Advertisement

ಕಣ್ಮರೆಯಾದ ತಂಗಿ ಕಣ್ಣೆದುರಾದಾಗ…

11:18 PM Jan 21, 2023 | Team Udayavani |

ಬೆಂಗಳೂರು ಮಲ್ವೇಶ್ವರಂನ ಎಂಇಎಸ್‌ ವಿದ್ಯಾಸಂಸ್ಥೆಗಳು, ಗೌರಿಬಿದನೂರು ವಿದ್ಯಾಸಂಸ್ಥೆಗಳ ಸ್ಥಾಪಕ ಜಿ.ಎ.ಆಚಾರ್ಯ (1904-1972) ಯಶಸ್ವೀ ಉದ್ಯಮಿಯಾಗಿದ್ದರು. ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಥೆ ಆಚಾರ್ಯ ಪಾಠಶಾಲೆಗೆ ಈ ಹೆಸರು ಬರಲು ಕಾರಣವೂ ಇವರೆ. ಅಂತಹ ದಾನಿ. ಮೂಲತಃ ಗೌರಿಬಿದನೂರಿನವರಾದ ಆಚಾರ್ಯರು 10-12 ವರ್ಷದಲ್ಲಿರುವಾಗಲೇ ಬಡತನದಿಂದಾಗಿ ಮುಂಬಯಿ ಸೇರಿದ್ದರು. ಮೈಸೂರು ದಸರಾ ಉತ್ಸವದ ವಸ್ತುಪ್ರದರ್ಶನದಲ್ಲಿ ಕೆಲವು ಸಂಸ್ಥೆಗಳ ಸರಕುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಇಂತಹ ವಸ್ತುಗಳಲ್ಲಿ ಬೆಂಗಾಲ್‌ ಬಲ್ಬ್ ಕೂಡ ಒಂದು. ಆಗ ಇದು ಸ್ವಾತಂತ್ರ್ಯ ಸಂಬಂಧಿತ ಸ್ವದೇಶೀ ಚಿಂತನೆಯ ವ್ಯವಹಾರ. ಅನಂತರ ಇವರೇ ಇದರ ದಾಸ್ತಾನುಗಾರರು, ವಿತರಕರಾದರು. ಮುಂದೆ ಸಂಸ್ಥೆಯ ಪಾಲುದಾರರಾದ ಇವರು ಆಡಳಿತ ಮಂಡಳಿ ಅಧ್ಯಕ್ಷರೂ ಆದರು. ಬಡತನದಲ್ಲಿ ಬೆಳೆದ ಇವರು ವಿದ್ಯಾಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡುತ್ತಿದ್ದ ಫಿಲಾಂತ್ರಫಿಸ್ಟ್‌ ಆಗಿದ್ದರು. ಈ ನಡುವೆ ಸ್ವದೇಶೀ ಆಂದೋಲನ, ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ವಿಚಾರಧಾರೆಗಳ ಪ್ರಕಾಶನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಮೈಸೂರು ವಿಧಾನಸಭೆ ಸದಸ್ಯರಾಗಿಯೂ (1948-52) ಸೇವೆ ಸಲ್ಲಿಸಿದ್ದರು. ಸಿರಿವಂತಿಕೆ ಅವರ ತಲೆಯನ್ನು ಕೆಡಿಸಿರಲಿಲ್ಲ. ಆಚಾರ್ಯರು ಚಿಕ್ಕಂದಿನಲ್ಲೇ ತಂದೆ ತಾಯಿಗಳ ಸಂಪರ್ಕ ಕಳೆದುಕೊಂಡಿದ್ದರು. ತಂದೆ ತಾಯಿ ಮೃತರಾದ ಮೇಲೆ ಬಂಧುಗಳು ಏನಾದರು ಎಂಬುದು ಗೊತ್ತಿರಲಿಲ್ಲ. ಒಮ್ಮೆ ಚೆನ್ನೈಗೆ ಹೋದಾಗ ಸ್ನೇಹಿತರೊಬ್ಬರು ಮನೆಗೆ ಆಹ್ವಾನಿಸಿದರು. ಸ್ನೇಹಿತರು ಮನೆಯವರನ್ನು ಪರಿಚಯಿಸಿದರು. ಸ್ನೇಹಿತರ ತಾಯಿಯನ್ನು ಕಂಡಾಗ ತನ್ನ ತಂಗಿಯನ್ನು ನೋಡಿದಂತೆ ಆಚಾರ್ಯರಿಗೆ ಅನಿಸಿತು.

