ಬಾಗಲಕೋಟೆ: ಮೊಮ್ಮಗನ ಜತೆಗೆ ತಿರುಪತಿ ದರ್ಶನಕ್ಕೆ ಹೋಗಿದ್ದ ಜಿಲ್ಲೆಯ ವೃದ್ಧೆಯೊಬ್ಬರು ರೈಲು ಹತ್ತುವಾಗ ತಪ್ಪಿ ಬೇರೊಂದು ರೈಲು ಏರಿದ್ದರಿಂದ ದೆಹಲಿ ತಲುಪಿದ್ದು, ಆ ವೃದ್ಧೆಯನ್ನು ಸೈನಿಕರೊಬ್ಬರು ಕರಳು ಬಳ್ಳಿಗೆ ಕೂಡಿಸಲು ನೆರವಾಗಿದ್ದಾರೆ.
ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ಶಿವಮ್ಮ ಪಾಟೀಲ ಎಂಬ ವೃದ್ಧೆ, ಕಳೆದ ಶನಿವಾರ ತಿರುಪತಿಗೆ ಹೋಗಿದ್ದರು. ತಿರುಪತಿ ದರ್ಶನ ಮುಗಿದ ಬಳಿಕ ರೈಲ್ವೆ ನಿಲ್ದಾಣದಲ್ಲಿ ಮೊಮ್ಮಗನೊಂದಿಗೆ ಇದ್ದ ವೃದ್ಧೆ ಗದ್ದಲದಲ್ಲಿ ಪ್ರತ್ಯೇಕಗೊಂಡಿದ್ದರು. ಮೊಮ್ಮಗ ರೈಲು ನಿಲ್ದಾಣದಲ್ಲಿ ವೃದ್ಧೆಗಾಗಿ ಹುಡುಕಾಡಿ, ಕೊನೆಗೆ ತವರಿಗೆ ಬಂದು, ಅಜ್ಜಿ ಕಳೆದುಕೊಂಡಿರುವ ವಿಷಯ ಮನೆಯವರಿಗೆ ಹೇಳಿದ.
ಆಗ ವೃದ್ಧೆಯನ್ನು ಹುಡುಕಲು ಮಗ ಮಹಾಂತಗೌಡ ಪಾಟೀಲ ಸೇರಿದಂತೆ ಹಲವರು ತಿರುಪತಿಗೆ ಹೊರಟಿದ್ದರು. ಆದರೆ, ಅಜ್ಜಿ ತಿರುಪತಿಯಲ್ಲಿ ದೆಹಲಿಗೆ ಹೋಗುವ ರೈಲು ಹತ್ತಿದ್ದರಿಂದ ಅವರು ದೆಹಲಿಯ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ದೆಹಲಿಯಲ್ಲಿ ಕನ್ನಡ ಬಾರದ ಜನರೊಂದಿಗೆ ತಮ್ಮೂರಿನ ಮಾಹಿತಿ ಕೇಳಲು ಹರಸಾಹಪಟ್ಟಿದ್ದಳು.
ಕಣ್ಣೀರು ಹಾಕುತ್ತ ಒಂದೆಡೆ ಕುಳಿತಿದ್ದಳು. ಇದೇ ವೇಳೆ ರಜೆಗೆಂದು ಊರಿಗೆ ಬರಲು ದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರದ ಸೈನಿಕ ಮುದುಕಪ್ಪ ಹಿರೇಮಠ, ವೃದ್ಧೆಯನ್ನು ಕಂಡು ವಿಚಾರಿಸಿದರು. ಈ ವೇಳೆ ಕನ್ನಡ ಮಾತನಾಡುವ ವ್ಯಕ್ತಿಯನ್ನು ಕಂಡು ಖುಷಿಯಾದ ವೃದ್ಧೆ, ತನ್ನ ಸಮಸ್ಯೆ ಹೇಳಿಕೊಂಡಳು. ಆಗ ಅಜ್ಜಿಯ ಬಳಿ ಮನೆಯವರ ಫೋನ್ ನಂಬರ್ ಕೂಡ ಇರಲಿಲ್ಲ.
ಹೀಗಾಗಿ ಸೈನಿಕ ಮುದುಕಯ್ಯ ಅವರು ಹುನಗುಂದದ ತಮ್ಮ ಸ್ನೇಹಿತ ಬಸವರಾಜ ನಿಡಗುಂದಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆಗ ಬಸವರಾಜ ನಿಡಗುಂದಿ ಅವರು ಅಜ್ಜಿಯ ಊರಿನವರನ್ನು ಸಂಪರ್ಕಿಸಿ, ಮಾಹಿತಿ ನೀಡಿದಾಗ ಆ ಅಜ್ಜಿ ಮಹಾಂತಗೌಡ ಪಾಟೀಲರ ತಾಯಿ ಎಂಬುದು ಗೊತ್ತಾಗಿದೆ. ಹೀಗಾಗಿ ಅಜ್ಜಿಯನ್ನು ಜೋಪಾನವಾಗಿ, ರೈಲಿನ ಮೂಲಕ ಕರೆದುಕೊಂಡು ಬರುತ್ತಿದ್ದು, ಶನಿವಾರ ಮಧ್ಯಾಹ್ನ 3ಕ್ಕೆ ಬಾಗಲಕೋಟೆಗೆ ಆಗಮಿಸಲಿದ್ದಾರೆ. ಕರಳು ಬಳ್ಳಿಯಿಂದ ಬೇರ್ಪಟ್ಟ ವೃದ್ಧೆಯನ್ನು ಮರಳಿ ಕುಟುಂಬ ಸೇರಿಸಲು ಮಾನವೀಯತೆಯಡಿ ಕೆಲಸ ಮಾಡಿದ ಸೈನಿಕ ಮುದುಕಯ್ಯ ಅವರ ಕಾರ್ಯವನ್ನು ಹಲವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.