ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಕೂಸು, ದೇಶದ ಮೊದಲ ಹೈಸ್ಪೀಡ್ ರೈಲು ವಂದೇ ಭಾರತ್ ಶೀಘ್ರವೇ, ಪ್ರಸ್ತುತ ಅಸ್ತಿತ್ವದಲ್ಲಿರುವ ರಾಜಧಾನಿ ಹಾಗೂ ಶತಾಬ್ದಿ ರೈಲುಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿವೆ. ಹೀಗೆಂದು ವಂದೇ ಭಾರತ್ ರೈಲು ತಯಾರಿಕಾ ಸಂಸ್ಥೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಸಿಐಎಫ್) ವ್ಯವಸ್ಥಾಪಕ ಬಿ.ಜಿ.ಮಲ್ಯ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ, ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈಗಾಗಲೇ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳನ್ನು ಬಹುತೇಕ ಶತಾಬ್ದಿ ಸಮಯಕ್ಕೆ ನಿಯೋಜಿಸಲಾಗಿದೆ. ಆದರೆ, ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಹೆಚ್ಚಿನ ಸಮಯ ಬೇಕಿರುವುದರಿಂದ ಪೂರ್ಣಪ್ರಮಾಣದಲ್ಲಿ ಶತಾಬ್ದಿಗೆ ಪರ್ಯಾಯವಾಗಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ. ಆದರೆ, ಶೀಘ್ರವೇ ಶತಾಬ್ದಿಗೆ ವಂದೇ ಭಾರತ್ ಪರ್ಯಾಯವಾಗಲಿದ್ದು, ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ಗಳನ್ನು ಬೇರೆ ಮಾರ್ಗಗಳಿಗೆ ನಿಯೋಜಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಸ್ಲೀಪರ್ ಕೋಚ್ ಶೀಘ್ರ
ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಕಾರ್ ಚೇರ್‌ಗಳನ್ನು ಮಾತ್ರವೇ ವಿನ್ಯಾಸಗೊಳಿಸಲಾಗಿದೆ. ದೂರದ ಪ್ರಯಾಣ, ದೀರ್ಘಕಾಲದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಸ್ಲೀಪರ್ ಕೋಚ್‌ಗಳನ್ನು ವಿನ್ಯಾಸಗೊಳಿಸಲು ಚಿಂತಿಸಿದ್ದೇವೆ. ವಂದೇಭಾರತ್ ಸ್ಲೀಪರ್ ಕೋಚ್ ಆವೃತ್ತಿ ಶೀಘ್ರವೇ ಬರಲಿದೆ ಎಂದಿದ್ದಾರೆ.