Advertisement

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

03:08 PM Jun 14, 2024 | Team Udayavani |

ಗದಗ: ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆ ಜರುಗಿತು.

Advertisement

ಮೊದಲನೆಯದಾಗಿ ರೋಣ ತಾಲೂಕಿನ ಸವಡಿ ಗ್ರಾಮದ ಯಚ್ಚರಪ್ಪ ಹೂಗಾರ ಅವರು ತಮ್ಮ ಕುಟುಂಬಕ್ಕೆ ಸರಕಾರ ನೀಡಿದ್ದ ಮಂಜೂರಾತಿ ಜಮೀನನ್ನು ತಮ್ಮ ಹೆಸರಿಗೆ ನೊಂದಾಯಿಸುವಂತೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರು ನೀಡಿದ್ದರು. ಅದಕ್ಕೆ ಉಪಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರೋಣ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಎರಡನೇಯದಾಗಿ ಭಾರತಿ ಯಮನೂರಪ್ಪ ಹೊಸಮನಿ ಅವರು ಕಳೆದ 5 ವರ್ಷಗಳಿಂದ ಶೌಚಾಲಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರೂ ಕೇವಲ 6 ತಿಂಗಳ ಗೌರವಧನ ಮಾತ್ರ ನೀಡಿದ್ದಾರೆ. ಬಾಕಿ ಗೌರವಧನ ವಿತರಣೆಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು 5 ವರ್ಷಗಳ ಕಾಲ ಶೌಚಾಲಯ ನಿರ್ವಹಣೆ ಮಾಡಿದ್ದರ ಕುರಿತು ದಾಖಲಾತಿ ಇದೆಯಾ ಎಂದು ಪ್ರಶ್ನಿಸಿದರು. ಆಗ ದೂರುದಾರರು ನಗರಸಭೆ ಸದಸ್ಯರಿಗೆ ಮಾಹಿತಿ ಇದೆ ಎಂದರು. ಆಗ ಉಪಲೋಕಾಯುಕ್ತರು ನಗರಸಭೆ ಸದಸ್ಯರ ದಾಖಲಾತಿ ಪರಿಗಣಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಕುರಿತು ದಾಖಲಾತಿ ನೀಡಿದ್ದರೆ, ಪರಿಗಣಿಸಲಾಗುವುದು. ಆದರೂ, ನಗರಸಭೆ ಪೌರಾಯುಕ್ತರಿಗೆ ದಾಖಲಾತಿ ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.

ಉಳಿದಂತೆ ಸುಧಾಕಾರ ವೀರಾಪೂರ ಅವರು ಅಕ್ರಮ ನೇಮಕಾತಿ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು. ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪೌರಾಯುಕ್ತರಿಗೆ ಪರಿಶೀಲಿಸುವಂತೆ ಸೂಚಿಸಿದರು. ಮುಂಡರಗಿ ಮಂಜುನಾಥ ಕಟ್ಟಿಮನಿ ಅವರು ಸಿಂಧುತ್ವ ಪ್ರಮಾಣ ಪತ್ರ ವಿತರಣೆ ವಿಳಂಬ ಕುರಿತು ಅರ್ಜಿ ಸಲ್ಲಿಸಿದ್ದರು. ಉಪಲೋಕಾಯುಕ್ತರು 4 ತಿಂಗಳು ವಿಳಂಬ ಯಾಕೆ ಎಂದು ತಹಶೀಲ್ದಾರರಿಗೆ ಪ್ರಶ್ನಿಸಿದರು. ಅವರ ದಾಖಲಾತಿ ಪ್ರಕಾರ ಅವರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿದೆ. ಅವರು ಬಯಸಿದ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದರು. ಈ ಕುರಿತು ಉಪ ಲೋಕಾಯುಕ್ತರು ದೂರುದಾರರಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ, ದಾಖಲಾತಿ ಪರಿಶೀಲಿಸಿ ಪೂರಕ ಪ್ರಮಾಣ ಪತ್ರ ನೀಡುತ್ತಾರೆ ಎಂದು ಹೇಳಿದರು.

ರೋಣ ತಾಲೂಕಿನ ಕುರಡಗಿ ಗ್ರಾಮದ ಶೌಕತ್ ಅಲಿ ನರೇಗಲ್ ಅವರು ಕುರಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಪಲೋಕಾಯುಕ್ತರು ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್ಆರ್ ಟಿಸಿ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

Advertisement

ಈ ವೇಳೆ ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ನಿಬಂಧಕರು ಅಮರನಾರಾಯಣ ಕೆ., ಪಿಎಸ್ ಕಿರಣ ಪಿಎಂ ಪಾಟೀಲ, ಪಿ.ಎನ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ ಸೇರಿ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next