ವಿಜಯಪುರ: ಕಾಂಗ್ರೆಸ್‌ನಿಂದ ಹಣ ಹಂಚುವ ಪ್ರಕ್ರಿಯೆ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈಗಾಗಲೇ ಅಧಿಕಾರಿಗಳು ಹಣದ ಸಮೇತ ಅವರ ಬೆಂಬಲಿಗರನ್ನು ಬಂಧಿಸಿರುವ ಮಾಹಿತಿ ಇದೆ ಎಂದು ವಾಯವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಈಗಾಗಲೇ ಒಂದು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಸುಮಾರು 174 ಹಣದ ಕಟ್ಟುಗಳು (ಬಂಡಲ್) ಇವೆ. ಈ ಕಟ್ಟುಗಳನ್ನು 10 ಸಾವಿರ ರೂ. ಪ್ಯಾಕೆಟ್ ಮಾಡಿರುವುದು ಅಧಿಕಾರಿಗಳ ಕೈಗೆ ಸಿಕ್ಕಿವೆ ಎಂಬ ಮಾಹಿತಿ ಇದೆ. ಈ ರೀತಿಯ 8 ವಾಹನಗಳು ಕ್ಷೇತ್ರದಲ್ಲಿ ಹಣ ಹಂಚಲು ಸಂಚರಿಸುತ್ತಿವೆ ಎನ್ನಲಾಗಿದೆ. ಅಧಿಕಾರಿಗಳು ಅವುಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡು ಅ ಅಭ್ಯರ್ಥಿ ಹಾಗೂ ಇದರಲ್ಲಿ ಇರುವ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಕ್ಷೇತ್ರ ಪವಿತ್ರವಾದದ್ದು. ಇಂತಹ ಚುನಾವಣೆಯಲ್ಲಿ ಹಣ ಹಂಚಿ ಅಲ್ಲಿ ಏನು ಮಾಡಲು ಹೊರಟಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ಮೇಲೆ ನಮಗೆ ಭರವಸೆ ಇದೆ. ಹಣ ಹಂಚಿ ರಾಜಕಾರಣ ಮಾಡಲು ಹೊರಟಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಎಂಎಲ್ಸಿ ಸಂಕನೂರ ಅವರು ಕೆಲವು ಅಭ್ಯರ್ಥಿಗಳು ಹಣ ಹಂಚುತ್ತಿರುವ ಬಗ್ಗೆ ಆರೋಪ ಮಾಡಿದ್ದರು. ಆದರೆ ನಮ್ಮ ಬಳಿ ದಾಖಲೆಗಳು ಇರಲಿಲ್ಲ. ಆದರೆ ಇಂದು ಹಣದ ಸಮೇತ ಅಭ್ಯರ್ಥಿಗಳ ಬೆಂಬಲಿಗರು ಎನ್ನಲಾಗಿರುವವರನ್ನು ಹಾಗೂ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಆಯೋಗ ಆ ಅಭ್ಯರ್ಥಿ ವಿರುದ್ಧ ಕ್ರಮ ಜರುಗಿಸುವ ಭರವಸೆ ಇದೆ ಎಂದರು.
Related Articles
ದಾಖಲೆ ಸಮೇತ ಹಣ ಹಂಚುವುದು ಸಿಕ್ಕಿರುವುದರಿಂದ ನಾವು ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು.
ಮಾಜಿ ಸಚಿವ ಅಪ್ಪಸಾಹೇಬ್ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರ ನಗರದಲ್ಲಿಯೇ ಈ ರೀತಿ ರಾಜಾರೋಷವಾಗಿ ಹಣ ಹಂಚುತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗ ಹಾಗೂ ತಾಲೂಕು ಮಟ್ಟದಲ್ಲಿ ಯಾವ ರೀತಿ ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಹಾಗಾಗಿ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಬಿಜೆಪಿ ಮಾಧ್ಯಮ ಸಂಚಾಲಕ ವಿಜಯ ಜೋಶಿ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಘಟಕಾಂಬಳೆ, ಸಿದ್ದು ಮಲ್ಲಿಕಾರ್ಜುನಮಠ ಇದ್ದರು.