Advertisement

ನಿಲ್ಲದ ಯುದ್ಧ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

11:56 PM Jul 31, 2022 | Team Udayavani |

ಬೆಂಗಳೂರು: ವೈದ್ಯ ಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ವಾಪಸಾಗಿ 5 ತಿಂಗಳು ಕಳೆದಿದ್ದು, ಇದೀಗ ಕೇಂದ್ರ ಸರಕಾರವು ಯಾವುದೇ ಅವಕಾಶ ಕಲ್ಪಿಸದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.

Advertisement

ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಮಾರ್ಚ್‌ ಮೊದಲ ವಾರದಲ್ಲಿ ಭಾರತಕ್ಕೆ ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಯುದ್ಧ ಮುಗಿದ ಅನಂತರ ಮತ್ತೆ ಉಕ್ರೇನ್‌ಗೆ ಹೋಗಬೇಕು ಎಂಬುದು ಭಾಗಶಃ ವಿದ್ಯಾರ್ಥಿಗಳ ಹಂಬಲವಾಗಿದೆ. ಆದರೆ, ಯುದ್ಧ ನಡೆಯುತ್ತಲೇ ಇರುವುದರಿಂದ ಮುಂದೇನು ಮಾಡುವುದು ಎಂಬ ಅನಿಶ್ಚಿತತೆ ಮತ್ತು ಗೊಂದಲದಿಂದ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಲುಕಿದ ಹಾಗಾಗಿದೆ.

ರಾಜ್ಯದಲ್ಲಿ ಸುಮಾರು 650 ವಿದ್ಯಾರ್ಥಿಗಳಿದ್ದು, ಉಕ್ರೇನ್‌ನಿಂದ ವಾಪಸಾದ ಅನಂತರ ಏಪ್ರಿಲ್‌/ಮೇ ತಿಂಗಳಿನಲ್ಲಿ ಆನ್‌ಲೈನ್‌ ಮೂಲಕ 2,4 ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗೆ ಹಾಜರಾಗಿದ್ದಾರೆ. ಇದರ ಜತೆಗೆ ಆಯಾ ಪ್ರಾದೇಶಿಕವಾರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೂ ಒಳಗಾಗಿದ್ದಾರೆ. ಮೈಸೂರಿನ ಜೆಎಸ್‌ಎಸ್‌, ಬೆಳಗಾವಿಯ ಕೆಎಲ್‌ಇ ಸೇರಿ ವಿವಿಧ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ 3ನೇ ಸೆಮಿಸ್ಟರ್‌ ಆಫ್ಲೈನ್‌ ತರಗತಿಗಳನ್ನು ನಡೆಸುವುದಾಗಿ ಉಕ್ರೇನ್‌ನ ಖಾಕೀìವ್‌ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದೆ.

ಆದರೆ, ಯುದ್ಧ ಇನ್ನೂ ನಿಂತಿಲ್ಲದ ಕಾರಣ ತಮ್ಮ ಮಕ್ಕಳನ್ನು ವಾಪಸ್‌ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅದರ ಬದಲಾಗಿ ಭಾರತದಲ್ಲಿಯೇ ಅಥವಾ ಉಕ್ರೇನ್‌ ಹೊರತುಪಡಿಸಿ ವಿದೇಶಗಳಲ್ಲಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ.

ದೇಶದಲ್ಲೇ ಮುಂದುವರಿಕೆ ಆಸಕ್ತಿ
ವಿದ್ಯಾರ್ಥಿಗಳು ಈವರೆಗೆ ಏನಾದರೂ ದಾರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಇದೀಗ ಸರಕಾರ ಕೈಚೆಲ್ಲಿರುವುದರಿಂದ ಮೊದಲ ವರ್ಷ ಮಾತ್ರ ಮುಗಿಸಿರುವ ವಿದ್ಯಾರ್ಥಿಗಳು, ಮತ್ತೆ ಉಕ್ರೇನ್‌ಗೆ ಹೋಗುವ ಬದಲು ಭಾರತದಲ್ಲಿಯೇ ಮುಂದಿನ ವರ್ಷ ವೈದ್ಯಕೀಯ ಕೋರ್ಸ್‌ಗಳ ನೀಟ್‌ ಪರೀಕ್ಷೆ ಬರೆಯಲು ಕೆಲವು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಕೆಲವರು ಎಂಜಿನಿಯರಿಂಗ್‌, ಕಾನೂನು ಪದವಿ ಇನ್ನಿತರ ಕೋರ್ಸ್‌ಗಳತ್ತಲೂ ಗಮನ ಹರಿಸುತ್ತಿದ್ದಾರೆ.

