ಇಂಡಿ: ತಾಲೂಕಿನ ಲಚ್ಯಾಣ ಹಾಗೂ ನಿವರಗಿ ಗ್ರಾಮಗಳಲ್ಲಿ ಮನೆಗೊಬ್ಬರಂತೆ ಶಿಕ್ಷಕರಿದ್ದಾರೆ. ಈ ಗ್ರಾಮಗಳು ಶಿಕ್ಷಕರ ತವರೂರು ಎಂದೇ ಹೆಸರುವಾಸಿಯಾಗಿವೆ.
ಹೌದು. ಐದು ಸಾವಿರ ಜನಸಂಖ್ಯೆ ಹೊಂದಿದ ನಿವರಗಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಶಿಕ್ಷಕರಿದ್ದರೆ, ಎಂಟು ಸಾವಿರ ಜನಸಂಖ್ಯೆ ಹೊಂದಿದ ಲಚ್ಯಾಣ ಗ್ರಾಮದಲ್ಲಿ 800ಕ್ಕೂ ಹೆಚ್ಚು ಶಿಕ್ಷಕರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ.
ಇಲ್ಲಿನ ಶಿಕ್ಷಕರು ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಶಿಕ್ಷಕರ ನೇಮಕಾತಿ ನಡೆಸಿದಾಗಲೊಮ್ಮೆ ಈ ಎರಡೂ ಗ್ರಾಮಗಳಲ್ಲಿ ಕನಿಷ್ಠ ಪಕ್ಷ 15-20 ಅಭ್ಯರ್ಥಿಗಳು ಶಿಕ್ಷಕರಾಗಿ ಆಯ್ಕೆಯಾಗುತ್ತಾರೆ.
ಜಿಲ್ಲೆಯ ವಿವಿಧ ಪ್ರಾಥಮಿಕ ಶಾಲೆಗಳಲ್ಲಿ 300ಕ್ಕೂ ಹೆಚ್ಚು, ಪ್ರೌಢಶಾಲೆಗಳಲ್ಲಿ 100ಕ್ಕೂ ಹೆಚ್ಚು ಹಾಗೂ ಪಿಯು ಕಾಲೇಜುಗಳಲ್ಲಿ 50ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ನಿವರಗಿ ಗ್ರಾಮದ ಸಿದ್ರಾಮಪ್ಪ ಎಳಮೇಲಿ ಎಂಬುವರ ಮನೆಯಲ್ಲೇ 8 ಜನ ಶಿಕ್ಷಕರಿದ್ದಾರೆ. ಇಲ್ಲಿಯ 20ಕ್ಕೂ ಹೆಚ್ಚು ಶಿಕ್ಷಕರು ಸರ್ಕಾರ ನೀಡುವ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಇಲ್ಲಿಯ ಜೆ.ಕೆ.ಬಗಲಿ ಎಂಬುವರು ಶಿಕ್ಷಕರಾಗಿ, ನಂತರ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಈ ಗ್ರಾಮಗಳಲ್ಲಿಯ 100ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಈಗಲೂ ಈ ಎರಡೂ ಗ್ರಾಮದ ಯುವಕರು ಶಿಕ್ಷಕರಾಗಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಬೇರೆ ಬೇರೆ ಉದ್ಯೋಗಕ್ಕಿಂತ ಶಿಕ್ಷಕರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವುದು ಯುವಕರ ಉದ್ದೇಶವಾಗಿದೆ. ಶಿಕ್ಷಕರ ದಿನ ಇಲ್ಲವೇ ಬೇರೆ ದಿನಗಳಲ್ಲಿ ವಿವಿಧೆಡೆ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಗ್ರಾಮದ ಯುವ ಕರು ಒಂದೆಡೆ ಸೇರಿ ಶಿಕ್ಷಣಕ್ಕಾಗಿ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ. ಗ್ರಾಮದ ಶಾಲೆ ನವೀಕರಣ ಸೇರಿದಂತೆ ಹತ್ತು ಹಲವು ಸಮಾಜಮುಖೀ ಕಾರ್ಯ ಮಾಡುತ್ತಿದ್ದಾರೆ ಎಂಬುದೇ ಹೆಮ್ಮೆಯ ವಿಚಾರ.
ನಿವರಗಿ ಗ್ರಾಮದಲ್ಲಿ ಹೆಚ್ಚು ಜನ ಶಿಕ್ಷಕ ವೃತ್ತಿ ಆಯ್ದುಕೊಳ್ಳಲು ಮುಖ್ಯವಾಗಿ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರ ಪ್ರೇರಣೆ.
● ಸುನೀಲ ಎಳಮೇಲಿ, ನಿವರಗಿ ಶಿಕ್ಷಕ
ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಶೈಕ್ಷಣಿಕ ದಾಸೋಹ ಮಾಡಿದ್ದಾರೆ. ಶಿಕ್ಷಕರ ತರಬೇತಿ ಕೇಂದ್ರದಿಂದ ಸಾವಿರಾರು ಜನ ಶಿಕ್ಷಕರಾಗಿದ್ದಾರೆ. ಗ್ರಾಮದಲ್ಲಿ ಒಟ್ಟು 800 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
● ದೊಡಗೊಂಡಪ್ಪ ಬಿರಾದಾರ ಲಚ್ಯಾಣ ನಿವಾಸಿ