Advertisement

ಬಿಜೆಪಿಗೆ ಬಲ ತುಂಬಿದ ಧಾರವಾಡ: 7 ಕ್ಷೇತ್ರಗಳು

12:54 AM Jan 31, 2023 | Team Udayavani |

56 ವರ್ಷಗಳ ಹಿಂದೆಯೇ ಜನಸಂಘದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದ್ದ ಧಾರವಾಡ ಜಿಲ್ಲೆ ರಾಜಕೀಯವಾಗಿಯೂ ವೈವಿಧ್ಯವಾಗಿದೆ. ಈ ಜಿಲ್ಲೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಖ್ಯಾತಿಯನ್ನೂ ಒಳಗೊಂಡಿದೆ. ಅಂದರೆ ಎಸ್‌.ಆರ್‌.ಬೊಮ್ಮಾಯಿ ಮತ್ತು ಜಗದೀಶ್‌ ಶೆಟ್ಟರ್‌ ಈ ಜಿಲ್ಲೆಗೆ ಸೇರಿದವರೇ. ಹಾಗೆಯೇ ಬಸವರಾಜ ಬೊಮ್ಮಾಯಿ ಅವರೂ ಹಾವೇರಿಯಿಂದ ಪ್ರತಿನಿಧಿಸಿದರೂ, ಈ ಜಿಲ್ಲೆಯ ಜತೆ ಹೆಚ್ಚು ಸಂಪರ್ಕ ಇರಿಸಿಕೊಂಡವರಾಗಿದ್ದಾರೆ.

Advertisement

ಹುಬ್ಬಳ್ಳಿ: ಬಿಜೆಪಿ ಬಲವರ್ಧನೆಗೆ ಶಕ್ತಿ ತುಂಬಿದ, ಸುಮಾರು 56 ವರ್ಷಗಳ ಹಿಂದೆಯೇ ಜನಸಂಘದ ಅಭ್ಯರ್ಥಿಗೆ ಜೈ ಎಂದ, ರಾಜ್ಯ ರೈತ ಸಂಘದ ಪ್ರಮುಖರಿಗೆ ರಾಜಕೀಯ ನೆಲೆ ಒದಗಿಸಿದ, ಹೊರಗಿನಿಂದ ಬಂದವರಿಗೂ ಮಣೆ ಹಾಕಿದ ಕಾಂಗ್ರೆಸ್‌, ಜನತಾ ಪರಿವಾರ, ಬಿಜೆಪಿ ಹಾಗೂ ಪಕ್ಷೇತರರಿಗೂ ಮನ್ನಣೆ ನೀಡಿದ ಜಿಲ್ಲೆ ಧಾರವಾಡ. ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗೆ ಶಕ್ತಿ ತುಂಬಿದ್ದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಹೋರಾಟ ಎಂಬುದನ್ನು ಬಿಜೆಪಿಯವರು ಒಪ್ಪಿಕೊಳ್ಳುತ್ತಾರೆ.

ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಧಾರವಾಡ ಜಿಲ್ಲೆ 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಅನಂತರ ಕೆಲ ಕ್ಷೇತ್ರಗಳ ಪ್ರದೇಶ ಬದಲಾಗಿ ಹೊಸ ಹೆಸರು ಪಡೆದುಕೊಂಡಿವೆ. ಧಾರವಾಡ ಜಿಲ್ಲೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯವಾಗಿ ಹಾವೇರಿ ಜಿಲ್ಲೆ ಪ್ರತಿನಿಧಿಸಿದ್ದರೂ ಮೂಲತಃ ಧಾರವಾಡ ಜಿಲ್ಲೆಯವರಾಗಿದ್ದಾರೆ. ಇದನ್ನು ಪರಿಗಣಿಸಿದರೆ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಧಾರವಾಡ ಜಿಲ್ಲೆಗಿದೆ.

