Advertisement

Dharmasthala ಅನ್ನದಾನಕ್ಕೆ ಮತ್ತಷ್ಟು ಮಹತ್ವ : ಡಾ| ವೀರೇಂದ್ರ ಹೆಗ್ಗಡೆ

01:42 AM Jul 02, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ಅನ್ನಪೂರ್ಣಾ ಛತ್ರದಲ್ಲಿ ನಿತ್ಯವೂ ಸಾವಿರಾರು ಮಂದಿ ಭಕ್ತರಿಗೆ ನಡೆಯುವ ಅನ್ನ ದಾನದ ಪುಣ್ಯಕಾರ್ಯಕ್ಕೆ ಸೆಲ್ಕೊ ಪ್ರತಿಷ್ಠಾನದಿಂದ ಕೊಡಮಾಡಿದ ಸೌರ ವಿದ್ಯುತ್‌ ಸ್ಥಾವರದಿಂದ ಅನ್ನದಾನಕ್ಕೆ ಮತ್ತಷ್ಟು ಮಹತ್ವ ಬಂದಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಧರ್ಮಸ್ಥಳದಲ್ಲಿ ಸೋಮವಾರ ಅನ್ನಪೂರ್ಣಾ ಛತ್ರ ಹಾಗೂ ಕಾರ್‌ ಮ್ಯೂಸಿಂಗೆ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡಿದ 37 ಕೆವಿ ಸೌರಶಕ್ತಿ ಬಳಕೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 30 ವರ್ಷಗಳಿಂದಲೇ ಸೌರಶಕ್ತಿ ಬಳಕೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅರಿವು, ಜಾಗೃತಿ ಮೂಡಿಸಲಾಗಿದೆ. 3 ಲಕ್ಷ ಸೌರಶಕ್ತಿ ಯುನಿಟ್‌ ಒದಗಿಸಲಾಗಿದೆ.

ಲಂಡನ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಶೆನ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸ್ಮರಿಸಿಕೊಂಡರು.

ಸೆಲ್ಕೊ ಪ್ರತಿಷ್ಠಾನದ ಸಿ.ಇ.ಒ. ಭಾಸ್ಕರ ಮೋಹನ ಹೆಗಡೆ ಮಾತನಾಡಿ, ಹರೀಶ್‌ ಹಂದೆಯವರ ನೇತೃತ್ವ ಮತ್ತು ದೂರದೃಷ್ಟಿಯ ಯೋಜನೆಯಿಂದ ಸೌರಶಕ್ತಿಯ ಬಳಕೆ ಹೆಚ್ಚಾಗುತ್ತಿದೆ. ಸೆಲ್ಕೊ ಪ್ರತಿಷ್ಠಾನವು ಜನರ ಅವಶ್ಯಕತೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಹೊರತು ಲಾಭದ ದೃಷ್ಟಿಕೋನದಿಂದ ಅಲ್ಲ. ಪೂಜ್ಯ ಹೆಗ್ಗಡೆಯವರ ಮಾರ್ಗ ದರ್ಶನದಲ್ಲಿ 2001ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 1,500 ಸೌರಘಟಕಗಳನ್ನು ಪ್ರಾರಂ ಭಿಸಲಾಗಿತ್ತು ಎಂದರು.

Advertisement

ಅನ್ನಪೂರ್ಣಾ ಛತ್ರಕ್ಕೆ 32 ಕೆ.ವಿ. ಸಾಮರ್ಥ್ಯದ ಘಟಕ ಹಾಗೂ ಕಾರ್‌ ಮ್ಯೂಸಿಯಂಗೆ 5 ಕಿಲೋವಾಟ್‌ ಸಾಮರ್ಥ್ಯದ ಘಟಕ ಸಹಿತ ಒಟ್ಟು 37 ಕಿಲೋವಾಟ್‌ ಸಾಮರ್ಥ್ಯದ ಎರಡು ಘಟಕಗಳನ್ನು ಅಳವಡಿಸಿ ಸೌರಶಕ್ತಿ ಬಳಕೆಯೊಂದಿಗೆ ವಿದ್ಯುತ್‌ ದೀಪ ಮತ್ತು ಫ್ಯಾನ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಲಾಗಿದೆ.

ಹೇಮಾವತಿ ವೀ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಸೆಲ್ಕೋದ ಡಿ.ಜಿ.ಎಂ. ಗುರುಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು. ಅನ್ನಪೂರ್ಣಾದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿ, ನವೀನ್‌ ವಂದಿಸಿದರು.

ಅನ್ನದಾನಕ್ಕೂ ಇನ್ಮುಂದೆ ಸೋಲಾರ್‌ ಶಕ್ತಿ
ಧರ್ಮಸ್ಥಳದಿಂದ ಆರಂಭಿಸಿದ ಯೋಜನೆಗಳು ಮಾಡೆಲ್‌ಗ‌ಳಾಗಿವೆ. ಸದ್ಯದಲ್ಲೇ ಧರ್ಮಸ್ಥಳದಿಂದ ಕೆಲವು ಹಿರಿಯ ನೌಕರರು ಶಿರಡಿಗೆ ತೆರಳಿ ಸೌರಶಕ್ತಿಯ ಸ್ಟೀಮ್‌ ಮೂಲಕ ಅನ್ನ ಬೇಯುವ ವಿಧಾನವನ್ನು ಅಧ್ಯಯನ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುವರು. ಮುಂದೆ ಇಲ್ಲಿನ ಎಲ್ಲ ವಸತಿಛತ್ರಗಳು ಹಾಗೂ ಕಚೇರಿಗಳಲ್ಲಿಯೂ ಸೌರಶಕ್ತಿಯ ಸದುಪಯೋಗ ಮಾಡಲಾಗುವುದು ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next