Advertisement

ಗದಗ: ಲೋಕಾರ್ಪಣೆಗೆ ಸಜ್ಜಾದ 3ಡಿ ತಾರಾಲಯ; 8 ಕೋಟಿ ವೆಚ್ಚದಲ್ಲಿ ನಿರ್ಮಾಣ

06:46 PM Jan 13, 2023 | Team Udayavani |

ಗದಗ: ನಗರದಲ್ಲಿ 8.08 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಎರಡನೇ ಅತೀ ದೊಡ್ಡ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮುಕ್ತ ಅವಕಾಶ ದೊರೆಯಲಿದೆ.

Advertisement

ಬೆಟಗೇರಿಯ ಹೆಲ್ತ್‌ ಕ್ಯಾಂಪ್‌ನಲ್ಲಿ 10 ಮೀಟರ್‌ ವ್ಯಾಸ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್‌ (ಗುಮ್ಮಟ)ಆಕೃತಿಯಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ ವಿಶಿಷ್ಟವಾಗಿದ್ದು, ಪ್ರದರ್ಶನಗಳು ವೀಕ್ಷಕರಿಗೆ ನೈಜ ಅನುಭವ ನೀಡಲಿವೆ. ಆಕಾಶಕಾಯಗಳು, ಮೋಡಗಳು ಹಾಗೂ ನಿಹಾರಿಕೆಗಳ ಚಲನವಲಗಳನ್ನು 3ಡಿ ಎಫೆಕ್ಟ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಆಧುನಿಕ ಮತ್ತು ಐತಿಹಾಸಿಕ ಬಾಹ್ಯಾಕಾಶ ನೌಕೆ, ಧೂಮಕೇತುಗಳು, ಕ್ಷುದ್ರ ಗ್ರಹಗಳು, ಗ್ಯಾಲಕ್ಸಿಗಳನ್ನು ಅತೀ ಸಮೀಪದಿಂದ ಕಣ್ತುಂಬಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ತಂತ್ರಜ್ಞಾನ, ಎಂಜಿನಿಯರಿಂಗ್‌ ಹಾಗೂ ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ನೈಸರ್ಗಿಕ ವಿಜ್ಞಾನ, ಭೂ ವಿಜ್ಞಾನದ ದೃಶ್ಯಗಳನ್ನು ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ.

2017ರಲ್ಲಿ ಆರಂಭಗೊಂಡಿದ್ದ ಕಾಮಗಾರಿ: ಬೆಟಗೇರಿಯ ಹೆಲ್ತ್ ಕ್ಯಾಂಪ್‌ ಬಳಿ 2016-17ನೇ ಸಾಲಿನಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವರಾಗಿದ್ದ ಎಚ್‌.ಕೆ. ಪಾಟೀಲ ಅವರು ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯದ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕೋವಿಡ್‌ ಹಾಗೂ ಅನುದಾನದ ಕೊರತೆ ನಡುವೆ ಕಾಮಗಾರಿ ವಿಳಂಬಗೊಂಡಿತ್ತು. ನಂತರ ಎಲ್ಲ ಅಡೆತಡೆಗಳನ್ನು ಸರಿಪಡಿಸಿಕೊಂಡು ಉದ್ಘಾಟನೆಗೆ ಸಜ್ಜುಗೊಂಡಿದ್ದು, ಫೆಬ್ರವರಿಯೊಳಗಾಗಿ ಲೋಕಾರ್ಪಣೆಗೊಳ್ಳಲಿದೆ.

8.08 ಕೋಟಿ ವೆಚ್ಚದ ತಾರಾಲಯ: ನಿರ್ಮಿತಿ ಕೇಂದ್ರದಿಂದ 3.28 ಕೋಟಿ ರೂ. ವೆಚ್ಚದಲ್ಲಿ ತಾರಾಲಯದ ಕಟ್ಟಡ ನಿರ್ಮಾಣಗೊಂಡರೆ, ಹುಬ್ಬಳ್ಳಿಯ ವರ್‍ನಾಜ್‌ ಟೆಕ್ನಾಲಾಜಿ ಸಂಸ್ಥೆ 4.8 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ಅಳವಡಿಸಿದೆ. ಒಟ್ಟು 8.08 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ ನಿರ್ಮಾಣಗೊಂಡಿದೆ.

