಕ್‌ ಮಾಡಿದ್ದಾರೆ. ತಮ್ಮ ಅಕ್ರಮ ಸಂಪಾದನೆಯಲ್ಲಿ ಒಂದಿಷ್ಟು ಭಾಗವನ್ನು ಈ ಟ್ಯಾಂಕ್‌ನಲ್ಲಿ ಹಾಕುತ್ತಾರೆ. ಅದು ನೇರವಾಗಿ ದೆಹಲಿಯ ಕಾಂಗ್ರೆಸ್‌ ವರಿಷ್ಠರಿಗೆ ಸಲುತ್ತದೆ ಎಂದು ಮೋದಿ ಆರೋಪಿಸಿದರು.

Advertisement

ತಮ್ಮ ಭಾಷಣದ ಮಧ್ಯೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಳನ್ನು ಆಂತರಿಕವಾಗಿ ಟೆಂಡರ್‌ ಹಾಕಲಾಗಿತ್ತು. ಹೆಚ್ಚು ಹಣ ಕೊಟ್ಟವರಿಗೆ ಟಿಕೆಟ್‌ ಸಿಕ್ಕಿದೆ. ಅದರಂತೆ ಆಕಸ್ಮಿಕವಾಗಿ ಕಾಂಗ್ರೆಸ್‌ ಅ ಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯನ್ನೂ ಟೆಂಡರ್‌ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದ ಅವರು, ಈಗಾಗಲೇ ಸೋಲಿನ ಮುನ್ಸೂಚನೆ ಅರಿತಿರುವ ಕಾಂಗ್ರೆಸ್‌ ನಾಯಕರು ವಿಲವಿಲನೆ ಒದ್ದಾಡುತ್ತಿದ್ದಾರೆ ಎಂದರು.

ಹೇಮಾವತಿ-ನೇತ್ರಾವತಿ ಜೋಡಣೆಗೆ ಕ್ರಮ
“ರಾಜ್ಯದ ಎರಡು ಪ್ರಮುಖ ನದಿಗಳಾದ ಹೇಮಾವತಿ ಮತ್ತು ನೇತ್ರಾವತಿ ನದಿ ಜೋಡಣೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು” ಎಂದಿದ್ದಾರೆ. ತುಮಕೂರಿನಲ್ಲಿ ಶನಿವಾರ ಪ್ರಚಾರ ಭಾಷಣ ಮಾಡಿದ ಅವರು, “ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶದ ನದಿಗಳ ಜೋಡಣೆಯ ಕನಸನ್ನು ಕಂಡಿದ್ದರು. ಅದನ್ನು ನಮ್ಮ ಸರ್ಕಾರ ಸಾಕಾರಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಹೇಮಾವತಿ ಮತ್ತು ನೇತ್ರಾವತಿ ನದಿ ಜೋಡಣೆ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next