Advertisement

ವೈದ್ಯರ ಮೇಲೆ ರೇಗಿದ ಜಿ.ಪಂ. ಅಧ್ಯಕ್ಷೆ: ಶಾಸಕರಿಗೆ ದೂರು

01:01 AM Jul 01, 2019 | sudhir |

ಪುತ್ತೂರು: ಕೌಡಿಚ್ಚಾರಿನ ಅಪ್ರಾಪ್ತೆಯ ಮೇಲೆ ಪೊಲೀಸ್‌ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಆಸ್ಪತ್ರೆಯ ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮನ್ನು ತತ್‌ಕ್ಷಣ ಭೇಟಿಯಾಗದ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಸಂಜೆ ಸಮಯದಲ್ಲಿ ಆಸ್ಪತ್ರೆಗೆ ಜಿ.ಪಂ. ಅಧ್ಯಕ್ಷರು ಭೇಟಿ ನೀಡಿದ್ದಾರೆ. ವೈದ್ಯರ ಕೊರತೆ ಇರುವ ಕಾರಣ ರೋಗಿಗಳನ್ನು ಪರೀಕ್ಷಿಸುತ್ತಿದ್ದ ವೈದ್ಯರು ತಮ್ಮನ್ನು ತತ್‌ಕ್ಷಣ ಭೇಟಿಯಾಗಿಲ್ಲ ಎಂದು ಜಿ.ಪಂ. ಅಧ್ಯಕ್ಷರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ಗಮನಿಸಿಲ್ಲ

ಸರಕಾರಿ ಆಸ್ಪತ್ರೆಯಲ್ಲಿ 13 ವೈದ್ಯರ ಹುದ್ದೆಗಳಿದ್ದು, 8 ವೈದ್ಯರು ಮಾತ್ರ ಇದ್ದಾರೆ. ಅದೂ ಸದ್ಯ ನಾಲ್ವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಇರುವುದನ್ನು ಗಮನಿಸದ ಅಧ್ಯಕ್ಷರು ಅಧಿಕಾರ ಚಲಾಯಿಸುವುದು, ರೇಗುವುದು ಸರಿಯಲ್ಲ ಎಂದು ಆಸ್ಪತ್ರೆಯ ಕೆಲವು ವೈದ್ಯರು, ಸಿಬಂದಿ ಅಲವತ್ತುಕೊಂಡಿದ್ದಾರೆ.

ಹೇಳಿಕೆ ನೀಡುವುದಿಲ್ಲ

Advertisement

ಈ ಹಿನ್ನೆಲೆಯಲ್ಲಿ ವೈದ್ಯರು ಜಿ.ಪಂ. ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಇದನ್ನು ನಿರಾಕರಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ, ನಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಕುರಿತು ಮೌಖೀಕವಾಗಿ ಶಾಸಕರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಸರಿಪಡಿಸುತ್ತೇವೆ

ಆಸ್ಪತ್ರೆಯ ವೈದ್ಯರ ಕಡೆಯಿಂದ ಇಂತಹದೊಂದು ಮೌಖೀಕ ದೂರು ಬಂದಿದೆ. ಯಾವ ಪರಿಸ್ಥಿಯಲ್ಲಿ, ಏಕೆ ಹೀಗೆ ನಡೆಯಿತು ಎಂದು ಗೊತ್ತಿಲ್ಲ. ಈ ಕುರಿತು ಮಾತುಕತೆ ನಡೆಸಿ ಸರಿಪಡಿಸುತ್ತೇವೆ.
– ಸಂಜೀವ ಮಠಂದೂರು, ಶಾಸಕರು
ವೈದ್ಯರು ಉದ್ಧಟತನ ತೋರಿದ್ದಾರೆ

ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ದಲಿತ ಸಮುದಾಯದ ಬಾಲಕಿಯನ್ನು ಭೇಟಿ ಮಾಡಿ ವಿಚಾರಿಸಿದ ಸಂದರ್ಭದಲ್ಲಿ ಆಕೆಗೆ ಸ್ಕೇಲ್ನಲ್ಲಿ ಕೆನ್ನೆಗೆ ಹೊಡೆದಿದ್ದು, ಬೆತ್ತದಲ್ಲಿ ಬಡಿದಿದ್ದು, ಸೊಂಟದಲ್ಲಿ ಬಲ ಇಲ್ಲ ಎಂದು ದೂರಿಕೊಂಡಿದ್ದಾರೆ. ಈ ಕುರಿತು ಖಚಿತಪಡಿಸಿಕೊಳ್ಳಲು ಆಕೆಯನ್ನು ತಪಾಸಣೆ ಮಾಡಿದ ವೈದ್ಯರಿಂದ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಅವರನ್ನು ಕರೆದೆ. ಅಲ್ಲಿಯೇ ಓಡಾಡಿಕೊಂಡಿದ್ದ ವೈದ್ಯರು ಮುಕ್ಕಾಲು ಗಂಟೆ ಕಾದರೂ ಬರಲಿಲ್ಲ.
ಡಿಎಚ್ಒಗೆ ದೂರು ನೀಡಿದೆ. ಅವರ ಕರೆಗೂ ವೈದ್ಯರು ಸ್ಪಂದನೆ ನೀಡಿಲ್ಲ. ಜಿ.ಪಂ. ಅಧ್ಯಕ್ಷರಿಗೇ ಬೆಲೆ ಕೊಡದವರು ಸಾರ್ವಜನಿಕರಿಗೆ ಸ್ಪಂದಿಸುತ್ತಾರಾ? ಬಳಿಕ ನಾನೇ ವೈದ್ಯರ ಬಳಿಗೆ ಹೋಗಿದ್ದೇನೆ.
– ಮೀನಾಕ್ಷಿ ಶಾಂತಿಗೋಡು, ದ.ಕ. ಜಿ.ಪಂ. ಅಧ್ಯಕ್ಷರು
Advertisement

Udayavani is now on Telegram. Click here to join our channel and stay updated with the latest news.

Next