Advertisement

“ನನ್ನ ಸಹೋದರಿಯೂ ತದ್ವತ್‌ ಹೀಗೆಯೇ ಇದ್ದಂತೆ ನನ್ನ ನೆನಪು. ಚಿಕ್ಕಂದಿನಲ್ಲೇ ಮನೆ ಬಿಟ್ಟು ಹೋದೆನಾದ ಕಾರಣ ತಂಗಿಯ ರೂಪು ನನ್ನ ಮನಸ್ಸಿನಲ್ಲಿ ಅಸ್ಪಷ್ಟವಾಗಿದೆ’ ಎಂದರು. ಆಚಾರ್ಯರು ಇವರ ಬಗೆಗೆ ವಿಚಾರಿಸಿದಾಗ ಸ್ನೇಹಿತರು “ಈ ನಮ್ಮಮ್ಮ ನನ್ನ ಪಾಲಿನ ದೇವರು. ನನ್ನ ಪಾಲಿನ ದೇವರೆಂದೇ ಕಾಣುತ್ತೇನೆ. ನಾನು ಮಗುವಾಗಿದ್ದಾಗ ನನ್ನ ತಾಯಿ ನಿಧನ ಹೊಂದಿದರು. ನನ್ನನ್ನು ನೋಡಿಕೊಳ್ಳಲು ದೇವರೇ ಇವರನ್ನು ಕಳಿಸಿದ ಎಂದು ತೋರುತ್ತದೆ. ನನ್ನನ್ನು ಎತ್ತಿ ಆಡಿಸಿ ದೊಡ್ಡವನನ್ನಾಗಿ ಮಾಡಿದರು. ಇಂದು ನಾನು ಒಬ್ಬ ಗಣ್ಯ ಮನುಷ್ಯನೆನಿಸಿರಬೇಕಾದರೆ ಈಕೆಯ ಅಕ್ಕರೆ, ಆಶೀರ್ವಾದ ಕಾರಣ. ನಾನು ಇವರನ್ನು ನನ್ನ ಸಾಕ್ಷಾತ್‌ ತಾಯಿಯೆಂದೇ ಭಾವಿಸುತ್ತೇನೆ. ನಮ್ಮ ಮನೆಯಲ್ಲಿ ಎಲ್ಲರೂ ಬಹಳ ಪ್ರೀತಿ ಗೌರವಗಳಿಂದ ಇವರನ್ನು ನೋಡಿಕೊಳ್ಳುತ್ತೇವೆ’ ಎಂದರು. ಆಚಾರ್ಯರಿಗೆ ಬಹಳ ಸಂತೋಷವಾಯಿತು. ಸ್ನೇಹಿತರ ತಾಯಿಯನ್ನು ವಿಚಾರಿಸಿದಾಗ ಅವರು ಸಾಕ್ಷಾತ್‌ ತನ್ನ ತಂಗಿಯೇ ಎಂಬುದು ಮನದಟ್ಟಾಯಿತು. “ತಂಗಿಯನ್ನು ಮನೆಗೆ ಕರೆಯಲೆ?’ ಎಂದು ಆಚಾರ್ಯರಿಗೆ ಅನಿಸಿತಂತೆ. ಆದರೆ ಸ್ನೇಹಿತನ ತಾಯಿಯನ್ನು ಅವನಿಂದ ಬೇರ್ಪಡಿಸಲು ನನಗೇನು ಅಧಿಕಾರ? ಎಂದು ಅನ್ನಿಸಿ ಸುಮ್ಮನಾದರಂತೆ. ಆದರೆ ಚೆನ್ನೈಗೆ ಹೋಗುತ್ತಿದ್ದಾಗ ತಂಗಿಯನ್ನು ಕಾಣಲು ಮಾತ್ರ ಆಚಾರ್ಯರು ಮರೆಯುತ್ತಿರಲಿಲ್ಲ. ಈ ವಿಷಯವನ್ನು ಸ್ವಾತಂತ್ರÂ ಹೋರಾಟಗಾರ, ಶತಾಯುಷಿ ಎಚ್‌.ಎಸ್‌.ದೊರೆಸ್ವಾಮಿಯವರು “ನೆನಪಿನ ಸುರುಳಿ ತೆರೆದಾಗ’ ಪುಸ್ತಕದಲ್ಲಿ ಸ್ವತಃ ಜಿ.ಎ.ಆಚಾರ್ಯರೇ ತನಗೆ ಹೇಳಿದ ವಿಚಾರ ಎಂದು ದಾಖಲಿಸಿದ್ದಾರೆ.