ಧಾರವಾಡ ಜಿಲ್ಲೆ ಹುಬ್ಬಳ್ಳಿ-ಧಾರವಾಡ ಮಹಾನಗರದ 82 ವಾರ್ಡ್‌ ಸೇರಿದಂತೆ ಪುರಸಭೆ, ತಾ.ಪಂ.ಗಳ ಒಟ್ಟು 171 ವಾರ್ಡ್‌ ಗಳು, 379 ಗ್ರಾಮಗಳು, 144 ಗ್ರಾ.ಪಂ.ಗಳನ್ನು ಒಳಗೊಂಡಿದೆ. 80ರ ದಶಕದವರೆಗೆ ಕಾಂಗ್ರೆಸ್‌ಗೆ ಹೆಚ್ಚಿನ ಮನ್ನಣೆ ನೀಡಿದ್ದರೆ, ಅನಂತರದಲ್ಲಿ ಜನತಾ ಪರಿವಾರಕ್ಕೆ ಜೈ ಎಂದಿತ್ತು. ಕೆಲ ವರ್ಷಗಳಿಂದ ಬಿಜೆಪಿಗೆ ಹೆಚ್ಚಿನ ಮಾನ್ಯತೆ ನೀಡಿದೆ. ರೈತಸಂಘದ ಪ್ರಮುಖ ನಾಯಕರಿಬ್ಬರು ಇದೇ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಪ್ರಸ್ತುತ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಐದು, ಕಾಂಗ್ರೆಸ್‌ ಎರಡು ಕ್ಷೇತ್ರಗಳ ಪ್ರಾತಿನಿಧ್ಯ ಹೊಂದಿವೆ.

ಧಾರವಾಡ
ಕ್ಷೇತ್ರ ಪುನರ್‌ ವಿಂಗಡಣೆ ಪೂರ್ವದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರವಾಗಿತ್ತು. 2008ರ ಅನಂತರದಲ್ಲಿ ಧಾರವಾಡ ಕ್ಷೇತ್ರವಾಗಿ ರೂಪುಗೊಂಡಿದೆ. ಧಾರವಾಡ ಕ್ಷೇತ್ರ 1967ರಿಂದ 2018ರವರೆಗೆ ಒಟ್ಟು ಮೂರು ಉಪ ಚುನಾವಣೆಗಳನ್ನು ಕಂಡಿದೆ. ರೈತ ಹೋರಾಟದ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದ ರಾಜ್ಯ ರೈತ ಸಂಘದ ನಾಯಕ ಪ್ರೊ| ಎಂ.ಡಿ. ನಂಜುಂಡಸ್ವಾಮಿ ಹಾಗೂ ರೈತ ನಾಯಕ, ಕೇಂದ್ರ ಸಚಿವರಾಗಿದ್ದ ಬಾಬಾ ಗೌಡ ಪಾಟೀಲ ಅವರಿಗೆ ವಿಧಾನಸಭೆ ಪ್ರವೇಶ ಕಲ್ಪಿಸಿದ ಕ್ಷೇತ್ರ. ಇದೇ ಕ್ಷೇತ್ರದ ಸಮತಿ ಮಡಿಮನ್‌ ವಿಧಾನಸಭೆ ಸ್ಪೀಕರ್‌ ಆಗಿದ್ದರು. ವಿನಯ ಕುಲಕರ್ಣಿ ಸಚಿವರಾದ್ದರು. ಕ್ಷೇತ್ರದಲ್ಲಿ ಅಂಬಡಗಟ್ಟಿ ಕುಟುಂಬದವರು ಒಂದು ಉಪಚುನಾವಣೆ ಸಹಿತ  ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರೆ, ಜನತಾ ಪಕ್ಷದಿಂದ ಒಂದು ಬಾರಿಗೆ ಶಾಸಕರಾಗಿದ್ದ ಎ.ಬಿ.ದೇಸಾಯಿ ಒಟ್ಟು ಆರು ಬಾರಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ 8 ಬಾರಿ, ಬಿಜೆಪಿ ಎರಡು ಬಾರಿ, ಜನತಾ ಪರಿವಾರ ಒಂದು ಬಾರಿ, ರಾಜ್ಯ ರೈತ ಸಂಘದ ಉಪಚುನಾ ವಣೆ ಸೇರಿ ಎರಡು ಬಾರಿ, ಪಕ್ಷೇತರರು ಎರಡು ಬಾರಿ ಪ್ರತಿನಿಧಿಸಿ ದ್ದಾರೆ. ಪ್ರಸ್ತುತ ಬಿಜೆಪಿಯ ಅಮೃತ ದೇಸಾಯಿ ಶಾಸಕರಾಗಿದ್ದಾರೆ.

