Advertisement

ನಮಸ್ತೆ ನಿಯೋ

10:02 AM Feb 11, 2020 | Suhan S |

ಹಣಕಾಸು ಸೇವೆಗಳು ಮತ್ತು ಬ್ಯಾಂಕುಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಬ್ಯಾಂಕ್‌ ಅಂದ ತಕ್ಷಣ ಒಂದು ದೊಡ್ಡ ಕಟ್ಟಡ, ಅದರಲ್ಲಿ ಆಕರ್ಷಕವಾಗಿ ಇಟ್ಟಿರುವ ಪೀಠೊ ಪಕರಣ ಗಳು, ಹತ್ತಾರು ಸಿಬ್ಬಂದಿಗಳು, ಟೆಲಿಫೋನ್‌, ಕಂಪ್ಯೂಟರ್‌, ಗ್ಲಾಸ್‌ ಕ್ಯಾಬಿನ್‌, ಟೇಬಲ್‌ ತುಂಬ ಬಿದ್ದಿರುವ ಕಡತಗಳು, ಸರದಿಯಲ್ಲಿ ಕಾಯುತ್ತಿರುವ ಜನರು, ಮೂಲೆಯ ಸ್ಟಾಂಡ್‌ ಒಂದರಲ್ಲಿ ಸಿಕ್ಕಿಸಿದ ಪೆನ್‌ನಲ್ಲಿ ಡ್ರಾಫ್ಟ್ ಬರೆಯುತ್ತಿರುವ ಮಂದಿ, ಹೀಗೆ ಗಿಜಿಗಿಡುವ ಚಿತ್ರಣ ಕಣ್ಮುಂದೆ ಬರುತ್ತದೆ. ಈಗಿನ ಬ್ಯಾಂಕ್‌ನ ಪರಿಕಲ್ಪನೆ ಅದೆಷ್ಟೋ ದಶಕಗಳ ಹಿಂದಿನದ್ದು. ಡಿಜಿಟಲ್‌ ಬ್ಯಾಂಕಿಂಗ್‌ನಿಂದಾಗಿ ಆ ಪರಿಕಲ್ಪನೆ ನಿಧಾನವಾಗಿ ಬದಲಾಗುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರ ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆ ಕಾಣಲಿದೆ. ಈ ದೆಸೆಯಲ್ಲಿ ಭವಿಷ್ಯದಲ್ಲಿ “ನಿಯೋ ಬ್ಯಾಂಕಿಂಗ್‌’ ವ್ಯವಸ್ಥೆ ಬರಲಿದೆ ಎನ್ನುತ್ತಾರೆ ತಜ್ಞರು.

Advertisement

ಏನಿದು ನಿಯೋ ಬ್ಯಾಂಕಿಂಗ್‌? :  “ನಿಯೋ ಬ್ಯಾಂಕಿಂಗ್‌’ ಎಂದರೆ ನೂರಕ್ಕೆ ನೂರು ಪ್ರತಿಶತ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ. ಈ ವ್ಯವಸ್ಥೆಯಲ್ಲಿ ಬ್ಯಾಂಕ್‌ ಕಟ್ಟಡಗಳೇ ಇರುವುದಿಲ್ಲ. ಎಲ್ಲವೂ ಇಂಟರ್‌ನೆಟ್‌ ಮೂಲಕ ನಡೆಯುತ್ತದೆ. ಇದು, ಈಗಿನ ಸಾಂಪ್ರದಾಯಿಕ ಬ್ಯಾಂಕಿಂಗ್‌ ಕಲ್ಪನೆಯಿಂದ ಹೊರಗಿರುವ 100% ಡಿಜಿಟಲ್‌ ಮಾದರಿಯ ವ್ಯವಸ್ಥೆ. ಗ್ರಾಹಕರು, ಪೋನ್‌ ಕರೆ, ಮೊಬೈಲ್‌ ಆ್ಯಪ್‌ ಮತ್ತು ಕಂಪ್ಯೂಟರ್‌ ಮೂಲಕ ಈ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಇದು, ಒಂದು ನಿರ್ದಿಷ್ಟ ಬಿಲ್ಡಿಂಗ್‌ನಲ್ಲಿ ಕಾರ್ಯ  ನಿರ್ವಹಿಸದೇ ಇರುವುದರಿಂದ ಬ್ಯಾಂಕ್‌ ಇರುವ ಸ್ಥಳ ಎಲ್ಲೂ ಕಾಣುವುದಿಲ್ಲ. ಈಗಿನ ಬ್ಯಾಂಕ್‌ಗಳಂತೆ ಭೌತಿಕ ಅಸ್ತಿತ್ವ ಇರುವುದಿಲ್ಲ.