ಆಚಾರ್ಯರ ಪುತ್ರಿ ಬೆಂಗಳೂರಿನಲ್ಲಿರುವ ರೇಖಾ ಚಂದ್ರಶೇಖರ್‌, ಗೌರಿಬಿದನೂರಿನಲ್ಲಿರುವ ಮೊಮ್ಮಗ ಸುಧಾಕರ್‌ ಅವರಿಗೆ ಈ ವಿಚಾರ ಯಾವುದೂ ತಿಳಿದಿಲ್ಲ. ಶತಾಯುಷಿ ದೊರೆಸ್ವಾಮಿಯವರು 2021ರಲ್ಲಿ ನಿಧನ ಹೊಂದಿದವರು. 1997ರಲ್ಲಿ ಈ ಪುಸ್ತಕ ಹೊರಬಂದಿತ್ತು. ದೊರೆಸ್ವಾಮಿಯವರು ಇತ್ತೀಚಿನವರೆಗೂ ಇದ್ದವರಾದ ಕಾರಣ ಇದು ಸತ್ಯದಿಂದ ಕೂಡಿದೆ ಎಂದು ಹೇಳಬಹುದು.  ಜಿ.ಎ. ಆಚಾರ್ಯರು ಮನೆಯಲ್ಲಿ ಈ ವಿಷಯ ತಿಳಿಸಿಲ್ಲದೆಯೂ ಇರಬಹುದು. ರೇಖಾ ಅವರಿಗೆ  ದೊಡ್ಡಮ್ಮ ಇರುವುದು ಗೊತ್ತಿತ್ತು. ಆದರೆ ಚಿಕ್ಕಮ್ಮ ಇರುವುದು ಗೊತ್ತಿಲ್ಲ. ಆಚಾರ್ಯರು ಉದ್ದೇಶಪೂರ್ವಕವಾಗಿಯೇ ಹೇಳದೆ ಇದ್ದಿರಲೂಬಹುದು. ಇದು ಒಂಥರ ಸಿನೆಮಾದ ಕಥೆಯಂತೆ ಕಾಣುತ್ತದೆ. ಕೆಲವು ಕಾದಂಬರಿಗಳನ್ನು ಓದಿದಾಗ ಅದು ನಮ್ಮನ್ನೇ (ಓದುವವರನ್ನು) ಕುರಿತು ಹೇಳಿದಂತೆ ಕಾಣವುದಿಲ್ಲವೆ? ಇದಕ್ಕೆ ಘಟನೆಯ ಹಿಂದಿರುವ ನೈಜತೆಯೇ ಕಾರಣ. ಘಟನೆಗಳಿಗೆ ಮಹತ್ವ ಬರುವುದು, ಜನರಿಗೆ ಇದು ಆಪ್ಯಾಯಮಾನವಾಗುವುದು ಈ ಕಾರಣ ಕ್ಕಾಗಿ. ಇಂತಹ ಘಟನಾವಳಿಗಳು ಅಚಾನಕ್ಕಾಗಿ ಅಪರೂಪದಲ್ಲಿ ನಡೆಯುವುದನ್ನು ಅಲ್ಲಗಳೆಯುವಂತಿಲ್ಲ.

-ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next