Advertisement

ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಈ ಹಿಂದೆ ಧಾರವಾಡ ವಿಧಾನಸಭಾ ಕ್ಷೇತ್ರವಾಗಿತ್ತು. ಒಂದು ಬಾರಿ ಮಾತ್ರ ಉಪ ಚುನಾವಣೆ ಕಂಡಿದ್ದು, ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಿ.ಕೆ.ನಾಯ್ಕರ್‌, ಎಸ್‌.ಆರ್‌.ಮೋರೆ ಸಚಿವರಾಗಿದ್ದರು. ಎಸ್‌.ಆರ್‌.ಮೋರೆ ಮೂರು ಬಾರಿ ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ್ದರೆ, ಚಂದ್ರಕಾಂತ ಬೆಲ್ಲದ್‌ ಒಂದು ಬಾರಿ ಪಕ್ಷೇತರರಾಗಿ, ಮೂರು ಬಾರಿ ಬಿಜೆಪಿನಿಂದ ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ 2008ರಿಂದ 2018ರವರೆಗೆ ಸತತ ಗೆಲುವಿನ ಮೂಲಕ ಬಿಜೆಪಿ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದೆ. ಈ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಯಾರೂ ಗೆಲುವು ಸಾಧಿಸಿರಲಿಲ್ಲ. ಅರವಿಂದ ಬೆಲ್ಲದ್‌ 2013 ಹಾಗೂ 2018ರಲ್ಲಿ ಸತತ ಗೆಲ್ಲುವ ಮೂಲಕ ಸಾಧನೆ ತೋರಿದ್ದಾರೆ. ಪ್ರಸ್ತುತ ಬಿಜೆಪಿಯ ಅರವಿಂದ ಬೆಲ್ಲದ್‌ಶಾಸಕರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 8 ಬಾರಿ, ಬಿಜೆಪಿ 5 ಬಾರಿ, ಜನತಾ ಪರಿವಾರ ಹಾಗೂ ಪಕ್ಷೇತರರು ತಲಾ ಒಂದು ಬಾರಿ ಗೆಲುವು ಸಾಧಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು)
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿದೆ. 2008ರ ಕ್ಷೇತ್ರ ಪುನರ್‌ ವಿಂಗಡಣೆಗಿಂತ ಪೂರ್ವದಲ್ಲಿ ಹುಬ್ಬಳ್ಳಿ ಶಹರ ವಿಧಾನಸಭಾ ಕ್ಷೇತ್ರವಾಗಿತ್ತು. 1967ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ನಾಲ್ವರು ಜನಸಂಘದಿಂದ ವಿಧಾನಸಭೆ ಪ್ರವೇಶಿಸಿದ್ದರು. ಅದರಲ್ಲಿ ಹುಬ್ಬಳ್ಳಿ ಶಹರ ಕ್ಷೇತ್ರ ಪ್ರತಿನಿಧಿಸಿದ್ದ ಎಸ್‌.ಎಸ್‌.ಶೆಟ್ಟರ್‌ ಒಬ್ಬರಾಗಿದ್ದರು. ಇದೇ ಕ್ಷೇತ್ರದಿಂದ 1957ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎಫ್‌.ಎಚ್‌.ಮೋಹಸೀನ್‌ ಅವರು ಅನಂತರ ಐದು ಬಾರಿ ಸಂಸದರಾದರು. ಅದೇ ರೀತಿ ಇದೆ ಕ್ಷೇತ್ರದಿಂದ ಆಯ್ಕೆಯಾಗಿದ್ದೆ ಐ.ಜಿ.ಸನದಿ ಸಹ ಸಂಸದರಾಗಿದ್ದರು. ಈ ಕ್ಷೇತ್ರದಿಂದ ಆಯ್ಕೆಯಾದ ಎ.ಎಂ.ಹಿಂಡಸಗೇರಿ, ಜಬ್ಟಾರಖಾನ್‌ ಹೊನ್ನಳ್ಳಿ ಸಚಿವರಾಗಿದ್ದರು. ಎಂ.ಜಿ.ಜರತಾರಘರ, ಎ.ಎಂ.ಹಿಂಡಸಗೇರಿ, ಜಬ್ಟಾರಖಾನ್‌ ಹೊನ್ನಳ್ಳಿ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಇದಾದ ಅನಂತರ 2013 ಹಾಗೂ 2018ರಲ್ಲಿ ಪ್ರಸಾದ ಅಬ್ಬಯ್ಯ ಸತತ ಎರಡು ಬಾರಿ ಆಯ್ಕೆಯಾದ ಸಾಧನೆ ತೋರಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ 10 ಬಾರಿ, ಬಿಜೆಪಿ 3 ಬಾರಿ, ಜನಸಂಘ ಹಾಗೂ ಜನತಾ ಪರಿವಾರ ತಲಾ ಒಂದು ಬಾರಿ ಗೆಲವು ಸಾಧಿಸಿವೆ. ಪ್ರಸ್ತುತ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಶಾಸಕರಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ 2008 ಪೂರ್ವದಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಅನಂತರದಲ್ಲಿ ಇದು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡಿತು. ಈ ಕ್ಷೇತ್ರ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ಹೊಂದಿದೆ. ಕಾಂಗ್ರೆಸ್‌ನ ಎಂ.ಆರ್‌.ಪಾಟೀಲ್‌ ಅವರು 1957ರಿಂದ 1967ರವರೆಗೆ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದರೆ, ಜನತಾ ಪರಿವಾರ ಎಸ್‌.ಆರ್‌.ಬೊಮ್ಮಾಯಿ ಅವರು 1978ರಿಂದ 1985ರವರೆಗೆ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಸಾಧನೆ ತೋರಿದ್ದರೆ, ಜಗದೀಶ ಶೆಟ್ಟರ್‌ 1994ರಿಂದ 2018ರವರೆಗೆ ಸತತವಾಗಿ ಆರು ಬಾರಿ ಆಯ್ಕೆಯಾಗುವ ಮೂಲಕ ಡಬಲ್‌ ಹ್ಯಾಟ್ರಿಕ್‌ ಸಾಧನೆ ತೋರಿದ್ದಾರೆ. ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ, ವಿಪಕ್ಷ ನಾಯಕ, ಸಚಿವ ಹಾಗೂ ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ 5 ಬಾರಿ, ಬಿಜೆಪಿ 6 ಬಾರಿ, ಜನತಾ ಪರಿವಾರ 3 ಬಾರಿ ಗೆಲುವು ಕಂಡಿವೆ. ಪ್ರಸ್ತುತ ಬಿಜೆಪಿಯ ಜಗದೀಶ ಶೆಟ್ಟರ್‌ ಶಾಸಕರಾಗಿದ್ದಾರೆ.

