Advertisement

Fruad: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿ: ಯೋಧನೆಂದು ನಂಬಿಸಿ 10 ಸಾವಿರ ರೂ. ಪೀಕಿಸಿದರು

09:44 PM Sep 03, 2024 | Team Udayavani |

ಪುತ್ತೂರು: ಫೇಸ್‌ಬುಕ್‌ವೊಂದರಲ್ಲಿ ತನ್ನ ಸಂಬಂಧಿಕರ ಹೆಸರಿನಲ್ಲಿ ಮೆಸೆಂಜರ್‌ಗೆ ಬಂದ ಸಂದೇಶ ಅಸಲಿಯೆಂದು ನಂಬಿ ವ್ಯವಹಾರ ಮುಂದುವರಿಸಿ 10 ಸಾವಿರ ರೂ. ಕಳೆದುಕೊಂಡ ಘಟನೆ ಪುತ್ತೂರಿನ ಪೆರ್ಲಂಪಾಡಿಯಲ್ಲಿ ನಡೆದಿದೆ.

Advertisement

ಘಟನೆ ವಿವರ

ಪುತ್ತೂರಿನಲ್ಲಿ ಉದ್ಯೋಗಿಯಾಗಿರುವ ಭರತ್‌ ಕುಮಾರ್‌ ಅವರಿಗೆ ಕೆಲವು ದಿನಗಳ ಹಿಂದೆ ರಾಧಾಕೃಷ್ಣ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ ರಿಕ್ವೆಸ್ಟ್‌ ಬಂದಿತ್ತು. ಪ್ರೊಫೈಲ್‌ನಲ್ಲಿದ್ದ ರಾಧಾಕೃಷ್ಣ ಅವರು ದೂರದ ಸಂಬಂಧಿ ಆಗಿದ್ದ ಕಾರಣ ಒಪ್ಪಿಗೆ ಸೂಚಿಸಿದ್ದರು. ಆ. 31ರಂದು ರಾಧಾಕೃಷ್ಣ ಅವರು ಮೆಸೇಂಜರ್‌ ಮೂಲಕ ಭರತ್‌ಗೆ, ಬೆಂಗಳೂರಿನಲ್ಲಿ ಸಿಆರ್‌ಪಿ ಯೋಧನಾಗಿರುವ ನನ್ನ ಮಿತ್ರನಿಗೆ ಜಮ್ಮು ಕಾಶ್ಮೀರದಕ್ಕೆ ವರ್ಗಾವಣೆ ಆಗಿದೆ. ಅವರ ಮನೆಯಲ್ಲಿರುವ ಗೃಹಯೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಂಗ್ಲ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದರು. ಇದಕ್ಕೆ ಒಕೆ ಎಂದಿದ್ದಕ್ಕೆ ನಿಮ್ಮ ನಂಬರ್‌ ಕಳುಹಿಸುವಂತೆ ಸೂಚಿಸಿದ್ದರು. ಭರತ್‌ ತನ್ನ ನಂಬರ್‌ ಕಳುಹಿಸಿದ್ದರು. ಸೆ. 1ರಂದು ಯೋಧ ಕರೆ ಮಾಡುತ್ತಾನೆ ಎಂದು ರಾಧಾಕೃಷ್ಣ ಅವರು ಮರು ಸಂದೇಶ ಕಳುಹಿಸಿದ್ದರು.

