Advertisement

ಫಲಪುಷ್ಪ ಪ್ರದರ್ಶನ: ಸಿದ್ದಗೊಳ್ಳುತ್ತಿದೆ ಕದ್ರಿ ಪಾರ್ಕ್‌

06:35 PM Jan 06, 2023 | Team Udayavani |

ಮಹಾನಗರ: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಎರಡು ವರ್ಷಗಳ ಕೋವಿಡ್‌ ವಿರಾಮದ ಬಳಿಕ ಪ್ರದರ್ಶನ ಆಯೋಜನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರೂ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವ ನಿರೀಕ್ಷೆಯಿದೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕೆ ಇಲಾಖೆ, ಕದ್ರಿ ಪಾರ್ಕ್‌ ಅಭಿವೃದ್ಧಿ ಸಮಿತಿಯ ಒಟ್ಟು ಸೇರುವಿಕೆಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಗಣರಾಜ್ಯೋತ್ಸವ ದಿನದಂದು ಉದ್ಘಾಟನೆಗೊಂಡು ಮೂರು ದಿನಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ನಾಲ್ಕು ದಿನಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ.ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಕದ್ರಿಪಾರ್ಕ್‌ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೂರಕ ಕೆಲಸಗಳು ಆರಂಭ ಕದ್ರಿಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆಗೊಳ್ಳುವ ಸ್ಥಳವನ್ನು ಸ್ವತ್ಛ ಮಾಡುವ ಕೆಲಸಗಳು ನಡೆಯುತ್ತಿದೆ. ಹುಲ್ಲು ತೆರವು ಮಾಡುವುದು, ಬಣ್ಣ ಬಳಿಯುವ ಕೆಲಸಗಳು ಈಗಾಗಲೇ ಆರಂಭವಾಗಿದೆ. ಪ್ರದರ್ಶನದ ಭಾಗವಾಗಿರುವ ತರಕಾರಿ ಗಿಡಗಳನ್ನು ಬೆಳೆಸುವ ಕೆಲಸ ಕಳೆದ ಅಕ್ಟೋಬರ್‌ ತಿಂಗಳಲ್ಲೇ ಆರಂಭವಾಗಿದ್ದು, ಬಹುತೇಕ ಗಿಡಗಳಲ್ಲಿ ಹೂವು ಅರಳಿ ಫಲಬಿಟ್ಟಿವೆ. ಬೆಂಡೆ, ಸೌತೆ, ಚೀನಿಕಾಯಿ, ಬಸಳೆ, ತೊಂಡೆ, ಹರಿವೆ, ಅಲಸಂಡೆ ಮೊದಲಾದ ಸುಮಾರು 30ಕ್ಕೂ ಅಧಿಕ ಬಗೆಯ ವಿವಿಧ ತರಕಾರಿಗಳನ್ನು ಬೆಳೆಸಲಾಗಿದೆ.

ಅಲಂಕಾರಿಕ ಗಿಡಗಳು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಅಲಂಕಾರಿಕ ಹೂವಿನ ಗಿಡಗಳನ್ನು ತರಿಸಿಕೊಳ್ಳಲಾಗಿದ್ದು, ಅವುಗಳನ್ನು ಹೂ ಕುಂಡಗಳಲ್ಲಿ ನೆಡುವ ಕೆಲಸಗಳನ್ನು ಹೂದೋಟದ ಕೆಲಸದವರು ಮಾಡುತ್ತಿದ್ದಾರೆ. ಸಾವಿರಕ್ಕೂ ಅಧಿಕ ಗಿಡಗಳನ್ನು ತರಿಸಿಕೊಳ್ಳಲಾಗಿದ್ದು, ಫಲಪುಷ್ಪ ಪ್ರದರ್ಶನದ ವೇಳೆ ಇದನ್ನು ಅಲಂಕಾರಕ್ಕಾಗಿ ಇಡಲಾಗುತ್ತದೆ. ಗೊಂಡೆ, ಮೆರಿಗೋಲ್ಡ್‌, ಜೆರೇನಿಯಂ, ಡೇಲ್ಯ, ಜೀನ್ಯ, ಫಿಲೋಸಿಯಾ, ಕೋಕ್ಸ್‌ ಕೋಂಬ್‌, ಕಾಸ್ಮೋಸ್‌, ಹಾಲಿಯಾಕ್‌ ಮೊದಲಾದ ಜಾತಿಯ ಹೂವಿನ ಗಿಡಗಳು ಪ್ರದರ್ಶನದಲ್ಲಿ ಆಕರ್ಷಿಸಲಿದೆ.

1 ರೂ.ಗೆ ತರಕಾರಿ ಗಿಡ
ಫಲಪುಷ್ಪ ಪ್ರದರ್ಶನದಲ್ಲಿ ಈ ಹಿಂದಿನ ವರ್ಷಗಳಲ್ಲಿ 1 ರೂ.ಗೆ ತರಕಾರಿ ಗಿಡ ನೀಡುವ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯೂ ಇದನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ವಿವಿಧ ತರಕಾರಿ ಸಸಿಗಳನ್ನು ಬೆಳೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

Advertisement

ಅಗತ್ಯ ಸಿದ್ಧತೆ
ಕದ್ರಿ ಪಾರ್ಕ್‌ನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಲಾಗಿದೆ. ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುವ ಕದ್ರಿಪಾರ್ಕ್‌ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದೆ.
– ಪ್ರವೀಣ್‌ ಕೆ.,
ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next