Advertisement

ಎಂಬಿಬಿಎಸ್‌ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

03:03 PM May 09, 2022 | Team Udayavani |

ಚಿಕ್ಕಮಗಳೂರು: ಯುದ್ಧಪೀಡಿತ ಉಕ್ರೇನ್‌ನಿಂದ ಮರಳಿದ ಜಿಲ್ಲೆಯ ಎಂಬಿಬಿಎಸ್‌ ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ. ಸರ್ಕಾರ ಇವರ ನೆರವಿಗೆ ಬಾರದಿರುವುದರಿಂದ ವಿದ್ಯಾರ್ಥಿಗಳಿಗೆ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

Advertisement

ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ 5 ಜನ ಎಂಬಿಬಿಎಸ್‌ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಸರ್ಕಾರ ತಾಯ್ನಾಡಿಗೆ ಕರೆತಂದಿತು. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದ ಸರ್ಕಾರದ ಈ ನಡೆಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ ಬಳಿಕ ಅವರ ವಿದ್ಯಾಭ್ಯಾಸಕ್ಕೆ ತೊಡಕ್ಕಾಗದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಉಕ್ರೇನ್‌ನಿಂದ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿ ತಿಂಗಳುಗಳೇ ಕಳೆದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆ ಹುಸಿಯಾಗಿದ್ದು, ಯುದ್ಧಪೀಡಿತ ಉಕ್ರೇನ್‌ಗೆ ಮರಳಲು ಸಾಧ್ಯವಾಗದೆ ಇತ್ತ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಜಿಲ್ಲೆಯ ಕಡೂರು, ಸಖರಾಯಪಟ್ಟಣ, ಚಿಕ್ಕಮಗಳೂರು, ಆಲ್ದೂರು ಸೇರದಿಂತೆ ಇತರೆಡೆಯ 5 ವಿದ್ಯಾರ್ಥಿಗಳು ಉಕ್ರೇನ್‌ನಿಂದ ಮರಳಿದ್ದು, ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಸೇರಿದಂತೆ ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಇದ್ದು ಅವರ ಭವಿಷ್ಯ ಅತಂತ್ರವಾಗಿದೆ.

ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರ

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಇಲ್ಲೇ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಚಿವ ಡಾ| ಕೆ.ಸುಧಾಕರ್‌ ಹಾಗೂ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಶಿಕ್ಷಣ ಸಂಬಂಧ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಕೆಲವು ತಿಂಗಳುಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದು ಮುಂದೇನು ಮಾಡಬೇಕೆಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕೆನ್ನುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆಗ್ರಹವಾಗಿದೆ.

ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದುವರೆಗೂ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಮೈಸೂರು ಜೆಎಸ್‌ಎಸ್‌ ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿದೆ. ಉಕ್ರೇನ್‌ ಕಾರ್ಕಿವ್‌ ಯೂನಿರ್ವಸಿಟಿ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ. ಸದ್ಯ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆದುಕೊಳ್ಳಲಾಗುತ್ತಿದೆ. ಮತ್ತೆ ಉಕ್ರೇನ್‌ಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಕೆಲವು ಮೆಡಿಕಲ್‌ ಕಾಲೇಜುಗಳು ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿವೆ. ಇದರಿಂದ ಪ್ರಯೋಜನವಿಲ್ಲ ಆದ್ದರಿಂದ ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ರಾಜ್ಯ ಸರ್ಕಾರ ಶೀಘ್ರವೇ ಅವಕಾಶ ಕಲ್ಪಿಸಿಕೊಡಬೇಕು.? – ಮನೋಜ್‌, ಉಕ್ರೇನ್‌ನಿಂದ ಮರಳಿದ ಎಂಬಿಬಿಎಸ್‌ ವಿದ್ಯಾರ್ಥಿ

ಉಕ್ರೇನ್‌ನಿಂದ ಬಂದ ಜಿಲ್ಲೆಯ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಮೈಸೂರು ಜೆಎಸ್‌ ಎಸ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಣ ನೀಡುವುದಾಗಿ ಹೇಳಿದೆ. ಈಗಾಗಲೇ ಮೇಲ್‌ ಕಳಿಸಲಾಗಿದೆ. ಮೇ 11ರಿಂದ ದಾಖಲಾಗುವಂತೆ ತಿಳಿಸಿದೆ. ಆದರೆ ಇದು ತಾತ್ಕಾಲಿಕವಾಗಿದೆ. ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಗೆ ಮನವಿ ಮಾಡಲಾಗಿದ್ದು ಪ್ರಯೋಜನವಾಗಿಲ್ಲ. ಈ ಸಂಬಂಧ ರಾಜ್ಯ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಿ. -ಅರುಣ್‌ಕುಮಾರ್‌, ಎಂಬಿಬಿಎಸ್‌ ವಿದ್ಯಾರ್ಥಿ

ಸಂದೀಪ್‌ ಜಿ.ಎನ್. ಶೇಡ್ಗಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next