ಕಲಘಟಗಿ ಕ್ಷೇತ್ರ
ಕಲಘಟಗಿ ವಿಧಾನಸಭಾ ಕ್ಷೇತ್ರ ಪ್ರಮುಖ ಪಕ್ಷಗಳಿಗೆ ಮನ್ನಣೆ ನೀಡಿದ ರೀತಿಯಲ್ಲೇ ಪಕ್ಷೇತರರಿಗೂ ಅವಕಾಶ ಕಲ್ಪಿಸಿದೆ. ಕ್ರೈಸ್ತ ಪಾದ್ರಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸಿದ ಕ್ಷೇತ್ರ ಇದಾಗಿದೆ. ವಲಸೆ ಬಂದವರಿಗೂ ಮಣೆ ಹಾಕಿದೆ. ಇದೇ ಕ್ಷೇತ್ರ ಪ್ರತಿನಿಧಿಸಿದ್ದ ಪಿ.ಸಿ.ಸಿದ್ದನಗೌಡರ, ಸಂತೋಷ ಲಾಡ್‌ ಸಚಿವರಾಗಿದ್ದರು. 1972ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದ ಅನಂತರ 2008ರವರೆಗೂ ಕಾಂಗ್ರೆಸ್‌ ಗೆಲುವನ್ನೇ ಕಂಡಿ ರಲಿಲ್ಲ. 2008ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಆಗಮಿಸಿದ್ದ ಸಂತೋಷ ಲಾಡ್‌ ಕಾಂಗ್ರೆಸ್‌ಗೆ 2008 ಹಾಗೂ 2013ರಲ್ಲಿ ಗೆಲುವು ತಂದು ಕೊಟ್ಟಿದ್ದರು. 1962ರಲ್ಲಿಯೂ ನರಗುಂದದ

ಎಫ್‌.ಎಂ.ಹಸಬಿ ಅವರು ಕಲಘಟಗಿಯಿಂದ ಗೆಲುವು ಕಂಡಿದ್ದರು. ಕ್ಷೇತ್ರದಲ್ಲಿ ಜನತಾ ಪರಿವಾರದಿಂದ ಪಿ.ಸಿ.ಸಿದ್ದನಗೌಡರ ಹಾಗೂ ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡರ ತಲಾ ಮೂರು ಬಾರಿ ಸತತವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಸಾಧನೆ ತೋರಿದ್ದರು. ಪ್ರಸ್ತುತ ಬಿಜೆಪಿಯ ಸಿ.ಎಂ.ನಿಂಬಣ್ಣವರ ಶಾಸಕರಾಗಿದ್ದಾರೆ.

