ಬಳ್ಳಾರಿ: ಭಾರತ ಸೇವಾದಳದಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುವ ರಾಷ್ಟ್ರೀಯ ಭಾವೈಕ್ಯತಾ ಮೇಳವನ್ನು 30 ವರ್ಷಗಳ ಬಳಿಕ ಮೊದಲ ಬಾರಿಗೆ ಜ.18,19 ರಂದು ಎರಡು ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಭಾರತ್ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಟಿ.ಜಿ.ವಿಠuಲ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲಾ ಮೈದಾನದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮೇಳವನ್ನು ಆಯೋಜಿಸಲಾಗಿದೆ. ಜ.18ರಂದು ಮಧ್ಯಾಹ್ನ 3ಕ್ಕೆ ಮೇಳದ ಉದ್ಘಾಟನೆ ನಡೆಯಲಿದ್ದು, ಅಂದು ಬೆಳಗ್ಗೆ ವಿದ್ಯಾರ್ಥಿಗಳಿಂದ ನಗರದಲ್ಲಿ ಪ್ರಭಾತ್‌ಪೇರಿ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ತಲಾ 200 ವಿದ್ಯಾರ್ಥಿಗಳು ಸೇರಿ ಸುಮಾರು 5 ಸಾವಿರಕ್ಕೂ ಅಧಿಕ ಮಕ್ಕಳು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು 1987ರಲ್ಲಿ ಹೊಸಪೇಟೆಯಲ್ಲಿ ಆಯೋಜಿಸಲಾಗಿತ್ತು. ಈಗ 30 ವರ್ಷಗಳ ಬಳಿಕ ಬಳ್ಳಾರಿ ನಗರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಮೇಳವನ್ನು ಆಯೋಜಿಸಲಾಗಿದೆ. ಮೇಳಕ್ಕೆ ಆಗಮಿಸುವ ರಾಜ್ಯ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ನಗರದ ಬಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮೇಳದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಾಸಕ ತನ್ವೀರ್ ಸೇಠ ರೂವಾರಿಯಾಗಿದ್ದಾರೆ. ಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷ ಎನ್.ಎಂ.ಗುರುಸಿದ್ದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಯುವ ಯೋಜನೆ ನಿರ್ದೇಶಕ ಡಾ.ಎಸ್.ಎನ್.ಸುಬ್ಟಾರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿನ್ನೆಲೆ; ಭಾರತ ಸೇವಾದಳ ಸಂಸ್ಥೆಯು ರಾಷ್ಟ್ರಿತ ಮಹಾತ್ಮಾಗಾಂಧೀಜಿಯವರ 18 ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅವರ ತತ್ವಾದರ್ಶಗಳನ್ನು ಜಾರಿಗೆ ತರುವುದಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಮತ್ತು ಯುವಜನರನ್ನು ಸಂಘಟಿಸಿ ಅವರಲ್ಲಿ ಶಿಸ್ತು, ಸಂಯಮ, ಧೈರ್ಯ, ಸ್ಥೈರ್ಯ, ತ್ಯಾಗ ಮನೋಭಾವ, ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆಗೆ ಸೇರಿದಂತೆ ಮುಂತಾದ ಸದ್ಗುಣಗಳನ್ನು ಮೂಡಿಸಿ ಅವರನ್ನು ದೇಶದ ಸತøಜೆಗಳನ್ನಾಗಿ ರೂಪಿಸುವುದಾಗಿದೆ. ಅದಕ್ಕಾಗಿ ಹಲವು ಶಿಕ್ಷಣ ಶಿಬಿರಗಳು, ಮಕ್ಕಳ ಮತ್ತು ಯುವಜನರ ರ್ಯಾಲಿಗಳನ್ನು ನಡೆಸುವುದರ ಮೂಲಕ ರಚನಾತ್ಮಕ ಕಾರ್ಯಕ್ರಮಗಳನ್ನು ಸರ್ಕಾರದ ಅನುದಾನದಿಂದ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ನಡೆಸಿಕೊಂಡು ಬರುತ್ತಿರುವ ಜಾತ್ಯತೀತ, ರಾಜಕೀಯೇತರ ಸಂಸ್ಥೆಯಾಗಿದೆ. ಸೇವಾದಳದ ದಳಪತಿ ಎಚ್.ಎಸ್.ಚಂದ್ರಶೇಖರ್, ಜಿಲ್ಲಾ ಸಂಘಟಕ ಗಣೇಶ್ ಬಾರಿಕರ್ ಸುದ್ದಿಗೋಷ್ಠಿಯಲ್ಲಿದ್ದರು.