ಬೆಳ್ಳಂಬೆಳಗ್ಗೆ ಕರೆ

ಸೆ. 1ರಂದು ಬೆಳಗ್ಗೆ 7.30ಕ್ಕೆ ಅಪರಿಚಿತ ನಂಬರ್‌ನಿಂದ ಭರತ್‌ಗೆ ಎರಡು ಬಾರಿ ಬಂದಾಗ ಕರೆ ಸ್ವೀಕರಿಸಿಲ್ಲ. ಆ ವೇಳೆ ವಾಟ್ಸಪ್‌ ಸಂದೇಶ ಕಳುಹಿಸಿ ಅಪರಿಚಿತ ತಾನೂ ಯೋಧ ಸಂತೋಷ್‌ ಎಂದು ಪರಿಚಯಿಸಿ ರಾಧಾಕೃಷ್ಣ ಅವರು ನಂಬರ್‌ ನೀಡಿದ್ದು ಎನ್ನುತ್ತಾನೆ. ಮತ್ತೆ ಕರೆ ಮಾಡಿ ಮಾತುಕತೆ ನಡೆಸುತ್ತಾನೆ. ಇನ್‌ವರ್ಟರ್‌, ಡೈನಿಂಗ್‌ ಟೇಬಲ್‌, ಮಂಚ, ಎ.ಸಿ., ಟಿ.ವಿ., ಪ್ರಿಡ್ಜ್, ವಾಶಿಂಗ್‌ಮಿಶನ್‌ ಮೊದಲಾದ ವಸ್ತುಗಳಿದ್ದು 95 ಸಾವಿರ ರೂ. ನೀಡುವುದಾಗಿ ಹೇಳುತ್ತಾನೆ. ಜತೆಗೆ ಸಾಮಗ್ರಿಗಳ ಪೋಟೋ ಅನ್ನು ಕಳುಹಿಸಿದ್ದ. ಇದನ್ನು ನೋಡಿ ಖುಷಿಯಾದ ಭರತ್‌ ಮಾತು ಮುಂದುವರಿಸುತ್ತಾರೆ. ರೇಟ್‌ ಕಡಿಮೆ ಮಾಡಿ ಎನ್ನುತ್ತಾರೆ. ಇದಕ್ಕೆ ಆತ ಒಪ್ಪಿಲ್ಲ. ಕೊನೆಗೂ ಇಬ್ಬರ ನಡುವೆ ಡೀಲ್‌ ಕುದುರುತ್ತದೆ.

Advertisement

25 ಸಾವಿರ ರೂ. ಕಳುಹಿಸಿ

ಮೊದಲಿಗೆ ಸಂತೋಷ್‌ ತನಗೆ ತತ್‌ಕ್ಷಣ 25 ಸಾವಿರ ರೂ. ಕಳುಹಿಸಿ ಎನ್ನುತ್ತಾನೆ. ಅಷ್ಟು ಹಣ ನನ್ನಲ್ಲಿ ಇಲ್ಲ, 10 ಸಾವಿರ ರೂ. ಕಳುಹಿಸುವೆ ಎಂದು ಭರತ್‌ ಹೇಳುತ್ತಾರೆ. ಫೋನ್‌ ಪೇ ಅಥವಾ ಗೂಗಲ್‌ ಪೇ ಯಾವುದು ಎಂದು ಸಂತೋಷ್‌ ವಿಚಾರಿಸಿದ್ದಾನೆ. ಆಗ ಭರತ್‌ ಫೋನ್‌ ಪೇ ಎಂದಿದ್ದಾರೆ. ತತ್‌ಕ್ಷಣ ಅತ್ತ ಕಡೆಯಿಂದ ಹಣ ಕಳುಹಿಸಬೇಕಾದ ದೂರವಾಣಿ ಸಂಖ್ಯೆಯನ್ನು ಆತ ಹೇಳುತ್ತಾನೆ. ಈ ನಂಬರ್‌ನಲ್ಲಿ ಬಾಬುಲಾಲ್‌ ಎಂಬ ಹೆಸರು ಡಿಸ್‌ಪ್ಲೆ ಆಗುತ್ತಿದ್ದು, ಭರತ್‌ ತನ್ನ ಅಕೌಂಟ್‌ನಲ್ಲಿ ಹಣ ಇಲ್ಲದ ಕಾರಣ ತಂದೆ ಬಾಲಕೃಷ್ಣ ಅವರ ಬ್ಯಾಂಕ್‌ ಖಾತೆಯಿಂದ 10 ಸಾವಿರ ವರ್ಗ ಮಾಡುತ್ತಾರೆ. ಹಣ ಸಂದಾಯದ ಬಳಿಕ ಸ್ಕ್ರೀನ್‌ ಶಾಟ್‌ ಕಳುಹಿಸುವಂತೆ ಆತ ಹೇಳುತ್ತಾನೆ. ಈ ಎಲ್ಲ ಪ್ರಕ್ರಿಯೆ ಆಗಿ ಬಾಬು ಲಾಲ್‌ ಹೆಸರಿಗೆ ಹಣ ಸಂದಾಯ ಆಗಿರುವುದನ್ನು ಖಚಿತ ಪಡಿಸಿದ ಬಳಿಕ ಸಂತೋಷ್‌ ಕರೆ ಕಟ್‌ ಮಾಡುತ್ತಾನೆ.

