Advertisement

ಟೆಕ್ಕಿ, ಉಪನ್ಯಾಸಕರು ಟು ಸರ್ಕಾರಿ ಉದ್ಯೋಗಿಗಳು…ಇದು ಬಂಧಿತ PFI ಮುಖಂಡರ ಹಿನ್ನೆಲೆ!

01:20 PM Sep 29, 2022 | Team Udayavani |

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಪಿಎಫ್ ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ದಾಳಿ ನಡೆಸಿದ್ದ ಬಳಿಕ ಕೇಂದ್ರ ಸರ್ಕಾರ ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿತ್ತು. ಏತನ್ಮಧ್ಯೆ ಬಂಧಿತ ಪಿಎಫ್ ಐನ ಮುಖಂಡರುಗಳಲ್ಲಿ ಟೆಕ್ಕಿಯಿಂದ ಹಿಡಿದು ಉಪನ್ಯಾಸಕರು, ಸರ್ಕಾರಿ ನೌಕರರು ಸೇರಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

ಇದನ್ನೂ ಓದಿ:ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

ಟೆಕ್ಕಿ ಟು ಸರ್ಕಾರಿ ನೌಕರರು:

ಎನ್ ಐಎ, ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಪಿಎಫ್ ಐನ ಉನ್ನತ ನಾಯಕರಲ್ಲಿ ಕೇರಳ ಪಿಎಫ್ ಐನ ಅಧ್ಯಕ್ಷ ಒಎಮ್ ಎ ಸಲಾಂ ಕೇರಳದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದು, 2020ರಲ್ಲಿ ಅಮಾನತುಗೊಂಡಿರುವುದಾಗಿ ವರದಿ ತಿಳಿಸಿದೆ. ಪಿಎಫ್ ಐನ ರಾಷ್ಟ್ರೀಯ ಉಪಾಧ್ಯಕ್ಷ ಇ.ಎಂ. ಅಬ್ದುರ್ ರಹಿಮಾನ್ ಕಲಮಶ್ಶೇರಿಯಲ್ಲಿರುವ ಕೊಚಿನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯೂನಿರ್ವಸಿಟಿಯ ನಿವೃತ್ತ ಗ್ರಂಥಪಾಲಕ, ಪಿಎಫ್ ಐನ ರಾಷ್ಟ್ರೀಯ ಕಾರ್ಯದರ್ಶಿ ವಿ.ಪಿ.ನಜರುದ್ದೀನ್- ಜಮಾತ್ ಇ ಇಸ್ಲಾಮಿ ಹಿಂದ್ ನ ಮುಖವಾಣಿ ಮಾಧ್ಯಮಂ ದೈನಿಕದ ಮಾಜಿ ಉದ್ಯೋಗಿ, ಪಿಎಫ್ ಐನ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಪಿ.ಕೋಯಾ ಕತಾರ್ ನ ಖಾಸಗಿ ಕಂಪನಿಯ ಮಾಜಿ ಉದ್ಯೋಗಿ, ನಂತರ  ಕೋಝಿಕೋಡ್ ನ ಕಡೆಂಶ್ಶೇರಿಯ ಸರ್ಕಾರಿ ಶಾಲೆಯಲ್ಲಿ ಉಪನ್ಯಾಸಕನಾಗಿರುವುದಾಗಿ ವರದಿ ವಿವರಿಸಿದೆ.

ಒಎಂಎ ಸಲಾಂ ಕೇರಳ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದ. ಈತ ಪಿಎಫ್ ಐ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ 2020ರ ಡಿಸೆಂಬರ್ 14ರಂದು ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ಮಲಪ್ಪುರಂನಲ್ಲಿ ಸಲಾಂ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ರೆಹಾಬ್ ಇಂಡಿಯಾ ಫೌಂಡೇಶನ್ ಜತೆಯೂ ನಿಕಟ ಸಂಪರ್ಕ ಹೊಂದಿದ್ದ.

Advertisement

ಇಎಂ ಅಬ್ದುರ್ ರಹಿಮಾನ್ ಎರ್ನಾಕುಳಂ ನಿವಾಸಿಯಾಗಿದ್ದು, ಈತ 1970ರಲ್ಲಿಯೇ ಸಿಮಿ ಸಂಘಟನೆಗೆ ಸೇರಿಕೊಂಡಿದ್ದ. ಎನ್ ಡಿಎಫ್, ಪಿಎಫ್ ಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಸಿಎಚ್ ಆರ್ ಒನಂತಹ ಸಂಘಟನೆಯ ಸ್ಥಾಪನೆಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ವರದಿ ತಿಳಿಸಿದೆ. ನವದೆಹಲಿಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಟ್ರಸ್ಟ್ ನ ನಿರ್ದೇಶಕ ಮಂಡಳಿಯ ಸದಸ್ಯ ಸ್ಥಾನವನ್ನೂ ರಹಿಮಾನ್ ಹೊಂದಿದ್ದ ಎಂದು ವರದಿ ತಿಳಿಸಿದೆ.

