Advertisement

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

05:30 PM Aug 30, 2022 | Team Udayavani |

ಕುಂದಗೋಳ: ಪಶ್ಚಿಮ ಬಂಗಾಳದ ಕೂಚ್‌ ಬಿಹಾರ ಗಡಿಯಲ್ಲಿ ಸೇವೆಯಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಮಡಿದ ವೀರಯೋಧ ಗಂಗಾಧರಯ್ಯ ಹಿರೇಮಠ ಅವರ ಅಂತ್ಯಕ್ರಿಯೆ ಹುಟ್ಟೂರು ರೊಟ್ಟಿಗವಾಡ ಗ್ರಾಮದಲ್ಲಿ ಸೋಮವಾರ ಸರಕಾರಿ ಗೌರವದೊಂದಿಗೆ ನಡೆಯಿತು.

Advertisement

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಗ್ರಾಮಕ್ಕೆ ಆಗಮಿಸಿ ಯೋಧನಿಗೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಿದರು. ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಯೋಧನ ಅಂತಿಮ ದರ್ಶನ ಪಡೆಯಲು ಗ್ರಾಮ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂತಿಮಯಾತ್ರೆ ನಡೆಯಿತು.ಯಾತ್ರೆಯಲ್ಲಿ ಭಕ್ತಿಗೀತೆಗಳನ್ನು ಹಾಡಲಾಯಿತು.
ವಿವಿಧ ವಾದ್ಯದವರು ಸಾಥ್‌ ನೀಡಿದರು.

ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ಎಮ್‌.ಆರ್‌.ಪಾಟೀಲ, ತಹಶೀಲ್ದಾರ್‌ ಅಶೋಕ ಶಿಗ್ಗಾಂವ, ಸಿಪಿಐ ಮಾರುತಿ ಗುಳ್ಳಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಯಾತ್ರೆಯುದ್ದಕ್ಕೂ ಪಾಲ್ಗೊಂಡು ಗೌರವ ಸಲ್ಲಿಸಿದರು.

ರೊಟ್ಟಿಗವಾಡ ಗ್ರಾಮದ ಹುಬ್ಬಳ್ಳಿ-ನಲವಡಿ ರಸ್ತೆ ಪಕ್ಕಕ್ಕೆ ಹೊಂದಿಕೊಂಡಿರುವ ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಹೊರಟಿರುವ ವೇಳೆ ಅಥಣಿಯ ಶೆ‌ಟ್ಟರಮಠದ ಶ್ರೀ ಮರಸಿದ್ದೇಶ್ವರ ಸ್ವಾಮೀಜಿ, ಪಂಚಾಯಿತಿ ಅಧ್ಯಕ್ಷ ಹಜರೆಸಾಬ ನದಾಫ, ಉಪಾಧ್ಯಕ್ಷರು, ಸರ್ವ ಸದಸ್ಯರು, ಊರಿನ ಪ್ರಮುಖರಾದ ಬಾಬಣ್ಣ ಬೆಟಗೇರಿ, ಆರ್‌.ಎಮ.ಪಟ್ಟೇದ, ಸಿ.ಎಮ್‌. ಹುರಳಿ, ಆರ್‌.ಬಿ.ಚನ್ನಪ್ಪಗೌಡ್ರ, ಬಿ.ಡಿ.ಬದರಿ, ಷಣ್ಮುಖ ಗುರಿಕಾರ, ಪಿಡಿಒ ಉಮೇಶಗೌಡ ತುಪ್ಪದಗೌಡ್ರ ಹಾಗೂ ಗ್ರಾಪಂ ಸಿಬ್ಬಂದಿ ಗೌರವ ಸಮರ್ಪಿಸಿದರು.

ತಾಲೂಕಿನ ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗ,ಪೊಲೀಸ್‌ ಸಿಬ್ಬಂದಿ ಹಾಗೂ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸಕಲ ವ್ಯವಸ್ಥೆ ಮಾಡಿದ್ದರು. ಬಿಎಸ್‌ಎಫ್‌ 11 ಯೋಧರು ಪಾರ್ಥಿವ ಶರೀರ ಜತೆಗೆ ಆಗಮಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನಿಗೆ ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಯೋಧನ ಪಾರ್ಥಿವ ಶರೀರದ ಮೇಲೆ ಇರುವ ರಾಷ್ಟ್ರದ ಧ್ವಜವನ್ನು ಯೋಧನ ಪತ್ನಿ ಚನ್ನಮ್ಮ ಹಾಗೂ ಪುತ್ರಿಯಾದ ಸಂದನಾ ಹಿರೇಮಠ ಅವರ ಕೈಯಲ್ಲಿ ನೀಡಿದರು. ವೀರಶೈವ ಲಿಂಗಾಯತ ಸಮುದಾಯದ ವಿಧಿ ವಿಧಾನಗಳ ಮೂಲಕ ಯೋಧನ ಅಂತ್ಯಸಂಸ್ಕಾರ ನೆರವೇರಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next