ಇದನ್ನು digital and mobile first solution ಹಣ ವರ್ಗಾವಣೆ, ಪೇಮೆಂಟ್‌  ಮತ್ತು ಸಾಲ ನೀಡುವ “fintech firm’   ಎಂದೂ ಕರೆಯುತ್ತಾರೆ. ಸಂಕಿಪ್ತವಾಗಿ ಇದನ್ನು “Financial Sevice Provider’ ಎಂದೂ ಹೇಳುತ್ತಾರೆ. ದೇಶದಲ್ಲಿನ ಹಣಕಾಸು ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ “ನಿಯೋ ಬ್ಯಾಂಕಿಂಗ್‌’ ಒಂದು ದೊಡ್ಡ ಹೆಜ್ಜೆಯಾಗಲಿದೆ. ಈ ವ್ಯವಸ್ಥೆ ಬಹಳ ಬೇಗ ಜನಪ್ರಿಯತೆ ಗಳಿಸಲಿದೆ ಎನ್ನುವ ಆಶಾಭಾವನೆ ಹಣಕಾಸು ವಲಯದಲ್ಲಿ ವ್ಯಕ್ತವಾಗಿದೆ.

ಬ್ಯಾಂಕ್‌ ವ್ಯವಸ್ಥೆಯ ಸರಳೀಕರಣ :  ಇದು ಸ್ವತಂತ್ರವಾಗಿ ಅಥವಾ ಸಾಂಪ್ರದಾಯಿಕ ಬ್ಯಾಂಕ್‌ನ (ಬ್ಯಾಂಕಿಂಗ್‌ ನಿಯಂತ್ರಕರ ನಿರ್ದೇಶನವನ್ನು ಪಾಲಿಸಲು ಅನುವಾಗುವ ಹಾಗೆ) ಸಹಯೋಗ  ದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಹೊಸ ರೂಪ ಕೊಡುತ್ತಿರುವ ನಿಯೋ ಬ್ಯಾಂಕಿಂಗ್‌, ಭಾರತದಲ್ಲಿ ಸ್ವಲ್ಪ ಹೊಸತು ಎನಿಸಿದರೂ, ಕೆಲವು ವರ್ಷಗಳಿಂದ ಅಮೆರಿಕಾ ಮತ್ತು ಕೆಲವು ಯುರೋಪಿಯನ್‌ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಬ್ಯಾಂಕಿನ ವಿಶೇಷ ಎಂದರೆ ಇದರ end to end service ಡಿಜಿಟಲ್‌ ಆಗಿರುತ್ತದೆ. ರಿಸರ್ವ್‌ ಬ್ಯಾಂಕ್‌ ಹಣಕಾಸು ಸೇವೆಯಲ್ಲಿ ಡಿಜಿಟಲೀಕರಣಕ್ಕೆ ಒತ್ತು ಕೊಡುತ್ತಿರುವಾಗ, ನಿಯೋ ಬ್ಯಾಂಕ್‌ಗಳು ಹಣಕಾಸು ಜಗತ್ತನ್ನು ಸರಳೀಕರಿಸಿ, ಗ್ರಾಹಕ ಕೇಂದ್ರೀಕೃತ ಡಿಜಿಟಲ್‌ ವ್ಯವಸ್ಥೆಯನ್ನು ಪ್ರಚುರಪಡಿಸುತ್ತಿವೆ.

ನಿಯೋ ಬ್ಯಾಂಕುಗಳು ಭಾರತದಲ್ಲಿ ನಿಯೋ ಬ್ಯಾಂಕುಗಳು ಇನ್ನೂ ಶೈಶಾವಸ್ಥೆಯಲ್ಲಿವೆ ಎಂದು ಹೇಳಬಹುದು. ಅವುಗಳ ಬಳಕೆಯ ಬಗೆಗೆ ಮತ್ತು ಉಪಯುಕ್ತತೆಯ ಬಗೆಗೆ ಮಾಹಿತಿ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಇಂಥ ಕೆಲವು ಬ್ಯಾಂಕುಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಕೆಲವು ಇಂತಿವೆ.

Advertisement

1 ನಿಯೋ: ಸಂಬಳ ಪಡೆಯುವವರಿಗಾಗಿ ವಿನ್ಯಾಸಗೊಳಿಸಿದ ಬ್ಯಾಂಕಿಂಗ್‌ ವ್ಯವಸ್ಥೆ. ಸುಮಾರು 5 ಲಕ್ಷ ಗ್ರಾಹಕರಿದ್ದು, 3000 ಕಾರ್ಪೋರೆಟ್‌ ಸಂಸ್ಥೆಗಳ ಜೊತೆ ಸಹಯೋಗ ಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

2 ಕೋಟಕ್‌ 811: ಇದು ಕೋಟಕ್‌ ಮಹೀಂದ್ರರವರ ಡಿಜಿಟಲ್‌ ಬ್ಯಾಂಕ್‌. ಒಂದೂವರೆ ಕೋಟಿಗೂ ಅಧಿಕ ಬಳಕೆದಾರರಿಗೆ ಸೇವೆ ಸಲ್ಲಿಸುತ್ತಿದೆ.