ಕುಂದಗೋಳ
ಕುಂದಗೋಳ ವಿಧಾನಸಭಾ ಕ್ಷೇತ್ರ ಮಾಜಿ ಸಿಎಂ ಎಸ್‌.ಆರ್‌.ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಗೆಲವು ತಂದು ಕೊಟ್ಟು 1967ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕ್ಷೇತ್ರ. ಆಗ ಪಕ್ಷೇತರರಾಗಿ ಎಸ್‌.ಆರ್‌.ಬೊಮ್ಮಾಯಿ ಗೆಲುವು ಸಾಧಿಸಿದ್ದರು. ಎಂ.ಎಸ್‌.ಕಟಗಿ ಹಾಗೂ ಸಿ.ಎಸ್‌.ಶಿವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾದವರು. 1989ರಲ್ಲಿ ಗೆಲವು ಕಂಡಿದ್ದ ಕಾಂಗ್ರೆಸ್‌ ಬಳಿಕ 2013ರಲ್ಲಿ ಗೆಲುವು ಕಂಡಿತ್ತು. 2018ರಲ್ಲಿಯೂ ಕಾಂಗ್ರೆಸ್‌ನ ಸಿ.ಎಸ್‌.ಶಿವಳ್ಳಿ ಗೆಲುವು ಸಾಧಿಸಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದರು. ಕ್ಷೇತ್ರದಲ್ಲಿ 1957 ಹಾಗೂ 1962ರಲ್ಲಿ ಟಿ.ಕೆ.ಕಾಂಬಳಿ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದು ಬಿಟ್ಟರೆ 2013 ಹಾಗೂ 2018ರಲ್ಲಿ ಸತತವಾಗಿ ಎರಡನೇ ಬಾರಿ ಆಯ್ಕೆಯ ಸಾಧನೆ ತೋರಿದ್ದು ಸಿ.ಎಸ್‌.ಶಿವಳ್ಳಿ. ಕ್ಷೇತ್ರದಲ್ಲಿ ಕಾಂಗ್ರೆಸ್‌ 8 ಬಾರಿ, ಬಿಜೆಪಿ 1 ಬಾರಿ, ಜನತಾ ಪರಿವಾರ 3 ಬಾರಿ, ಪಕ್ಷೇತರರು 2 ಬಾರಿ ಆಯ್ಕೆಯಾಗಿದ್ದಾರೆ. ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಶಾಸಕಿಯಾಗಿದ್ದಾರೆ.

ನವಲಗುಂದ
ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ಇಬ್ಬರು ಸಚಿವರಾಗಿದ್ದಾರೆ. ಇಬ್ಬರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ

ಆರ್‌.ಎಂ.ಪಾಟೀಲ್‌ ಮೂರು ಬಾರಿ ಶಾಸಕರಾಗಿದ್ದರೆ, ಎನ್‌ಇಒ ಹಾಗೂ ಕಾಂಗ್ರೆಸ್‌ನ ಎಂ.ಕೆ.ಕುಲಕರ್ಣಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಇವರು ಸತತ ಮೂರು ಬಾರಿ ಆಯ್ಕೆಯೊಂದಿಗೆ ಹ್ಯಾಟ್ರಿಕ್‌ ಸಾಧಿಸಿದ್ದರು. ಕಾಂಗ್ರೆಸ್‌ನ ಕೆ.ಎನ್‌.ಗಡ್ಡಿ, ಬಿಜೆಪಿಯ ಶಂಕರ ಪಾಟೀಲ್‌ ಮುನೇನಕೊಪ್ಪ ಸಚಿವ ಸ್ಥಾನ ಪಡೆದವರು. ಶಂಕರ ಪಾಟೀಲ್‌  ಮುನೇನಕೊಪ್ಪ ಹಾಗೂ ಎನ್‌.ಎಚ್‌.ಕೋನರಡ್ಡಿ ಸಿಎಂ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಬಿಜೆಪಿಯ ಶಂಕರ ಪಾಟೀಲ್‌ ಮುನೇನಕೊಪ್ಪ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ 8 ಬಾರಿ, ಬಿಜೆಪಿ 3 ಬಾರಿ, ಎನ್‌ಸಿಒ, ಕೆಸಿಇ, ಜೆಡಿಎಸ್‌ ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

-ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next