Advertisement

ವಿದ್ಯಾರ್ಥಿಗಳ ಸಮಸ್ಯೆಗಳೇನು?
ಅಂಕಪಟ್ಟಿ ಸೇರಿ ವಿದ್ಯಾರ್ಥಿಗಳ ಶೈಕ್ಷಣಿಕ ಮೂಲ ದಾಖಲಾತಿಗಳು ಉಕ್ರೇನ್‌ನ ವಿಶ್ವವಿದ್ಯಾಲಯಗಳಲ್ಲಿಯೇ ಉಳಿದುಕೊಂಡಿವೆ. ವಿದ್ಯಾರ್ಥಿಗಳು ಇದೀಗ ಬೇರೊಂದು ಕೋರ್ಸ್‌ ಮಾಡಬೇಕಾದರೆ ಮೂಲ ದಾಖಲಾತಿಗಳು ಅಗತ್ಯವಾಗಿದೆ. ಇದನ್ನು ಅಲ್ಲಿಂದ ತರಿಸಿಕೊಡುವುದು ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರಕಾರಗಳು ಮಾಡಬೇಕು. ಇದರ ಜತೆಗೆ ರುಮೇನಿಯಾ, ಪೋಲೆಂಡ್‌, ರಷ್ಯಾ ಸೇರಿ ಹಲವು ದೇಶಗಳು ಉಕ್ರೇನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿವೆ. ಅಲ್ಲಿಗೆ ಹೋಗಲು ಸರಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದರೆ, ಅನುಕೂಲವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಬೆಂಗಳೂರಿನ ಸ್ವಾತಿ.

ಮತ್ತೆ ಉಕ್ರೇನ್‌ಗೆ ಹೋಗುತ್ತೇವೆ
ಈಗಾಗಲೇ ಒಂದು ವರ್ಷ ವೈದ್ಯಕೀಯ ಶಿಕ್ಷಣ ಮುಗಿದಿದೆ. ಇದೀಗ ಮತ್ತೆ ಬೇರೆ ಕೋರ್ಸ್‌ಗಳತ್ತ ಗಮನ ಹರಿಸುವುದರಿಂದ ಆರ್ಥಿಕವಾಗಿ ಸಮಸ್ಯೆಯಾಗ ಲಿದೆ. ಒಂದು ವರ್ಷ ಕೂಡ ಅನಾವಶ್ಯಕವಾಗಿ ವ್ಯರ್ಥವಾಗ ಲಿದೆ. ಆದ್ದರಿಂದ ಮುಂದಿನ ಸೆಮಿಸ್ಟರ್‌ ತರಗತಿಗಳಿಗೆ ಉಕ್ರೇನ್‌ಗೆ ಮತ್ತೆ ವಾಪಸಾ ಗಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಬೆಂಗಳೂರಿನ ರಿಚಾಸೋಮ್‌.

ಉಕ್ರೇನ್‌ಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಸಂಬಂಧಿಸಿ ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿನಿಂದ (ಎನ್‌ಎಂಸಿ) ಈವರೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಎನ್‌ಎಂಸಿ ನಿರ್ದೇಶನದಂತೆ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಧರಿಸಲು ಸಾಧ್ಯವಿಲ್ಲ.
– ಡಾ| ಬಿ.ಎಲ್‌. ಸುಜಾತಾ ರಾಥೋಡ್‌, ವೈದ್ಯಕೀಯ ಶಿಕ್ಷಣ ನಿರ್ದೇಶಕಿ

– ಎನ್‌.ಎಲ್‌. ಶಿವಮಾದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next