ಗದಗ:ಮಹಾಶಿವರಾತ್ರಿಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ಲಿಂಗ ದೀಕ್ಷೆ ಪಡೆದಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ರೋಣದ ಅಸೂಟಿ ಗ್ರಾಮದ ಮುನ್ನಾ ಮುಲ್ಲಾ ಎಂಬ ವ್ಯಕ್ತಿ ಬಸವ ತತ್ವದ ಆಧಾರದ ಮೇಲೆ ಜೀವನ ನಡೆಸುವ ಇಚ್ಚೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮುರುಘಾರಾಜೇಂದ್ರ ಕೋರಣೇಶ್ವರ ಶ್ರೀಗಳು ಲಿಂಗ ದೀಕ್ಷೆ ನೀಡಿರುವುದಾಗಿ ವರದಿ ವಿವರಿಸಿದೆ.
ಮುನ್ನಾ ಮುಲ್ಲಾ ತಂದೆ, ತಾಯಿ ಕೂಡಾ ಮಠದ ಭಕ್ತರಾಗಿದ್ದರು ಎಂದು ಶ್ರೀಗಳು ತಿಳಿಸಿದ್ದು, ಬಸವ ತತ್ವದ ಮೇಲೆ ನಂಬಿಕೆ ಇಟ್ಟು ಮುನ್ನಾ ಅವರು ಲಿಂಗ ದೀಕ್ಷೆ ಸ್ವೀಕರಿಸಿದ್ದಾರೆ. ಇನ್ನು ಮುಂದೆ ಅವರು ಬಸವ ತತ್ವ ಅನುಸರಿಸಲಿದ್ದಾರೆ ಎಂದು ಹೇಳಿದರು.
33 ವರ್ಷದ ದಿವಾನ್ ಷರೀಫ್ ರಹೀಮಾನ್ ಸಾಬ್ ಮುಲ್ಲಾ ಫೆ.26ರಂದು ಗುರುದೀಕ್ಷೆ ಸ್ವೀಕರಿಸಲು ಸಿದ್ದತೆ ನಡೆಸುತ್ತಿದ್ದಾರೆ. ನಂತರ ಷರೀಫ್ ಅಸೂಟಿಯಲ್ಲಿರುವ ಮುರುಘಾರಾಜೇಂದ್ರ ಕೋರಣೇಶ್ವರ ಶಾಂತಿಧಾಮ ಮಠದ ಪ್ರಧಾನ ಗುರುವಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಕಲಬುರಗಿಯ ಖಾಜುರಿ ಗ್ರಾಮದಲ್ಲಿರುವ ಕೋರಣೇಶ್ವರ ಸಂಸ್ಥಾನ ಮಠಕ್ಕೆ 350 ವರ್ಷಗಳ ಇತಿಹಾಸ ಹೊಂದಿದ್ದು, ಅಸೋಟಿಯಲ್ಲಿರುವುದು ಇದರ ಶಾಖಾ ಮಠವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಇತರೆಡೆ ಲಿಂಗಾಯತ ಧರ್ಮಕ್ಕೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ.
ಷರೀಫ್ ತಂದೆ ರಹೀಮಾನ್ ಸಾಬ್ ಅಸೂಟಿ ಗ್ರಾಮದಲ್ಲಿ ಎರಡು ಎಕರೆ ಜಾಗವನ್ನು ಮಠ ನಿರ್ಮಿಸಲು ನೀಡಿದ್ದರು. ಜಾಗದಲ್ಲಿ ಈಗ ಆವರಣ ಕಟ್ಟುವ ಕೆಲಸ ನಡೆಯುತ್ತಿದೆ ಎಂದು ಶಿವಯೋಗಿ ತಿಳಿಸಿದ್ದಾರೆ.
2019ರ ನವೆಂಬರ್ 10ರಂದು ಲಿಂಗ ದೀಕ್ಷೆ ಸ್ವೀಕರಿಸಿದ್ದರು, ನಾವು ಕಳೆದ ಮೂರು ವರ್ಷಗಳಿಂದ ಲಿಂಗಾಯತ ಧರ್ಮದ ಕುರಿತು ಷರೀಪ್ ಗೆ ತರಬೇತಿ ನೀಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.