ಇದು ಸಿನಿಮಾವೊಂದರ ಹೆಸರು. ಚಿತ್ರದ ಹೆಸರೇ ಹೀಗಿದೆ. ಸಿನಿಮಾ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ನಿಜ. ಆದರೆ, ಸಿನಿಮಾ ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡು, ಸಣ್ಣ ಟೀಸರ್ ಸಾಕು. “ಫುಲ್ ಟೈಟ್ ಪ್ಯಾತೆ’ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಚಿತ್ರದಲ್ಲೇನೋ ವಿಶೇಷತೆ ಇದೆ ಎನ್ನುವಷ್ಟರ ಮಟ್ಟಿಗೆ ಕೆಲಸ ಕಾಣುತ್ತದೆ. ಅಂದಹಾಗೆ, ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿದ ಚಿತ್ರ. ಇದರ ವಿಶೇಷವೆಂದರೆ, ಚಿತ್ರದುದ್ದಕ್ಕೂ ಮಳವಳ್ಳಿ ಭಾಷೆಯೇ ಹೈಲೈಟ್. ಅದರಲ್ಲೂ ಇದೊಂದು ನೈಜ ಘಟನೆ ಕುರಿತಾದ ಚಿತ್ರ. ಮೊದಲ ಸಲ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ತಂಡದ ಜೊತೆ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕ, ನಿರ್ಮಾಪಕ ಕಮ್ ನಾಯಕ ಎಸ್.ಎಲ್.ಜಿ.ಪುಟ್ಟಣ್ಣ.
Advertisement
ಮಳವಳ್ಳಿ ಭಾಷೆಯಲ್ಲೇ ಮಾತು ಶುರುಮಾಡಿದ ನಿರ್ದೇಶಕರು ಹೇಳಿದ್ದಿಷ್ಟು. “ಸಿನಿಮಾ ನೋಡುವುದು ಸುಲಭ. ಮಾಡುವುದು ಬಲು ಕಷ್ಟ. ಈ ಚಿತ್ರ ಮಾಡೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನ ಫ್ಯಾಮಿಲಿ, ಗೆಳೆಯರು ಹಾಗು ತಂತ್ರಜ್ಞರು ಸಹಕರಿಸಿದ್ದರಿಂದ ಚಿತ್ರ ಮುಗಿಸಿ, ಸೆನ್ಸಾರ್‌ಗೆ ಕಳಿಸಲು ಸಜ್ಜಾಗಿದ್ದೇನೆ. ಇದನ್ನು ಹೊಸ ಪ್ರಯತ್ನ, ಹೊಸ ಪ್ರಯೋಗ ಅಂತ ಹೇಳುವುದಿಲ್ಲ. ಆದರೆ, ಹೊಸಬರ ಸಣ್ಣ ಮತ್ತು ಪ್ರಾಮಾಣಿಕ ಪ್ರಯತ್ನವಷ್ಟೇ. ಕಡಿಮೆ ಬಜೆಟ್‌ಗೆ ಹೊಂದಿಕೆಯಾಗುವ ಕಥೆ ಮಾಡಬೇಕೆಂದುಕೊಂಡೆ. ನನ್ನ ಅಜ್ಜಿ ಊರಲ್ಲೊಬ್ಬ ಕುಡುಕನಿದ್ದ. ಅವನ ಬಗ್ಗೆ ಕುತೂಹಲವಿತ್ತು. ಅಜ್ಜಿ ಅವನ ಬಗ್ಗೆ ಸಾಕಷ್ಟು ಹೇಳಿದ್ದರು. ಅವನ ಲೈಫಲ್ಲಿ ಒಂದಷ್ಟು ಸಮಸ್ಯೆಗಳು ಬಂದಿದ್ದರಿಂದ ಅವನು ಕುಡಿತಕ್ಕೆ ದಾಸನಾಗಿ, ಇಂದಿಗೂ ಹಾಸ್ಯ ಮಾಡಿಕೊಂಡೇ ತಿರುಗುತ್ತಾನೆ. ಎದೆಯಲ್ಲಿ ನೋವಿದ್ದರೂ, ಹೊರಗಡೆ ನಗುತ್ತಲೇ ಇರುವಂತಹ ವ್ಯಕ್ತಿ ಎಂದು ಹೇಳಿದ್ದರು. ಅವನನ್ನು ಹುಡುಕಿ, ಅವನಿಗೊಂದು ಕ್ವಾಟ್ರಾ ಬಾಟಲ್ ಕೊಡಿಸಿ, ಅವನ ಕಥೆ ಕೇಳಿಕೊಂಡು ಸಿನಿಮಾ ಮಾಡಿದ್ದೇನೆ. ಈಗ ಎಲ್ಲಾದರೂ ಆಕಸ್ಮಿಕವಾಗಿ ಸಿಕ್ಕರೆ ಆ ವ್ಯಕ್ತಿ, ಬಾ ಗುರು ಇನ್ನೂ ಸ್ವಲ್ಪ ಕಥೆ ಬಿಟ್ಟಿದ್ದೀನಿ ಹೇಳ್ತೀನಿ ಅಂತ ಮಾತಿಗಿಳಿಯುತ್ತಾನೆ. ಅಂತಹ ವ್ಯಕ್ತಿಯ ಚಿತ್ರಣ ಇಲ್ಲಿದೆ. ಸಿನಿಮಾ ನೋಡಿದವರಿಗೆ ಅವನೊಳಗಿನ ನೋವು, ನಲಿವು ಎಲ್ಲವೂ ಗೊತ್ತಾಗುತ್ತೆ. ಮನರಂಜನೆ ಜೊತೆಗೆ ಒಂದು ಸಣ್ಣ ಸಂದೇಶ ಇಲ್ಲಿದೆ’ ಎಂಬುದು ನಿರ್ದೇಶಕರ ಮಾತು.