Advertisement

ಶಿವಶಂಕರರೆಡ್ಡಿಗೆ ಹತಾಶೆ, ರಾಜಕೀಯ ಭವಿಷ್ಯ ಚಿಂತೆ

09:41 PM Oct 22, 2019 | Team Udayavani |

ಚಿಕ್ಕಬಳ್ಳಾಪುರ: ಮುಂದಿನ ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆಯೋ ಎಂಬ ಹತಾಶೆ, ಆತಂಕದಿಂದ ಮಾಜಿ ಸಚಿವ ಎನ್‌.ಹೆಚ್‌.ಶಿವಶಂಕರರೆಡ್ಡಿ, ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ರಚಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಬೆಂಬಲಿಗರು ಟೀಕಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಧಾಕರ್‌ ಬೆಂಬಲಿಗರರಾದ ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ತಾಪಂ ಮಾಜಿ ಅಧ್ಯಕ್ಷ ವೆಂಕಟನರಾಯಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಅಪ್ಪಾಲು ಮಂಜು, ಲೀಲಾವತಿ ಶ್ರೀನಿವಾಸ್‌, ಕೆ.ವಿ.ಮಂಜುನಾಥ ಮತ್ತಿತರರು ಮಾಜಿ ಸಚಿವ ಶಿವಶಂಕರರೆಡ್ಡಿ ನೀಡಿರುವ ಕೈ ಕತ್ತರಿಸುವ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿ ತಮ್ಮ ಹೇಳಿಕೆ ವಾಪಸ್‌ ಪಡೆದು ಬಹಿರಂಗ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಅಡ್ಡಿಪಡಿಸುವುದು ಸರಿಯಲ್ಲ: ಮಂಚೇನಹಳ್ಳಿ ಹೋಬಳಿ ತಾಲೂಕು ಆಗಬೇಕೆಂಬುದು ಜನತೆಯ ಬಹುದಿನಗಳ ಬೇಡಿಕೆ. ಶಿವಶಂಕರರೆಡ್ಡಿಗೂ ಕೂಡ ಮಂಚೇನಹಳ್ಳಿ ಹೋಬಳಿ ಜನ ಮತ ಕೊಟ್ಟು ಶಾಸಕರನ್ನು ಮಾಡಿದ್ದಾರೆ. ಆದರೆ ಹೋಬಳಿ ಜನರ ಋಣ ತೀರಿಸುವುದರ ಬದಲು ತಾಲೂಕು ರಚನೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು. ಹೋಬಳಿಗೆ ಸೇರಿಸಬೇಕೆಂದಿರುವ ತೊಂಡೇಬಾವಿ, ಡಿ.ಪಾಳ್ಯ ಶಿವಶಂಕರರೆಡ್ಡಿ ಮನೆ ಆಸ್ತಿಯೇ ಎಂದು ಸುಧಾಕರ್‌ ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೈ ಕತ್ತರಿಸುತ್ತೇನೆಂದು ಹೇಳುವ ಶಿವಶಂಕರರೆಡ್ಡಿಗೆ ಈಗಾಗಲೇ ಬಹಳ ದಿನಗಳ ಹಿಂದೆ ಮರಳು ಗಲಾಟೆಯಲ್ಲಿ ಕೆಲವರು ಕೈ ಕತ್ತರಿಸಿದ್ದಾರೆ ಎಂದು ಸುಧಾಕರ್‌ ಬೆಂಬಲಿಗರು ಲೇವಡಿ ಮಾಡಿದರು. ಹಿರಿಯ ರಾಜಕಾರಣಿಯಾಗಿ ಮಂಚೇಹಳ್ಳಿ ತಾಲೂಕು ರಚನೆಗೆ ಬೆಂಬಲ, ಸಹಕಾರ ನೀಡುವುದರ ಬದಲು ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ, ಹತಾಶೆಯಿಂದ ಸುಧಾಕರ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಹತಾಶೆ ಮನೋಭಾವ: ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡುವುದರ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಹೊಸ ತಾಲೂಕಿಗೆ ಯಾವ ಹೋಬಳಿ ಸೇರಿಸಬೇಕು, ಬಿಡಬೇಕೆಂಬುದು ಸರ್ಕಾರ ನಿರ್ಧಾರ ಮಾಡುತ್ತದೆ. ಆದರೆ ರಾಜಕೀಯ ದುರುದ್ದೇಶದಿಂದ ಶಿವಶಂಕರರೆಡ್ಡಿ ಕ್ಷೇತ್ರದಲ್ಲಿ ಕೈ ಹಾಕಿದರೆ ಕೈ ಕತ್ತರಿಸುತ್ತೇನೆಂದು ಹೇಳಿಕೆ ನೀಡಿರುವುದು ಹತಾಶೆ ಮನೋಭಾವವನ್ನು ತೋರಿಸುತ್ತದೆ ಎಂದರು.

Advertisement

ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇರುವವರು ಈ ರೀತಿ ಹೇಳಿಕೆ ನೀಡುವುದಿಲ್ಲ. ಐದು ಬಾರಿ ಶಾಸಕರಾಗಿರುವ ಶಿವಶಂಕರರೆಡ್ಡಿ ಅಭಿವೃದ್ಧಿ ಪರ ನಿಲ್ಲದೇ ತಮ್ಮ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಸುಧಾಕರ್‌ ಬೆಂಬಲಿಗರು, ಮಾಜಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಜಿ.ಆರ್‌.ಶ್ರೀನಿವಾಸ್‌, ರಾಮಕುಮಾರ್‌, ವಿಜಯಕುಮಾರ್‌, ಆನಂದಪ್ಪ, ಗಜೇಂದ್ರ ಉಪಸ್ಥಿತರಿದ್ದರು.

ಶಿವಶಂಕರರೆಡ್ಡಿಗೆ ಸೋಲಿನ ಭಯ: ಶಿವಶಂಕರರೆಡ್ಡಿಗೆ ಮುಂದಿನ ಚುನಾವಣೆಗಳಲ್ಲಿ ಸೋಲುವ ಭೀತಿ ಕಾಡುತ್ತಿದೆ. ಆ ಕಾರಣಕ್ಕಾಗಿಯೇ ಅವರು ಮಂಚೇನಹಳ್ಳಿ ಹೋಬಳಿ ತಾಲೂಕು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸುಧಾಕರ್‌ ಬೆಂಬಲಿಗರು ಆರೋಪಿಸಿದರು.

ಇದೇ ರೀತಿ ವರ್ತನೆ ಮುಂದುವರಿದರೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಅವರೇ ಹೊಣೆ ಆಗುತ್ತಾರೆ. ಮಂಚೇನಹಳ್ಳಿ ತಾಲೂಕು ರಚನೆ ಅವರ ಮೊದಲ ಆಧ್ಯತೆ ಆಗಬೇಕಿತ್ತು. ಸುಧಾಕರ್‌ ಬಗ್ಗೆ ನೀಡಿರುವ ಹೇಳಿಕೆ ಕುರಿತು ಅವರು ಬಹಿರಂಗ ಕ್ಷೇಮೆ ಕೋರದಿದ್ದರೆ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರಕ್ಕೆ ಬಂದರೆ ಘೇರಾವ್‌ ಹಾಕುತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next