ರಾಮನಗರ: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಅಂತ್ಯಸಂಸ್ಕಾರ ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನೆರವೇ ರಿತು. ಅಂತ್ಯಸಂಸ್ಕಾರದ ವೇಳೆ ಪರಮೇಶ್ವರ್, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹಾಜರಿದ್ದರು. ಶನಿವಾರ ರಾತ್ರಿ ರಮೇಶ್ ಮೃತದೇಹವನ್ನು ಹುಟ್ಟೂರು ಮೆಳೇಹಳ್ಳಿಗೆ ತರಲಾಗಿತ್ತು.
ಭಾನುವಾರ ಬೆಳಗ್ಗೆ 11 ಗಂಟೆಯವರೆಗೆ ಗ್ರಾಮಸ್ಥರು, ಸಂಬಂಧಿಕರು, ಸ್ನೇಹಿತರು, ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ, ಮೃತನ ಅಂತಿಮ ದರ್ಶನ ಪಡೆದುಕೊಂಡರು. ನಂತರ ಮೆರವಣಿಗೆ ಮೂಲಕ ಮೃತ ದೇಹವನ್ನು ಕುಟುಂ ಬಕ್ಕೆ ಸೇರಿದ ಜಮೀನಿಗೆ ತಂದು ಅಲ್ಲಿ ಅಂತ್ಯ ಸಂಸ್ಕಾರವನ್ನು ಒಕ್ಕಲಿಗರ ಪದ್ಧತಿಯಂತೆ ನೆರವೇರಿಸಲಾಯಿತು.
ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ. ರಮೇಶ ತನ್ನ ಡೆತ್‌ನೋಟಿನಲ್ಲೂ ಕಿರುಕುಳದ ವಿಚಾರವನ್ನೇ ಬರೆದುಕೊಂಡಿದ್ದಾನೆ. ಐಟಿ ಅಧಿಕಾರಿಗಳ ಕಿರುಕುಳ ಸಹಿಸದೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಸಹೋದರನ ಸಾವಿಗೆ ಕಾರಣನಾದ ಐಟಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವೆ.
-ಸತೀಶ್, ಮೃತ ರಮೇಶ್ ಸಹೋದರ