Advertisement

65 ಆಸನ ವ್ಯವಸ್ಥೆ: ಹವಾ ನಿಯಂತ್ರಿತ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ 65 ಆಸನಗಳನ್ನು ಹೊಂದಿದ್ದು, ಅರ್ಧ ಗಂಟೆ ಅವ ಧಿಯ ದೃಶ್ಯಾವಳಿಗಳನ್ನು ಒಂದು ಅವಧಿಯಲ್ಲಿ 65 ಜನರು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರಿಗೂ ಆ್ಯಕ್ಟಿವ್‌ 3ಡಿ ಗ್ಲಾಸ್‌ ಲಭ್ಯವಿದ್ದು, ದೃಶ್ಯಾವಳಿಗಳ ಜೊತೆಗೆ ಸಾಗಿದ ಅನುಭವ ಉಂಟಾಗಲಿದೆ.

ರಾಜ್ಯದಲ್ಲೇ ಎರಡನೇ ತಾರಾಲಯ: ಮಂಗಳೂರಿನ ಪಿಲಿಕುಳದಲ್ಲಿ 180 ಆಸನಗಳುಳ್ಳ 18 ಮೀಟರ್‌ ವ್ಯಾಸದ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್‌ (ಗುಮ್ಮಟ) ಆಕೃತಿಯಲ್ಲಿ ನಿರ್ಮಾಣಗೊಂಡಿರುವ 3ಡಿ ತಾರಾಲಯ ರಾಜ್ಯದ ಮೊದಲ ಸ್ಥಾನ ಪಡೆದಿದ್ದರೆ, ಗದುಗಿನಲ್ಲಿ 65 ಆಸನಗಳುಳ್ಳ 18 ಮೀಟರ್‌ ವ್ಯಾಸದ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್‌ (ಗುಮ್ಮಟ) ಆಕೃತಿಯಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್‌ ಆಕ್ಟಿವ್‌ 3ಡಿ ತಾರಾಲಯ ಎರಡನೇ ಸ್ಥಾನ ಪಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ 3ಡಿ ತಾರಾಲಯ ಇಲ್ಲದಿರುವುದು ಅಚ್ಚರಿಯ ಸಂಗತಿ.

ಗದಗ ನಗರದಲ್ಲಿ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ ನಿರ್ಮಾಣಗೊಂಡಿರುವುದು ಹೆಮ್ಮೆಯ ಸಂಗತಿ. 3ಡಿ ತಾರಾಲಯ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿದ್ದು, ವಿದ್ಯಾರ್ಥಿಗಳ, ಪಾಲಕರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಕಡಿಮೆ ದರದಲ್ಲಿ ಲಭ್ಯವಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಚ್‌.ಕೆ. ಪಾಟೀಲ, ಶಾಸಕರು

ಶಾಸಕ ಎಚ್‌.ಕೆ. ಪಾಟೀಲ ಅವರ ಆಸಕ್ತಿ, ಇಚ್ಛಾಶಕ್ತಿ ಹಾಗೂ ಪ್ರೋತ್ಸಾಹದ ಫಲವಾಗಿ ಗದಗ ನಗರದಲ್ಲಿ ಡಿಜಿಟಲ್‌ ಆ್ಯಕ್ಟಿವ್‌ 3ಡಿ ತಾರಾಲಯ ನಿರ್ಮಾಣಗೊಂಡಿದೆ. 4.8 ಕೋಟಿ ರೂ. ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ
ವಿಜ್ಞಾನಿಗಳಿಗೆ ಅನುಕೂಲವಾಗಲಿದೆ.
ದಿನೇಶ ಬಾಡಗಂಡಿ, ವರ್‍ನಾಜ್‌ ಟೆಕ್ನಾಲಜಿ ಸಂಸ್ಥಾಪಕರು

*ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next