ಇ ಅಬೂಬಕರ್ ಕೇರಳದ ಕ್ಯಾಲಿಕಟ್ ನಿವಾಸಿಯಾಗಿದ್ದು, ಈತ 1982ರಿಂದ 1984ರವರೆಗೆ ಸಿಮಿಯ ಕೇರಳ ರಾಜ್ಯಾಧ್ಯಕ್ಷನಾಗಿದ್ದ. ಈತ ಎನ್ ಡಿಎಫ್ ಮತ್ತು ರೆಹಾಬ್ ಇಂಡಿಯಾ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ, ಅಷ್ಟೇ ಅಲ್ಲ ಎಸ್ ಡಿಪಿಐನ ಸ್ಥಾಪಕ ಅಧ್ಯಕ್ಷನಾಗಿದ್ದ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸ್ಥಾಪಕ ಸದಸ್ಯ ಹಾಗೂ ಇಂಡಿಯಾ ನೆಕ್ಸ್ಟ್ ಹಿಂದಿ ಮ್ಯಾಗಜೀನ್ ನ ಸಂಪಾದಕನಾಗಿದ್ದ ಎಂದು ವರದಿ ಹೇಳಿದೆ.

ಪಿ.ಕೋಯಾ ನಿಷೇಧಿತ ಪಿಎಫ್ ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, 1978-79ರಲ್ಲಿ ಸಿಮಿಯ ಸಕ್ರಿಯ ಕಾರ್ಯಕರ್ತನಾಗಿದ್ದ. ನಜರುದ್ದೀನ್ ಅಲುವಾದಲ್ಲಿನ ಎಂಇಎಸ್ ಕಾಲೇಜ್ ನಲ್ಲಿ ಉಪನ್ಯಾಸಕನಾಗಿದ್ದ. ನಂತರ ಮಾಧ್ಯಮಂ ದೈನಿಕದಲ್ಲಿ ಕ್ಲರ್ಕ್ ಆಗಿದ್ದ. 2014ರ ಲೋಕಸಭಾ ಚುನಾವಣೆ ವೇಳೆ ಮಲಪ್ಪುರಂನಲ್ಲಿ ಎಸ್ ಡಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ.

ಪಶ್ಚಿಮಬಂಗಾಳದ ಪಿಎಫ್ ಐನ ರಾಜ್ಯಾಧ್ಯಕ್ಷ ಮಿನ್ರೌಲ್ ಶೇಕ್ ಎಂಎ, ಪಿಎಚ್ ಡಿ ಪದವೀಧರನಾಗಿದ್ದು, ಈತ ಕೋಚಿಂಗ್ ತರಗತಿ ನಡೆಸುತ್ತಿದ್ದ. ಜೊತೆಗೆ ಮುರ್ಶಿದಾಬಾದ್, ಮಾಲ್ಡಾ ಮತ್ತು ಕೋಲ್ಕತದಲ್ಲಿ ಪಿಎಫ್ ಐ ಚಟುವಟಿಕೆ ನಡೆಸುತ್ತಿದ್ದ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಕರ್ನಾಟಕದ ಪಿಎಫ್ ಐನ ಇಬ್ಬರು ಸದಸ್ಯರಾದ ಅಬ್ದುಲ್ ವಾಹಿತ್ ಸೇಠ್ ಮತ್ತು ಅನೀಸ್ ಅಹ್ಮದ್ ಟೆಕ್ಕಿಗಳಾಗಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಸೇಠ್, ಪಿಎಫ್ ಐ ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದಾನೆ. ಈತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿ ಹೊಂದಿರುವುದಾಗಿ ವರದಿ ತಿಳಿಸಿದೆ.

ಅನೀಸ್ ಅಹ್ಮದ್ ಬೆಂಗಳೂರಿನಲ್ಲಿ ಎರಿಕ್ಸನ್ ಕಂಪನಿಯಲ್ಲಿ ಗ್ಲೋಬಲ್ ಟೆಕ್ನಿಕಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ ಅನೀಸ್ ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೇಂದ್ರ ಸರ್ಕಾರದ ನೀತಿ ಸೇರಿದಂತೆ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅನೀಸ್ ನ್ಯೂಸ್ ಚಾನೆಲ್ ಗಳಿಗೆ ಅಭಿಪ್ರಾಯವ್ಯಕ್ತಪಡಿಸುತ್ತಿದ್ದ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next