Advertisement

ಜನತೆಗೆ ಶುಭ ಸುದ್ದಿ: ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ, ಅಡುಗೆ ಅನಿಲಕ್ಕೆ 200 ರೂ. ಸಬ್ಸಿಡಿ!

01:23 AM May 22, 2022 | Team Udayavani |

ಹೊಸದಿಲ್ಲಿ: ಬೆಲೆಯೇರಿಕೆಯ ಬಿಸಿಯಲ್ಲಿ ಬೇಯುತ್ತಿದ್ದ ಜನಸಾಮಾನ್ಯರಿಗೆ ಕೇಂದ್ರ ಸರಕಾರ ಶನಿವಾರ ಶುಭಸುದ್ದಿ ನೀಡಿದೆ. ಪೆಟ್ರೋಲ್‌-ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌, ಉಕ್ಕು, ಕಬ್ಬಿಣ, ಪ್ಲಾಸ್ಟಿಕ್‌, ಸಿಮೆಂಟ್‌ ದರಗಳನ್ನು ದಿಢೀರನೆ ಇಳಿಕೆ ಮಾಡಿ ಶನಿವಾರ ಘೋಷಣೆ ಹೊರಡಿಸಿದೆ. ಅಲ್ಲದೆ ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಹೆಚ್ಚಳ ಮಾಡಿದೆ.

Advertisement

ಇದರಿಂದ ಅನ್ನದಾತರು, ಶ್ರಮಿಕರು, ವಾಹನ ಚಾಲಕರು, ಮಾಲಕರು, ಮನೆ ಕಟ್ಟಿಸುತ್ತಿರುವವರ ಸಹಿತ ಬಡ ಮತ್ತು ಮಧ್ಯಮ ವರ್ಗದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆ, ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಎಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರವು 8 ವರ್ಷಗಳಲ್ಲೇ ಗರಿಷ್ಠಕ್ಕೇರಿತ್ತು. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದರ ಜತೆಗೆ ದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳುವ ಸುಳಿವನ್ನು ನೀಡಿತ್ತು. ಹೀಗಾಗಿ ಸರಕಾರ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

ನಿರ್ಮಲಾ ಘೋಷಣೆ
ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವಿಟರ್‌ ಮೂಲಕ ಈ ಎಲ್ಲ ಘೋಷಣೆಗಳನ್ನು ಮಾಡಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಅಬಕಾರಿ ಸುಂಕವನ್ನು ಸರಕಾರ ಕ್ರಮವಾಗಿ ಲೀ.ಗೆ 8 ರೂ. ಮತ್ತು 6 ರೂ. ಇಳಿಕೆ ಮಾಡಿದೆ. ಇದರಿಂದಾಗಿ ಒಂದು ಲೀಟರ್‌ ಪೆಟ್ರೋಲ್‌ ದರ 9.50 ರೂ. ಮತ್ತು ಡೀಸೆಲ್‌ ದರ 7 ರೂ. ಕಡಿಮೆಯಾಗಲಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಅಬಕಾರಿ ಸುಂಕ ಇಳಿಕೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಎಲ್ಲ ರಾಜ್ಯ ಸರಕಾರಗಳೂ ಇಂಧನ ತೈಲದ ಮೇಲಿನ ವ್ಯಾಟ್‌ ಇಳಿಸಲಿ. ಈ ಹಿಂದೆ ನಾವು ಅಬಕಾರಿ ಸುಂಕ ಇಳಿಸಿದ್ದಾಗ ಯಾವೆಲ್ಲ ರಾಜ್ಯಗಳು ಇಳಿಸಿರ ಲಿಲ್ಲವೋ ಅವು ಈಗಲಾದರೂ ಜನರಿಗೆ ನೆಮ್ಮದಿ ನೀಡಬೇಕು ಎಂದು ನಿರ್ಮಲಾ ಮನವಿ ಮಾಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಕೇರಳ ಸರಕಾರವು ಪೆಟ್ರೋಲ್‌ ಮೇಲೆ 2.41 ರೂ. ಮತ್ತು ಡೀಸೆಲ್‌ ಮೇಲೆ 1.36 ರೂ. ಅಬಕಾರಿ ಸುಂಕ ಇಳಿಸಿದೆ.

Advertisement

200 ರೂ. ಸಬ್ಸಿಡಿ
ಇದೇ ವೇಳೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫ‌ಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ (ವರ್ಷಕ್ಕೆ 12 ಸಿಲಿಂಡರ್‌ವರೆಗೆ)ಗೆ 200 ರೂ. ಸಬ್ಸಿಡಿ ನೀಡಲಾಗುವುದು. 9 ಕೋಟಿ ಮಂದಿಗೆ ಇದರಿಂದ ಅನುಕೂಲವಾಗಲಿದ್ದು, ಸರಕಾರಕ್ಕೆ ವಾರ್ಷಿಕ 6,100 ಕೋಟಿ ರೂ. ಹೊರೆ ಬೀಳಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

