ಕೊಪ್ಪಳ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಮಾವು ಮೇಳ ಸೇರಿದಂತೆ ಹಲವು ಮೇಳ ಆಯೋಜನೆ ಮಾಡಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ. ಜಿಲ್ಲೆಯಲ್ಲಿ 10 ಎಕರೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ನಗರದ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ “ಮಾವು ಪ್ರದರ್ಶನ ಮತ್ತು ಮಾರಾಟ ಮೇಳ’ ಆರಂಭಿಸಿದೆ. ಈ ಮೂಲಕ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುತ್ತಿದೆ. ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ. ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಅವರ ಕಾರ್ಯ ಶ್ಲಾಘನೀಯ. ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸಲು ಇಂತಹ ಮೇಳ ಸಹಕಾರಿ ಎಂದರು.
ಈ ಮೇಳದಲ್ಲಿ ಕೇಸರ್, ಆಫೂಸ್, ದಶಹರಿ, ಬೆನೆಶಾನ್, ಮಲ್ಲಿಕಾ, ಸಿಂಧೂರಿ, ರಸಪೂರಿ, ತೋತಾಪೂರಿ, ಕಲ್ಮಿ ಹಾಗೂ ಉಪ್ಪಿನಕಾಯಿಗೆ ಬಳಸುವ ಮಾವಿನಕಾಯಿ ಸೇರಿದಂತೆ 100ಕ್ಕೂ ಅಧಿಕ ತಳಿಯ ಮಾವು ಪ್ರದರ್ಶನ ಮಾಡುತ್ತಿದ್ದು, ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದ ಮತ್ತು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 10 ಎಕರೆ ಘಟಕದಲ್ಲಿ ಪೇರಲೆ, ಪಪ್ಪಾಯಿ ಸೇರಿದಂತೆ ಇತರೆ ಹಣ್ಣುಗಳನ್ನು ಸಂಸ್ಕರಿಸಬಹುದು. ಮಾವು ಬೆಳೆಗಾರರಿಗೆ ಬ್ಯಾಂಕ್ ಸಾಲ ನೀಡುತ್ತದೆ. ಇದರ ಲಾಭ ಪಡೆದುಕೊಳ್ಳಬೇಕು. ಮೊನ್ನೆ ಸುರಿದ ಮಳೆಯಿಂದ ಹಲವೆಡೆ ಮಾವು ಬೆಳೆ ಹಾನಿಯಾಗಿದೆ. ಅದರ ಸಮೀಕ್ಷೆ ಮಾಡಿಸಿ ಮಾವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಮೇಳಕ್ಕೆ ಚಾಲನೆ: ಕೊಪ್ಪಳ ಮಾವು ಮೇಳ ನಿಮಿತ್ತ ತೋಟಗಾರಿಕೆ ಇಲಾಖೆಯಿಂದ ಈ ಬಾರಿ ಡಿಜಿಟಲ್ ವ್ಯವಸ್ಥೆ ಜಾರಿಗೆ ತಂದಿದ್ದು, ಮನೆಯಲ್ಲಿಯೇ ಕುಳಿತು ಯಾವುದೇ ತಳಿಯ ಮಾವುಗಳನ್ನು ಖರೀಸಬಹುದು. ತೋಟಗಾರಿಕೆ ಇಲಾಖೆ ಹಾಗೂ ಕೊಪ್ಪಳ ಒನ್ ಸಂಸ್ಥೆಯ ಆಶ್ರಯದಲ್ಲಿ ಕೊಪ್ಪಳ-ಒನ್ ಎಂಬ ಆ್ಯಪ್ ಸಿದ್ಧಪಡಿಸಿದ್ದು, ಗೂಗಲ್ ಪ್ಲೇಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಂಡು ಇದರ ಮೂಲಕ 200 ಗ್ರಾಮ್‌ನಿಂದ ಎಷ್ಟು ಕೆಜಿ ಬೇಕಾದರೂ ಮಾವುಗಳನ್ನು ತರಿಸಿಕೊಳ್ಳಬಹುದು. ಡಿಜಿಟಲ್ ಮಾವು ಮೇಳದ ಮಳಿಗೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು. ಸಚಿವರು ಆ್ಯಪ್‌ನ್ನು ಲೋಕಾರ್ಪಣೆ ಮಾಡಿದರು.
ಮಾವು ಸವಿದ ಗಣ್ಯರು: ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಸಿಇಒ ಹಾಗೂ ಹಲವಾರು ಗಣ್ಯರು ಮಾವಿನ ರುಚಿ ಸವಿದರು. ಪ್ಲಾಸ್ಟಿಕ್ ಬಳಕೆ ತಡೆಯುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಸಿದ್ಧಪಡಿಸಿದ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಕೆಒಎಫ್ ಅಧ್ಯಕ್ಷ ಸುರೇಶರಡ್ಡಿ ಮಾದಿನೂರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಅಧಿಕಾರಿಗಳಾದ ಪೂರ್ಣಿಮಾ, ಮಂಜುನಾಥ ಲಿಂಗಣ್ಣನವರ, ದುರ್ಗಾಪ್ರಸಾದ್, ಶರಣಬಸವ ಮನ್ನಾಪುರ, ಜಗನ್ನಾಥರೆಡ್ಡಿ, ವಾಮನಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.