Advertisement

ಗವಾಯಿಗಳು ಗಂಧರ್ವ ಲೋಕದಿಂದ ಅವತರಿಸಿದ ಗಾನ ಗಂಧರ್ವರು

05:53 PM Jun 20, 2022 | Team Udayavani |

 ಗದಗ: ಭಾರತೀಯರು ಪುರಾಣ ನಂಬುವಂತೆ, ಪುರಾಣದಲ್ಲಿ 14 ಲೋಕಗಳು ಇರುವಂತೆ, ಅದರಲ್ಲಿರುವ ಗಂಧರ್ವ ಲೋಕದಿಂದ ಉಭಯ ಶ್ರೀಗಳು ಅವತರಿಸಿ ಬಂದು ಸಾವಿರಾರು ಅಂಧ-ಅನಾಥರಿಗೆ ಆಶ್ರಯದಾತರಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ| ಡಾ| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪಂ| ಪಂಚಾಕ್ಷರ ಗವಾಯಿಗಳ 78ನೇ ಹಾಗೂ ಪದ್ಮ ಭೂಷಣ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಧರ್ಮೋತ್ತೇಜಕ ಮಹಾಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ನಾಡಿನ ಕಲಾ ಪ್ರಪಂಚವನ್ನು ಬದಲು ಮಾಡಿದ ಉಭಯ ಶ್ರೀಗಳನ್ನು ಭಕ್ತರು ಮನೆ, ಮನದಲ್ಲಿ ದೇವರಂತೆ ಪೂಜಿಸುತ್ತಿದ್ದಾರೆ. ಪುಣ್ಯಾಶ್ರಮದಿಂದ ಕಲಿತು ಹೋದ ಸಾವಿರಾರು ಶಿಷ್ಯರು ದೇಶಾದ್ಯಂತ ಮಹಾನ ವಿದ್ವಾಂಸರಾಗಿದ್ದಾರೆ. ಅಂತಹ ಶ್ರೇಷ್ಠ ಸೇವೆಯನ್ನು ವೀರೇಶ್ವರ ಪುಣ್ಯಾಶ್ರಮ ಮಾಡುತ್ತಿದೆ ಎಂದರು.

ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸ್ವಾರ್ಥ ಬಯಸದ, ಜಾತಿ-ಮತ ನೋಡದೆ ಶಿಕ್ಷಣ ನೀಡಿ ಉಭಯ ಶ್ರೀಗಳು ಮಹಾತ್ಮರೆನಿಸಿದ್ದಾರೆ.ಗುರುಗಳಿಗೆ ಕಣ್ಣನ್ನು ನೀಡದಿದ್ದರೂ ಸಂಗೀತ ಶಿಕ್ಷಣದ ಕಣ್ಣನ್ನು ನೀಡಿ ಅಸಂಖ್ಯಾತ ಭಕ್ತರಿಗೆ ಬದುಕು ಕೊಡುವ ಮೂಲಕ ದೇವರು ಮಾಡಿದ ದೋಷವನ್ನು ಉಭಯ ಶ್ರೀಗಳು ಪರಿಪೂರ್ಣಗೊಳಿಸಿದ್ದಾರೆ ಎಂದರು.

ಹಾನಗಲ್‌ ಗುರು ಕುಮಾರೇಶ್ವರರು ಪಂಚಾಕ್ಷರ ಗವಾಯಿಗಳಿಗೆ ಶಿಕ್ಷಣ ನೀಡಲು ಮಧ್ಯಪ್ರದೇಶದ ಮುಸ್ಲಿಂ ಧರ್ಮದ ವಿದ್ವಾಂಸರಿಂದ ಅವರ 3 ಕಠಿಣ ಬೇಡಿಕೆಗಳನ್ನು ಒಪ್ಪಿ ಸಂಗೀತ ಶಿಕ್ಷಣ ಕೊಡಿಸಿದ್ದಾರೆ. 2 ರೂ.ಗೆ ಒಂದು ತೊಲೆ ಬಂಗಾರ ಸಿಗುವ ಸಂದರ್ಭದಲ್ಲಿ ತಿಂಗಳಿಗೆ 200 ರೂ. ಗೌರವಧನ, ವಾರದಲ್ಲಿ ಮೂರು ಬಾರಿ ಮಾಂಸಾಹಾರವನ್ನು ಹೊರಗಡೆ ಸೇವಿಸಿ ಸ್ನಾನ ಮಾಡಿಕೊಂಡು ಬರಲು ಅವಕಾಶ ಮತ್ತು ಶಿವಯೋಗ ಮಂದಿರದಲ್ಲಿ ನಮಾಜ್‌ ಮಾಡಲು ಮಸೀದಿ ನಿರ್ಮಿಸಿ ಪಂಚಾಕ್ಷರ ಗವಾಯಿಗಳವರಿಗೆ ಸಂಗೀತ ಶಿಕ್ಷಣ ಕೊಡಿಸಲು ಹಾನಗಲ್‌ ಶ್ರೀಗಳು ಮಾಡಿರುವ ತ್ಯಾಗ ದೊಡ್ಡದು. ಅದರಂತೆ ಪಂಚಾಕ್ಷರ ಗವಾಯಿಗಳು ಎಲ್ಲರನ್ನೂ ಗೌರವಿಸಿದರೆ, ಹಾನಗಲ್‌ ಶ್ರೀಗಳನ್ನು ಪೂಜಿಸುತ್ತಿದ್ದರು ಎಂದು ಹೇಳಿದರು.