ಕಚ್ಚಾ ವಸ್ತುಗಳು ಅಗ್ಗ
ಪ್ಲಾಸ್ಟಿಕ್‌ ಉತ್ಪನ್ನಗಳು, ಉಕ್ಕು ಮತ್ತು ಕಬ್ಬಿಣದ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್‌ ಶುಲ್ಕವನ್ನು ಇಳಿಕೆ ಮಾಡಲು ಸರಕಾರ ನಿರ್ಧರಿಸಿದ್ದು, ಇದರಿಂದ ಅಂತಿಮ ಉತ್ಪನ್ನವೂ ಅಗ್ಗವಾಗಲಿದೆ. ಉಕ್ಕಿನ ಕೆಲವು ಕಚ್ಚಾವಸ್ತುಗಳ ಆಮದು ಶುಲ್ಕ ಇಳಿಕೆ ಮಾಡಲಾಗುವುದು. ಜತೆಗೆ ಕೆಲವು ಉಕ್ಕಿನ ಉತ್ಪನ್ನಗಳಿಗೆ ರಫ್ತು ಶುಲ್ಕ ವಿಧಿಸಲಾಗುವುದು. ದೇಶದಲ್ಲಿ ಸಿಮೆಂಟ್‌ ಲಭ್ಯತೆಯನ್ನು ಸುಧಾರಿಸಲು ಕೆಲವು ಕ್ರಮ ಕೈಗೊಳ್ಳಲಾಗಿದ್ದು, ಅದರ ಬೆಲೆಯನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ಸಚಿವೆ ಹೇಳಿದ್ದಾರೆ.

ಸಬ್ಸಿಡಿ ಅನುದಾನ ದುಪ್ಪಟ್ಟು
ಸರಕಾರವು ರಸಗೊಬ್ಬರ ಸಬ್ಸಿಡಿಗೆ ಮೀಸಲಿರಿಸಿದ ಅನುದಾನವನ್ನು ದುಪ್ಪಟ್ಟು ಮಾಡಿದೆ. ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 1.05 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಈಗ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂ.ಗಳನ್ನು ಸಬ್ಸಿಡಿಗೆಂದು ಒದಗಿಸಲಾಗುವುದು ಎಂದು ಸಚಿವೆ ನಿರ್ಮಲಾ ಘೋಷಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ದರವನ್ನು ದಿಢೀರ್‌ ಆಗಿ ದೊಡ್ಡ ಅಂತರದಲ್ಲಿ ಇಳಿಸಿರುವುದು ಜನಸಾಮಾನ್ಯರಿಗೆ ಖುಷಿ ತರುವ ವಿಚಾರ. ಆದರೆ ಪೆಟ್ರೋಲ್‌ ಡೀಲರ್‌ಗಳಿಗೆ ಇದು ದೊಡ್ಡ ಹೊಡೆತ. ಶನಿವಾರ ಈ ಬೆಳವಣಿಗೆ ನಡೆದಿದೆ. ಬಂಕ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಇರುತ್ತದೆ, ಹಾಗಾಗಿ ಇದರಿಂದ ನಮಗೆ ನಷ್ಟವಾಗುತ್ತದೆ. ಅದನ್ನು ಭರಿಸಲು ವರ್ಷವೇ ಬೇಕು.
-ಸುಧೀರ್‌ ಭಟ್‌, ಕಾರ್ಯದರ್ಶಿ ದ.ಕ., ಉಡುಪಿ ಜಿಲ್ಲಾ ಪೆಟ್ರೋಲ್‌ ಮಾರಾಟಗಾರರ ಸಂಘ

ಕರಾವಳಿಯಲ್ಲೆಷ್ಟು ?
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದರಗಳು ಪ್ರತೀ ಲೀಟರ್‌ ಪೆಟ್ರೋಲ್‌ಗೆ ಸುಮಾರು 100.52 ರೂ., ಪ್ರತೀ ಲೀಟರ್‌ ಡೀಸೆಲ್‌ಗೆ 87.51 ರೂ.ಗಳಿಗೆ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ನಮಗೆ ಸದಾ ಜನರೇ ಮೊದಲು. ಪೆಟ್ರೋಲ್‌-ಡೀಸೆಲ್‌ ಅಬಕಾರಿ ಶುಲ್ಕ ಇಳಿಕೆ ಸೇರಿದಂತೆ ಇಂದು ಕೈಗೊಂಡ ನಿರ್ಧಾರಗಳು ವಿವಿಧ ವಲಯಗಳ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ.
– ನರೇಂದ್ರ ಮೋದಿ, ಪ್ರಧಾನಿ

ಜನಪರ ತೀರ್ಮಾನ
ಪೆಟ್ರೋಲ್‌ , ಡೀಸೆಲ್‌ ದರ ಇಳಿಕೆಯೊಂದಿಗೆ ಉಜ್ವಲ ಯೋಜನೆಯ ಫ‌ಲಾನುಭವಿಗಳ ಅಡುಗೆ ಅನಿಲದ ಸಿಲಿಂಡರ್‌ಗೂ ಸಬ್ಸಿಡಿ ನೀಡಲು ಮುಂದಾಗಿರುವುದು ಅತ್ಯಂತ ಮಹತ್ವದ ನಿರ್ಧಾರ. ಇದು ಜನಪರ ತೀರ್ಮಾನ, ಇದಕ್ಕಾಗಿ ಕರ್ನಾಟಕದ ಜನತೆಯ ಪರವಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವೆೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌

ಇದನ್ನೂ ಓದಿ : ಮೇ 31ಕ್ಕೆ ಭಾರತೀಯ ಚುನಾವಣಾ ಆಯೋಗದ ಮುಂದೆ ಸೊರೇನ್‌ ಹಾಜರು?

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next