Advertisement

ಪ್ರಾಚೀನ ಶಿಕ್ಷಣದಲ್ಲಿ ಕಲಬುರಗಿಗೆ ಮುಂಚೂಣಿ ಸ್ಥಾನ

02:06 PM Mar 30, 2019 | pallavi |

ಆಳಂದ: ಪ್ರಾಚೀನ ಕರ್ನಾಟಕದ ಶಿಕ್ಷಣ ರಂಗದಲ್ಲಿ ಕಲಬುರಗಿ ಜಿಲ್ಲೆ ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಡಾ| ಶ್ರೀನಿವಾಸ ಸಿರನೂರಕರ್‌ ಹೇಳಿದರು.

Advertisement

ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ಮತ್ತು ಪರಂಪರೆ ಮೇಲೆ ಹೊಸ ಬೆಳಕು ಎನ್ನುವ ಕಾರ್ಯಾಗಾರದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಶೈಕ್ಷಣಿಕ ಪರಂಪರೆ ಕುರಿತು ವಿಷಯ ಮಂಡಿಸಿ ಅವರು ಮಾತನಾಡಿದರು.

ಜಿಲ್ಲೆಯ ಜೇವರ್ಗಿ ತಾಲೂಕಿನ ಅವರಾದಿಯಲ್ಲಿ ಪತ್ತೆಯಾಗಿರುವ ಸುಮಾರು ಎರಡನೇ ಶತಮಾನದ ಶಾತವಾಹನರ ಶಿಲಾಶಾಸನದ ಪ್ರಕಾರ ಆ ಗ್ರಾಮದಲ್ಲಿ ವಿದ್ಯಾಲಯ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಪ್ರಾಚೀನ ಕಾಲದ ಸಾಂಸ್ಥಿಕ ಶಿಕ್ಷಣ ಸ್ವರೂಪದ ಅತ್ಯಂತ ಮಹತ್ವದ ಸಂಗ್ರಹವಾಗಿದೆ ಎಂದು ಬಣ್ಣಿಸಿದರು.

ಕ್ರಿ.ಶ. 350ರ ಸುಮಾರಿನ ಶಿವಮೊಗ್ಗ ಜಿಲ್ಲೆಯ ತಾಳಗುಂದಾದ ಅಗ್ರಹಾರವೇ ರಾಜ್ಯದ ಮೊದಲ ಅಗ್ರಹಾರ ಎನ್ನುವ ಖ್ಯಾತಿ ಇದ್ದರೂ, ಇದಕ್ಕೂ ಸಾಕಷ್ಟು ಮುಂಚೆಯೇ ಕಲಬುರ್ಗಿ ಭಾಗದಲ್ಲಿ ಸಾಂಸ್ಥಿಕ ಶಿಕ್ಷಣದ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂದು ಪ್ರತಿಪಾದಿಸಿದರು.

ಪ್ರಾಚೀನ ಶಿಕ್ಷಣ ಯಜ್ಞದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಅನೇಕ ಶಾಸನಗಳಿಂದ ತಿಳಿದು ಬಂದಿದೆ. ಕುಳಗೇರಿಯ ವಿದ್ಯಾ ಕೇಂದ್ರಕ್ಕೆ ಸಾಮಾನ್ಯ ದಾಸಿಯೊಬ್ಬಳು ದಾನ ನೀಡಿದ ಸಂಗತಿ ಮಹತ್ವದ್ದಾಗಿದೆ ಎಂದು ಹೇಳಿದರು.

Advertisement

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಾಗಾವಿ ಘಟಿಕಾ ದಕ್ಷಿಣದ ನಾಳಂದಾ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ನಾಗಾವಿ ಗ್ರಂಥಾಲಯ ಕರ್ನಾಟಕದ ಏಕೈಕ ಶಾಸನೋಕ್ತ ಗ್ರಂಥಾಲಯವಾಗಿತ್ತು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ, ಉರ್ದು ಸಾಹಿತ್ಯ, ವಚನ ಸಾಹಿತ್ಯದ ತವರೂರು ಆಗಿರುವ ಹೈದ್ರಾಬಾದ ಕರ್ನಾಟಕದಲ್ಲಿ ಪ್ರಾಚೀನ ಮತ್ತು ಮಧ್ಯಯುಗದ ಕಾಲದಲ್ಲಿ ಅಗ್ರಹಾರ, ಬ್ರಹ್ಮಪುರಿ, ಮಠ ಮತ್ತು ಘಟಿಕಾ ಎನ್ನುವ ನಾಲ್ಕು ಪ್ರಕಾರದ ಶಿಕ್ಷಣ ಸಂಸ್ಥೆಗಳು ವಿದ್ಯಾದಾನದಲ್ಲಿ ಪ್ರಧಾನ ಪಾತ್ರ ವಹಿಸಿವೆ. 16ನೇ ಶತಮಾನದ ಬೀದರ್‌ನ ಮೆಹಮೂದ್‌ ಗವಾನ್‌ ಮದರಸಾ ಒಂದು ವಿಶ್ವವಿದ್ಯಾಲವಾಗಿದ್ದು, ವಿದೇಶಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೆ ಬರುತ್ತಿದ್ದರು ಎಂದು ವಿವರಿಸಿದರು.

ಹೆಸರಾಂತ ಪುರಾತತ್ವ ತಜ್ಞ ಧಾರವಾಡದ ಪ್ರೊ| ರವಿ ಕೋರಿಶೆಟ್ಟರ್‌ ಭೀಮಾ ಕಣಿವೆಯ ಪ್ರಾಗೈತಿಹಾಸ, ಪಶ್ಚಿಮ ಬಂಗಾಳದ ವಿದ್ಯಾಸಾಗರ್‌ ವಿಶ್ವವಿದ್ಯಾಲಯದ ಡಾ| ಶಮಿತಾ ಸರ್ಕಾರ್‌ ಭಾರತದಲ್ಲಿ ಹೈದ್ರಾಬಾದ ಕರ್ನಾಟಕ ವಿಲೀನ ಮತ್ತು ಕರ್ನಾಟಕ ರಾಜ್ಯ ನಿರ್ಮಾಣದ ಮಹತ್ವ ಹಾಗೂ ಹೈದ್ರಾಬಾದನ ಮೌಲಾನಾ ಅಜಾದ್‌ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡಾ| ಡ್ಯಾನಿಷ್‌ ಮೋಮಿನ್‌ ಕುತುಬ್‌ ಶಾಹಿ ಮತ್ತು ಬರೀದ್‌ ಸುಲ್ತಾನರ ನಾಣ್ಯ ಸಂಪ್ರದಾಯದ ಅರಿವು ವಿಷಯಗಳ ಮೇಲೆ ತಮ್ಮ ಪ್ರಬಂಧ ಮಂಡಿಸಿದರು.

ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಮೊಹ್ಮದ್‌ ಸಜರುಲ್‌ ಬಾರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next