Advertisement

ಸಹಕಾರ ಕ್ಷೇತ್ರಕ್ಕೆ ಕೇಂದ್ರದ ಪೂರ್ಣ ಸಹಕಾರ!

07:42 PM Feb 01, 2023 | Team Udayavani |

ಕೇಂದ್ರ ಸರ್ಕಾರ ಸಹಕಾರಿ ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ. ಇತ್ತೀಚೆಗೆ ಸಹಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರುವ ಉದ್ದೇಶವನ್ನೂ ಹೊಂದಿದೆ. ಮಾತ್ರವಲ್ಲ ಆಕರ್ಷಕ ತೆರಿಗೆಗಳನ್ನು ಘೋಷಿಸುವ ಮೂಲಕ ಸಹಕಾರ ವಲಯವನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.

Advertisement

ಬುಧವಾರ ನಿರ್ಮಲಾ ಸೀತಾರಾಮನ್‌ ಮಾಡಿದ ಬಜೆಟ್‌ ಭಾಷಣದಲ್ಲಿ ಸಹಕಾರ ಕ್ಷೇತ್ರಕ್ಕೆ ಹಲವು ಸಹಕಾರಗಳನ್ನು ಪ್ರಕಟಿಸಿದ್ದಾರೆ.

ಮುಂದಿನ ವರ್ಷ ಮಾರ್ಚ್‌ 31ರವರೆಗೆ ಉತ್ಪಾದನಾ ಚಟುವಟಿಕೆ ಆರಂಭಿಸುವ ಹೊಸ ಸಹಕಾರಿ ಸಂಸ್ಥೆಗಳಿಗೆ ಕಡಿಮೆ ತೆರಿಗೆಯಿರುತ್ತದೆ. ಅಂದರೆ ಶೇ.15 ತೆರಿಗೆ ಹಾಕಲಾಗುತ್ತದೆ. ಪ್ರಸ್ತುತ ಈ ಸೌಲಭ್ಯವನ್ನು ಹೊಸ ಉತ್ಪಾದನಾ ಕಂಪನಿಗಳಿಗೆ ಮಾತ್ರ ನೀಡಲಾಗಿತ್ತು.

2016-17ರ ವಿತ್ತೀಯವರ್ಷಕ್ಕೂ ಹಿಂದಿನ ಅವಧಿಗೆ ಸೇರಿದಂತೆ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡಿದರೆ, ಅದನ್ನು ವೆಚ್ಚದ ಲೆಕ್ಕಕ್ಕೆ ಸೇರಿಸಿಕೊಳ್ಳಲು ಸಕ್ಕರೆ ಸಹಕಾರಿ ಸಂಘಗಳಿಗೆ ಅವಕಾಶ ನೀಡುವ ಉದ್ದೇಶವಿದೆ. ಇದರಿಂದ ಈ ವಲಯಕ್ಕೆ 10,000 ಕೋಟಿ ರೂ.ಗಳಷ್ಟು ಉಳಿತಾಯವಾಗಬಹುದು ಎನ್ನುವುದು ನಿರ್ಮಲಾ ಅಭಿಮತ.

ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ (ಪ್ಯಾಕ್ಸ್‌), ಪ್ರಾಥಮಿಕ ಕೃಷಿ ಸಹಕಾರ ಸಂಘಗಳು-ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಲ್ಲಿ (ಪಿಸಿಎಆರ್‌ಡಿಬಿಎಸ್‌), 2 ಲಕ್ಷ ರೂ.ವರೆಗೆ ನಗದನ್ನು ಠೇವಣಿಯಾಗಿ ಪಾವತಿಸುವ, ಅಷ್ಟೇ ಮೊತ್ತದ ಸಾಲವನ್ನು ನಗದಿನ ರೂಪದಲ್ಲಿ ಪಡೆಯುವ ಅವಕಾಶ ನೀಡಲಾಗುತ್ತದೆ.

Advertisement

ಹಾಗೆಯೇ ಟಿಡಿಎಸ್‌ ಪಾವತಿಸಿ 3 ಕೋಟಿ ರೂ.ವರೆಗೆ ನಗದನ್ನು ಪಡೆದುಕೊಳ್ಳಲು ಸಹಕಾರಿ ಸಂಘಗಳಿಗೆ ಅವಕಾಶ ನೀಡಲಾಗಿದೆ.

ಸಹಕಾರಿ ಸಂಸ್ಥೆಗಳ ಪಕ್ಕಾ ಮಾಹಿತಿಗೆ ಕ್ರಮ
ರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಪಕ್ಕಾ ಮಾಹಿತಿಯನ್ನು ಸಿದ್ಧಪಡಿಸಲು ಕೇಂದ್ರ ತೀರ್ಮಾನಿಸಿದೆ. ಎಲ್ಲೆಲ್ಲಿ ಎಷ್ಟು ಸಂಸ್ಥೆಗಳಿವೆ ಎಂದು ಲೆಕ್ಕವಿಡುವುದು ಇಲ್ಲಿನ ಉದ್ದೇಶ. ಸದ್ಯದ ಮಾಹಿತಿ ಪ್ರಕಾರ ದೇಶದಲ್ಲಿ 8.6 ಲಕ್ಷ ಸಹಕಾರಿ ಸಂಸ್ಥೆಗಳಿವೆ. ಈ ಪೈಕಿ ಮೂಲಭೂತ ಕೃಷಿ ಸಂಸ್ಥೆಗಳು 63,000.

Advertisement

Udayavani is now on Telegram. Click here to join our channel and stay updated with the latest news.

Next