Advertisement

ಚಾರ್ಮಾಡಿ ಘಾಟ್‌ನಲ್ಲಿ ಮುಂದುವರೆದ ಪ್ರವಾಸಿಗರ ಪುಂಡಾಟ: ರಸ್ತೆ ಮಧ್ಯೆಯೇ ಮೋಜು ಮಸ್ತಿ

10:51 AM Jul 04, 2022 | Team Udayavani |

ಮೂಡಿಗೆರೆ: ರಾಜ್ಯದಾದ್ಯಂತ ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು,  ಚಾರ್ಮಾಡಿ ಘಾಟ್‌ನಲ್ಲಿ ಜಲಪಾತ, ಹಳ್ಳ, ತೊರೆಗಳು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಚಾರ್ಮಾಡಿ ಘಾಟ್ ಭಾಗದಲ್ಲಿ ಸಾಗುವ ಪ್ರವಾಸಿಗರ ಪುಂಡಾಟವು ಹೆಚ್ಚುತ್ತಿದೆ.

Advertisement

ಚಾರ್ಮಾಡಿ ಘಾಟ್‌ನ ಸೌಂದರ್ಯ ಆಸ್ವಾದಿಸುವ ನೆಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರಸ್ತೆ ಮಧ್ಯೆಯಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡಿ ಇತರ ಪ್ರವಾಹನ ಸವಾರರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ.

ಕೆಲ ಪ್ರವಾಸಿಗರು ಅಪಾಯಕಾರಿ ಬಂಡೆಗಳನ್ನು ಏರುವುದು, ಏಕಾಏಕಿ ರಸ್ತೆ ದಾಟುವುದು, ರಸ್ತೆ ಮಧ್ಯೆಯೇ ಸೆಲ್ಫೀ, ನೃತ್ಯ, ತಡೆಗೋಡೆ ಹತ್ತಿ ಫೋಟೋ ತೆಗೆಯುವುದು, ಜಾರುವ ಸ್ಥಳಗಳನ್ನು ಹತ್ತಿ ಪುಂಡಾಟ ನಡೆಸುತ್ತಿದ್ದಾರೆ.

ಘಾಟಿ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಮಂಜು ಕವಿದ ವಾತಾವರಣವಿದೆ. ಪ್ರವಾಸಿಗರು ಬೇಕಾಬಿಟ್ಟಿ ವಾಹನ ಪಾರ್ಕಿಂಗ್  ಮಾಡುವುದರಿಂದ ಇತರ ವಾಹನ ಸವಾರರು ಪರದಾಡುವಂತಾಗಿದೆ.

Advertisement

ಇದನ್ನೂ ಓದಿ: ಪುತ್ತೂರು: ಮಗನನ್ನು ಬಸ್‌ಗೆ ಬಿಡಲು ತೆರಳುತ್ತಿರುವ ವೇಳೆ ಅಫಘಾತ; ತಂದೆ ಸಾವು

ಪೊಲೀಸ್ ವಾಹನ ಗಸ್ತು ನಿರತವಾಗಿದ್ದರೂ ಅದನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ಪ್ರವಾಸಿಗರು ಇನ್ನೊಂದು ಪ್ರದೇಶಕ್ಕೆ ಠಿಕಾಣಿ ಬದಲಾಯಿಸಿ ಪೊಲೀಸರಿಗೆ ಸವಾಲಾಗುತ್ತಿದ್ದಾರೆ.

ಎಚ್ಚರಿಕೆ ಫಲಕಗಳಿಲ್ಲ: ಘಾಟಿ ಪ್ರದೇಶ ನಾನಾ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದ್ದರೂ, ಇಲ್ಲಿನ ಜಲಪಾತ, ಹಳ್ಳ,ತೊರೆಗಳ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧದ ಕುರಿತು ಯಾವುದೇ ಎಚ್ಚರಿಕೆ ಫಲಕಗಳಿಲ್ಲದಿರುವುದು ಪ್ರವಾಸಿಗರಿಗೆ ವರದಾನವಾಗಿದೆ. ಇದರಿಂದ ಕೆಲವು ಪ್ರವಾಸಿಗರು ಪೊಲೀಸರೊಂದಿಗೆ ವಾಗ್ವಾದವನ್ನು ನಡೆಸುವ ಪ್ರಸಂಗಗಳು ನಡೆಯುತ್ತಿವೆ. ಘಾಟಿ ಪ್ರದೇಶದ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next