Advertisement

ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ಎಲ್ಲ ಮಳೆಯ ನೀರು ಮುತ್ತುಗಳಾಗಲು ಸಾಧ್ಯವಿಲ್ಲ. ಸ್ವಾತಿ ಮಳೆಯ ನೀರು ಚಿಪ್ಪಿನೊಳಗೆ ಸೇರಿದರೆ ಮುತ್ತಾಗುತ್ತದೆ. ಅದರಂತೆ ಪುಣ್ಯಾಶ್ರಮವನ್ನು ಸ್ಥಾಪಿಸಿ ಅಂಧ-ಅನಾಥರ ಭವಿಷ್ಯ ರೂಪಿಸಿ ದಾಖಲೆ ಬರೆದಿದ್ದಾರೆ. ದೇಶದಲ್ಲಿಯೇ ವೀರೇಶ್ವರ ಪುಣ್ಯಾಶ್ರಮ ಅದ್ಭುತವಾಗಿದೆ ಎಂದರು.

ಇಳಕಲ್‌ ಮಹಾಂತ ಶ್ರೀಗಳು ಮಾತನಾಡಿ, ಉಭಯ ಶ್ರೀಗಳಿಗೆ ಗುರುವಿನ ಕೃಪೆಯಿದೆ. ಪಂಚಾಕ್ಷರಿ ಗವಾಯಿ ಗಳನ್ನು ಶಿವಯೋಗ ಮಂದಿರದಿಂದ ಬೀಳ್ಕೊಡುವಾಗ ಹಾನಗಲ್‌ ಶ್ರೀಗಳು ಅಂತರಂಗದಿಂದ ಕಣ್ಣೀರು ಹರಿಸಿದ್ದರು. ಅಂಧರು ಭಿಕ್ಷೆ ಬೇಡುವುದನ್ನು ತಪ್ಪಿಸಿ ಅವರಿಗೆ ಸಂಗೀತ ಶಿಕ್ಷಣ ನೀಡಿ, ಲಕ್ಷ ಲಕ್ಷ ರೂ.ಗಳನ್ನು ಗಳಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

ಗಂಗಾವತಿಯ ಡಾ| ಕೊಟ್ಟೂರ ಶ್ರೀಗಳು, ರಾಚಯ್ಯ ದೇವರು ಹಿಪ್ಪರಗಿ, ಕೆಳದಿ ಮೃತ್ಯುಂಜಯ ಶ್ರೀಗಳು, ಹೆಬ್ಟಾಳ ಶ್ರೀಗಳು ನೇತೃತ್ವ ವಹಿಸಿ ದ್ದರು. ಪಂಚಾಕ್ಷರಯ್ಯ ಹಿಡ್ಕಿಮಠ, ಕಾಂತೀಲಾಲ ಬನ್ಸಾಲಿ ಇದ್ದರು. ವೀರೇಶ್ವರ ಪುಣ್ಯಾಶ್ರಮದ ಪ್ರತಿಷ್ಠಿತ ಕುಮಾರಶ್ರೀ ಪ್ರಶಸ್ತಿಯನ್ನು ಜೈನಾಪುರದ ಲಾಲ ಲಿಂಗೇಶ್ವರ ಶರಣರು, ಸೊರಗಾಂವ ಹಣಮಂತ ಮೈತ್ರಿ, ಹಾಲ್ವಿಯ ಮೌನೇಶ ಕುಮಾರ ಪತ್ತಾರ ಅವರಿಗೆ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next