3 ಓಪನ್‌: 2017 ರಲ್ಲಿ ಸ್ಥಾಪಿತಗೊಂಡ ಇದು, ಐಸಿಐಸಿಐ ಬ್ಯಾಂಕಿನ ಸಹಯೋಗದೊಂದಿಗೆ ಕಾರ್ಯಾಚರಿಸುತ್ತಿದೆ.

4 ಯೋನೋ ಎಸ್‌ಬಿಐ: ಇದು ಸ್ಟೇಟ್‌ಬ್ಯಾಂಕ್‌ನ ಡಿಜಿಟಲ್‌ ಪ್ಲಾಟ್‌ಫಾರ್ಮ್. ದೈನಂದಿನ ಅಗತ್ಯಗಳಿಗೆ, ಜೀವನಶೈಲಿಗೆ ಸಹಾಯವಾಗುವ ಹಾಗೆ ಇದನ್ನು ರೂಪಿಸಲಾಗಿದೆ. ಇತ್ತೀಚೆಗೆ ಕಾರ್ಡ್‌ ರಹಿತ ಹಣ ಡ್ರಾ ಮಾಡುವ ಸೌಲಭ್ಯವನ್ನೂ ಒದಗಿಸಿದೆ.­

 

ತೆರಿಗೆ ಕಟ್ಟದವರಿಗೆ ವಾಯ್ಸ ಮೇಲ್‌! : ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟದಿರುವ ಸಮಸ್ಯೆ ಅಭಿವೃದ್ಧಿ ಶೀಲ ರಾಷ್ಟ್ರಗಳದೊಂದೇ ಸಮಸ್ಯೆಯಲ್ಲ, ಮುಂದುವರಿದ ದೇಶಗಳಲ್ಲೂ ಕಾಣಬಹುದು. ಹೀಗಾಗಿ ಅದು ಜಾಗತಿಕ ಸಮಸ್ಯೆ ಎಂದೂ ಪರಿಗಣಿಸಬಹುದು. ಇಂಗ್ಲೆಂಡ್‌ನ‌ಲ್ಲೂ ಜನರು ತಡವಾಗಿ ತೆರಿಗೆ ಕಟ್ಟುವ ಪ್ರವೃತ್ತಿ ಕಂಡುಬಂದಿತ್ತು. ಆಗ, ಜನರಲ್ಲಿ ತೆರಿಗೆ ಕುರಿತು ಜಾಗೃತಿ ಮೂಡಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡರು. ಆದರೆ, ಈ ಹಿಂದೆಯೂ ಅಂಥಾ ಪ್ರಯತ್ನಗಳು ನಡೆದಿದ್ದವು. ಅವ್ಯಾವುವೂ ನಿರೀಕ್ಷಿತ ಫಲ ನೀಡಿರಲಿಲ್ಲ. ಹೀಗಾಗಿ, ಈ ಬಾರಿ ವಿನೂತನ ಪ್ರಯತ್ನಕ್ಕೆ ಕೈಹಾಕಬೇಕೆಂದು ನಿರ್ಧರಿಸಿದರು. ಆ ವಿನೂತನ ಪ್ರಯತ್ನ ಏನೆಂದರೆ ಯಾರು ಯಾರು ತೆರಿಗೆ ಪಾವತಿಸಿಲ್ಲವೋ ಅವರ ಮೊಬೈಲಿಗೆ ಕರೆ ಮಾಡಿ ರೆಕಾರ್ಡೆಡ್‌ ವಾಯ್ಸ ಮೇಲ್‌ ಕೇಳಿಸುವುದು. ಆ ವಾಯ್ಸ ಮೇಲ್‌ನಲ್ಲಿ “ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಹತ್ತರಲ್ಲಿ 9 ಮಂದಿ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿದ್ದಾರೆ.’ ಎಂಬ ಸಂದೇಶವಿತ್ತು. ಅದರಿಂದಾಗಿ, ಕರೆ ಸ್ವೀಕರಿಸಿದವರಿಗೆ ಹತ್ತರಲ್ಲಿ ತೆರಿಗೆ ಪಾವತಿಸದೇ ಉಳಿದ ಏಕೈಕ ವ್ಯಕ್ತಿ ತಾನು ಎಂಬುದು ತಿಳಿದುಹೋಗಿ ತಪ್ಪಿತಸ್ಥ ಭಾವನೆ ಮೂಡಿತು. ಅಧಿಕಾರಿಗಳ ಈ ವಿನೂತನ ಉಪಾಯದಿಂದ ತೆರಿಗೆ ಪಾವತಿಸದೇ ಇದ್ದವರಲ್ಲಿ ಶೇ. 20 ಮಂದಿ ಆ ಕೂಡಲೆ ತೆರಿಗೆ ಪಾವತಿಸಿದರು. ಅದು ಚಿಕ್ಕ ಉಪಾಯಕ್ಕೆ ಸಂದ ದೊಡ್ಡ ಯಶಸ್ಸೇ ಸರಿ!­

 

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next