ಲೋಡ್‌ ಮಾಡುವ ಫೋಟೋ

ಇದಾದ ಹತ್ತೇ ನಿಮಿಷದಲ್ಲಿ ಸಿಆರ್‌ಪಿ ಇಲಾಖೆಯ ವಾಹನದಲ್ಲೇ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂತೋಷ್‌ ಫೋಟೋ ಸಹಿತ ಸಂದೇಶ ಕಳುಹಿಸುತ್ತಾನೆ. ಫೋಟೋ ನೋಡುವಾಗ ಭರತ್‌ಗೆ ಅನುಮಾನ ಮೂಡುತ್ತದೆ. ಇದಾದ ಕೆಲವು ನಿಮಿಷಗಳಲ್ಲಿ ಪದೇಪದೆ ಕರೆ ಮಾಡಿ ಉಳಿದ ಹಣ ಯಾವಾಗ ಹಾಕುತ್ತೀರಿ ಎಂದು ಆತ ಪ್ರಶ್ನೆ ಮಾಡುತ್ತಾನೆ. ಪೇಟೆಗೆ ಹೋಗಿ ಹಾಕುವೆ ಎಂದಾಗ ಮತ್ತೆ ಮತ್ತೆ ಕರೆ ಮಾಡುತ್ತಿರುತ್ತಾನೆ. ಈ ವೇಳೆ ಇದು ಮೋಸದ ಜಾಲ ಎನ್ನುವ ಸಂಶಯ ಭರತ್‌ಗೆ ಮೂಡುತ್ತದೆ.

ರಾಧಾಕೃಷ್ಣ ಖಾತೆಯೇ ನಕಲಿ

ತನಗೆ ಮೆಸೇಂಜರ್‌ನಲ್ಲಿ ಸಂದೇಶ ಕಳುಹಿಸಿದ ರಾಧಾಕೃಷ್ಣ ಖಾತೆಯನ್ನು ಪರಿಶೀಲಿಸಿ ಬಳಿಕ ತನ್ನ ಸಂಬಂಧಿಕರ ಮೂಲಕ ಭರತ್‌ ಅವರ ನಂಬರ್‌ ಪಡೆಯುತ್ತಾರೆ. ರಾಧಾಕೃಷ್ಣ ಅವರಿಗೆ ಕರೆ ಮಾಡಿದ ಸಂದರ್ಭ ಇದು ನಕಲಿ ಫೇಸ್‌ಬುಕ್‌ ಖಾತೆ ಅನ್ನುವ ಅಂಶ ತಿಳಿದು ಬರುತ್ತದೆ. ಕೆಲವು ದಿನಗಳಿಂದ ತನ್ನ ಹೆಸರಿನಲ್ಲಿ ನಕಲಿ ಸೃಷ್ಟಿಯಾಗಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ದೂರು ನೀಡಿರುವ ಬಗ್ಗೆ ಅವರು ಹೇಳುತ್ತಾರೆ. ಹೀಗಾಗಿ ಭರತ್‌ಗೆ ತಾನು ಮೋಸ ಹೋದದ್ದು ಅರಿವಿಗೆ ಬಂದು ಸೈಬರ್‌ ಕ್ರೈಂನಲ್ಲಿ ದೂರು ದಾಖಲಿಸುತ್ತಾರೆ. ಸೆ. 1ರಂದು ಸಂಜೆ ವೇಳೆ ರಾಧಾಕೃಷ್ಣ ಅವರ ಹೆಸರಿನ ನಕಲಿ ಖಾತೆಯು ನಿಷ್ಕ್ರಿಯವಾಗಿತ್ತು. ಸಂತೋಷ್‌ ಎಂಬ ಹೆಸರಿನಲ್ಲಿ ಕರೆ ಮಾಡಿದ ನಂಬರ್‌ ಕೂಡ ಬ್ಲಾಕ್‌ ಆಗಿತ್ತು. ಆದರೆ ಹಣ ಪಾವತಿಸಿದ ಬಾಬುಲಾಲ್‌ ಅವರ ನಂಬರ್‌ ಚಾಲ್ತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next