Advertisement

ಉಗ್ರರಿಗೆ ನೆರವು ನೀಡುವ ಜಾಲ ಬಯಲು: ಆರು ಮಂದಿ ಬಂಧನ, ಶಸ್ತ್ರಾಸ್ತ್ರ ವಶ

08:28 PM Nov 10, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರ ಸಂಘಟನೆಗಳಿಗೆ ನೇಮಕ ಮಾಡುವ ಹಾಗೂ ವಿತ್ತೀಯ ನೆರವು ನೀಡುವ ಜಾಲವನ್ನು ಗುರುವಾರ ಬೇಧಿಸಲಾಗಿದೆ. ಅದರಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿಯನ್ನೂ ಬಂಧಿಸಲಾಗಿದೆ.

Advertisement

ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯೌಗಲ್‌ ಮನ್ಹಾಸ್‌ ಮಾಹಿತಿ ನೀಡಿದ್ದು, 5 ಮಂದಿಯನ್ನು ಬಂಧನ ಮಾಡಿರುವುದು ದೊಡ್ಡ ಸಾಧನೆ ಎಂದಿದ್ದಾರೆ. ಕುಪ್ವಾರಾ ಜಿಲ್ಲೆಯ ಚೀರ್‌ಕೋಟ್‌ ನಿವಾಸಿ ಬಿಲಾಲ್‌ ಅಹ್ಮದ್‌ ದರ್‌ ಉಗ್ರ ಸಂಘಟನೆಗೆ ನೇಮಕ, ವಿತ್ತೀಯ ನೆರವು ಸಂಗ್ರಹಿಸುವ ಜಾಲದ ರೂವಾರಿಯಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಮತ್ತು ಸೇನೆಯ ನೆರವಿನ ಜತೆಗೆ ಕಾರ್ಯಾಚರಣೆ ನಡೆಸಲಾಯಿತು.

“ಇಸ್ಲಾಹಿ ಫ‌ಲಾಹಿ ರಿಲೀಫ್ ಟ್ರಸ್ಟ್‌’ ಎಂಬ ಎನ್‌ಜಿಒ ಹೆಸರಿನಲ್ಲಿ ದರ್‌ ಹಣ ಸಂಗ್ರಹಿಸುವ ಮತ್ತು ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದ ಎಂದು ಎಸ್‌ಪಿ ವಿವರಿಸಿದ್ದಾರೆ. ಬಿಲಾಲ್‌ ಅಹ್ಮದ್‌ ದರ್‌ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದರು.

ತೆಹ್ರೀಕ್‌-ಇ-ಉಲ್‌- ಮುಜಾಹಿದೀನ್‌ ಜಮ್ಮು ಮತ್ತು ಕಾಶ್ಮೀರ ಎಂಬ ಸಂಘಟನೆಗಾಗಿ ಅವರೆಲ್ಲರೂ ಕಾರ್ಯ ನಿರ್ವಹಿಸುತ್ತಿದ್ದರು. ಅದರ ನಿಯಂತ್ರಕರು ಪಾಕಿಸ್ತಾನದಲ್ಲಿ ಇದ್ದು ಕಾರ್ಯ ಸಾಧನೆಗೆ ಮುಂದಾಗುತ್ತಿದ್ದರು ಎಂದರು.

ಸುಧಾರಿತ ಸ್ಫೋಟಕ ತಯಾರಿಸಲು ಬೇಕಾಗುವ ಮಾಹಿತಿ, ಐದು ಪಿಸ್ತೂಲ್‌, 10 ಮ್ಯಾಗಜೀನ್‌ಗಳು, 2 ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಆಸ್ತಿ ವಶ
ಜಮಾತ್‌-ಇ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಗೆ ಸೇರಿದ 2.58 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೇಂದ್ರಾಡಳಿತ ಪ್ರದೇಶದ ತನಿಖಾ ಸಂಸ್ಥೆ (ಎಸ್‌ಐಎ) ವಶಪಡಿಸಿಕೊಂಡಿದೆ. ಆ ಸಂಘಟನೆ ಒಟ್ಟು 9 ಸ್ಥಳಗಳಲ್ಲಿ ಹೊಂದಿರುವ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಶೋಪಿಯಾನ್‌ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next