ಶಿರ್ವ: ನಾವು ಮಾಡುವ ಸತ್ಕಾರ್ಯಗಳ ಪೂರ್ಣ ಫಲ ಪ್ರಾಪ್ತಿ ಯಾಗಬೇಕಾದರೆ ಶುದ್ಧ ಮನಸ್ಸು, ಭಕ್ತಿ, ಶೃದ್ಧೆ ಆವಶ್ಯ. ದೇವರ ಅಸ್ತಿತ್ವದ ಬಗ್ಗೆ ಗೊಂದಲವಿದ್ದಾಗ ಭಕ್ತಿ ಮೂಡಲು ಅಸಾಧ್ಯ. ಪರಿಶುದ್ಧ ಮನಸ್ಸು ಮತ್ತು ನಂಬಿಕೆಯಿದ್ದಾಗ ಮಾತ್ರ ಭಕ್ತಿ ಮೂಡುತ್ತದೆ. ಯಾವುದೇ ಡೊಂಬರಾಟ ವಿಲ್ಲದೆ ಭಕ್ತಿಯಿಂದ ಮಾಡುವ ಕಾರ್ಯ ಗಳಿಗೆ ಭಗವಂತ ಒಲಿಯುತ್ತಾನೆ ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಯತಿ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ಶ್ರೀ ದುರ್ಗಾಪರಮೇಶ್ವರೀ ಸಹಿತ ಸಪರಿವಾರಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ಅಷ್ಟಬಂಧ ಪುನಃ ಪ್ರತಿಷ್ಠೆ ಪ್ರಯುಕ್ತ ನಡೆದ ಧಾರ್ಮಿಕ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀ ಶಿವಾನಂದ ಸರಸ್ವತೀ ಸಾಮೀ ಮಹಾರಾಜ್ ಆಶೀರ್ವಚನ ನೀಡಿ, ಯಾವುದೇ ಕಾರ್ಯ ಕೈಗೆತ್ತಿಕೊಳ್ಳುವಾಗ ಅದರ ಯಶಸ್ಸಿನ ಬಗ್ಗೆ ಸಂಶಯಗಳಿರುವುದು ಸಹಜ. ಆದರೆ ವಾಸ್ತುಬದ್ಧ ಮತ್ತು ಕ್ರಮ ಬದ್ಧವಾಗಿ ಹಾಕಿಕೊಂಡ ಯೋಜನೆಯ ಸತ್ಫಲ ದೊರೆಯಬೇಕಾದರೆ ದೇವರ ಮೇಲೆ ಅಚಲವಾದ ನಂಬಿಕೆಯೂ ಅಗತ್ಯ ಎಂಬುವುದಕ್ಕೆ ಒಂಬತ್ತು ತಿಂಗಳ ಅಲ್ಪಾವಧಿಯಲ್ಲಿ ಬಂಟಕಲ್ಲು ಕ್ಷೇತ್ರ ಸುಸೂತ್ರವಾಗಿ ಪುನರ್ ನಿರ್ಮಾಣಗೊಂಡಿ ರುವುದೇ ಸಾಕ್ಷಿ ಎಂದರು.
ಮುಖ್ಯ ಅತಿಥಿಗಳಾದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿ.ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ತಾ.ಪಂ. ಸದಸ್ಯೆ ಗೀತಾ ವಾಗೆÛ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಷ್ಟಕಾಲದಲ್ಲಿ ಮಾಡುವ ಪ್ರಾರ್ಥನೆಗೆ ಒಲಿಯುವ ದೇವರು ಶ್ರೀ ದುರ್ಗಾ ಮಾತೆಯಾಗಿದ್ದು ಹೊಸ ದೇವಾಲಯ ನಿರ್ಮಾಣಕ್ಕಿಂತ ಹಳೆಯ ದೇವಾಲಯದ ಜೀರ್ಣೋದ್ಧಾರದಲ್ಲಿ ಸಮಾಜದ ಉನ್ನತಿ ಅಡಗಿದೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಗಂಪದಬೈಲು ಜಯರಾಮ್ ಪ್ರಭು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ವೈ. ನಾಯಕ್ ಕುಕ್ಕಿಕಟ್ಟೆ ಉಭಯ ಶ್ರೀಗಳಿಗೆ ಪಾದಕಾಣಿಕೆ, ಫಲಪುಷ್ಪ ನೀಡಿ ಗೌರವಿಸಿದರು.ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಪ್ರಭು ಪಾಲಮೆ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗೋಕುಲ್ದಾಸ್ ನಾಯಕ್ ವೇದಿಕೆಯಲ್ಲಿದ್ದರು.
ಈ ಸಂದರ್ಭ ಮಲಬಾರ್ ಗೋಲ್ಡ್ಸ್ ಮತ್ತು ಡೈಮಂಡ್ಸ್ ಪ್ರಬಂಧಕ ರಾಘವೇಂದ್ರ ನಾಯಕ್ ಎರಡು ಗಡಿಯಾರವನ್ನು ಆಡಳಿತ ಮೊಕ್ತೇಸರ ಗಣಪತಿ ನಾಯಕ್‌ಅವರಿಗೆ ಹಸ್ತಾಂತರಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಗುರ್ನಬೆಟ್ಟು ಗಣಪತಿ ನಾಯಕ್ ಸ್ವಾಗತಿ ಸಿದರು. ಶ್ರೀ ಮಠದ ವೈದಿಕರರಿಂದ ವೇದ ಘೋಷ ನಡೆಯಿತು. ಜೀರ್ಣೋದ್ಧಾರ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬಿ. ಪುಂಡಲೀಕ ಮರಾಠೆ ನಿರೂಪಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ವಾಗೆÛ ವಂದಿಸಿದರು.