ನವದೆಹಲಿ: ಜಿ20 ರಾಷ್ಟ್ರಗಳ ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿ ಸೆ.7ರಿಂದ 10ರವರೆಗೆ ಹಲವು ನಿರ್ಬಂಧಗಳನ್ನು ದೆಹಲಿ ಪೊಲೀಸರು ವಿಧಿಸಿದ್ದಾರೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ ಮಂಟಪಂನಲ್ಲಿ ಸೆ.8ರಿಂದ 10ರವರೆಗೆ ಜಿ20 ಶೃಂಗಸಭೆ ನಡೆಯಲಿದೆ. ಶೃಂಗಸಭೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ವಿಶೇಷ ಪೊಲೀಸ್ ಆಯುಕ್ತ(ಸಂಚಾರ) ಎಸ್.ಎಸ್.ಯಾದವ್, “ನವದೆಹಲಿಯಲ್ಲಿ ವಾಸಿಸುವವರು ಮುಕ್ತವಾಗಿ ಸಂಚರಿಸಬಹುದು. ಆದರೆ ಪ್ರವಾಸಿಗರು ಹಾಗೂ ದೆಹಲಿಯ ಬೇರೆ ಜಿಲ್ಲೆಗಳಿಂದ ನವದೆಹಲಿಗೆ ಆಗಮಿಸುವವರು ಸೂಕ್ತ ದಾಖಲೆ ತೋರಿಸಬೇಕು. ಪ್ರವಾಸಿಗರು ಹೋಟೆಲ್ ಕೊಠಡಿ ಬುಕಿಂಗ್‌ನ ಮಾಹಿತಿಯನ್ನು ನೀಡಬೇಕು’ ಎಂದು ಸೂಚಿಸಿದ್ದಾರೆ.
“ಸೆ.8ರಿಂದ 10ರವರೆಗೆ ನವದೆಹಲಿಯ ಮಾರುಕಟ್ಟೆ ಪ್ರದೇಶಗಳಿಗೆ ಆದಷ್ಟು ಭೇಟಿ ನೀಡದಿರಿ. ಮೂರು ದಿನಗಳು ಲಾರಿಗಳು ಮತ್ತು ಟ್ರಕ್‌ಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಅನುಮತಿಯೊಂದಿಗೆ ಸಂಚರಿಸಬಹುದು’ ಎಂದು ಹೇಳಿದ್ದಾರೆ.
“ಎಲ್ಲಾ ಮಾಲ್‌ಗಳು ಮತ್ತು ಮಾರುಕಟ್ಟೆಗಳನ್ನು ಬಂದ್ ಮಾಡಲಾಗುತ್ತದೆ. ಆ್ಯಂಬುಲೆನ್ಸ್ ಸೇರಿದಂತೆ ಸ್ಥಳೀಯ ಬಸ್‌ಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ತೆರಳುವವರು ಸ್ವಲ್ಪ ಬೇಗನೇ ಹೊರಡಬೇಕು. ಸಂಚಾರ ಸೇವೆ, ಆ್ಯಂಬುಲೆನ್ಸ್ ಮತ್ತು ಪೊಲೀಸ್ ಸೇವೆ ಕುರಿತು ಮಾಹಿತಿಗಾಗಿ ಈಗಾಗಲೇ ವರ್ಚುಯಲ್ ಸಹಾಯವಾಣಿ ಆರಂಭಿಸಲಾಗಿದೆ’ ಎಂದು ಎಸ್.ಎಸ್.ಯಾದವ್ ಮಾಹಿತಿ ನೀಡಿದ್ದಾರೆ.