ಬೆಂಗಳೂರು: ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಆರ್‌ಡಿಎ)ವು ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಮಾತುಕತೆ ಕೂಡ ವಿಫಲಗೊಂಡಿದ್ದು, ಇದರ ಬೆನ್ನಲ್ಲೇ ನಗರದಲ್ಲಿ ವಿವಿಧ ಪ್ರಕಾರದ ವಾಹನಗಳ ಮಾಲಿಕರ ಸಂಘಟನೆಗಳು ಹೋರಾಟ ತೀವ್ರಗೊಳಿಸಲು ನಿರ್ಧರಿಸಿವೆ. ಇದರಿಂದ ಶನಿವಾರ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸಭೆ ವಿಫಲವಾದ ಬೆನ್ನಲ್ಲೇ ನಗರದಲ್ಲಿರುವ ಆ್ಯಪ್ ಆಧರಿತ ಸೇವೆ ಸಲ್ಲಿಸುತ್ತಿರುವ ಟ್ಯಾಕ್ಸಿ ಮಾಲಿಕರು ಶನಿವಾರದಿಂದಲೇ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿವೆ. ಅತ್ತ ಪ್ರವಾಸಿ ವಾಹನಗಳು ಕೂಡ ಇದೇ ಸಿದ್ಧತೆ ನಡೆಸಿದ್ದು, ಸೋಮವಾರದಿಂದ ರಸ್ತೆಗಿಳಿಯದಿರಲು ಚಿಂತನೆ ನಡೆಸಿವೆ. ಈ ಬಗ್ಗೆ ಶನಿವಾರ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಆಟೋರಿಕ್ಷಾ ಚಾಲಕರ ಸಂಘ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಓಲಾ-ಉಬರ್ ಮತ್ತಿತರ ಆ್ಯಪ್ ಆಧಾರಿತ ಟ್ಯಾಕ್ಸಿಗಳಿವೆ. ಈ ಪೈಕಿ ತಕ್ಷಣಕ್ಕೆ 25 ಸಾವಿರಕ್ಕೂ ಅಧಿಕ ಟ್ಯಾಕ್ಸಿ ಚಾಲಕರಿಗೆ ಲಾರಿ ಮುಷ್ಕರವನ್ನು ಬೆಂಬಲಿಸಿ ಶನಿವಾರದಿಂದ ರಸ್ತೆಗಿಳಿಯದಿರಲು ಮೊಬೈಲ್ ಮೂಲಕ ಸಂದೇಶ ರವಾನಿಸಲಾಗಿದೆ. ಬೆಳಗ್ಗೆ ಉಳಿದವರಿಗೂ ಮನವಿ ಮಾಡಲಾಗುವುದು ಎಂದು ಓಲಾ-ಉಬರ್ ಮಾಲಿಕರ ಸಂಘದ ಅಧ್ಯಕ್ಷ ತನ್ವಿರ್ ಪಾಷ ತಿಳಿಸಿದ್ದಾರೆ.
ಇಂದು ನಿರ್ಧಾರ ಕೈಗೊಳ್ಳಲಿರುವ ಪ್ರವಾಸಿ ವಾಹನಗಳು: ಇತ್ತೀಚೆಗೆ ನಗರದ ಅತಿ ಹೆಚ್ಚು ಜನ ಆ್ಯಪ್ ಆಧಾರಿತ ಟ್ಯಾಕ್ಸಿಗಳನ್ನು ಅವಲಂಬಿಸಿದ್ದಾರೆ. ಹಾಗೊಂದು ವೇಳೆ ಸಂಪೂರ್ಣ ಸ್ಥಗಿತಗೊಂಡರೆ, ಇದರ ಬಿಸಿ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ. ಅದೇ ರೀತಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ನಡುವೆ ಲಕ್ಷಾಂತರ ಪ್ರವಾಸಿ ವಾಹನಗಳು ಕಾರ್ಯಾಚರಣೆ ಮಾಡುತ್ತವೆ. ಅವೆಲ್ಲವುಗಳ ಸಂಚಾರ ಸ್ಥಗಿತಗೊಂಡರೆ, ಪ್ರಯಾಣಿಕರು ಅಕ್ಷರಶಃ ಪರದಾಟವಾಗಲಿದೆ. ಆದರೆ, ಈ ಬಗ್ಗೆ ಇನ್ನೂ ಪ್ರವಾಸಿ ವಾಹನಗಳ ಮಾಲಿಕರ ಸಂಘ ನಿರ್ಧಾರ ಕೈಗೊಂಡಿಲ್ಲ.
“ಥರ್ಡ್ ಪಾರ್ಟಿ ಇನ್ಷೊರನ್ಸ್ ಮೊತ್ತ ಕಡಿಮೆ ಮಾಡುವಂತೆ ಲಾರಿ ಮಾಲಿಕರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಗಳೂರು ಪ್ರವಾಸಿ ವಾಹನಗಳ ಸಂಘ (ಬಿಟಿಟಿಒಎ)ದ ಸಂಪೂರ್ಣ ಬೆಂಬಲ ಇದೆ. ಇದಕ್ಕೆ ಪೂರಕವಾಗಿ ಸೋಮವಾರದಿಂದ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆದಿದೆ. ಆದರೆ, ಈ ಬಗ್ಗೆ ಶನಿವಾರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಬಿಟಿಟಿಒಎ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಸ್ಪಷ್ಟಪಡಿಸಿದ್ದಾರೆ.
ಬಂದ್ ಇಲ್ಲ; ಪ್ರತಿಭಟನೆ: ಲಾರಿ ಮುಷ್ಕರಕ್ಕೆ ಆಟೋಗಳ ನೈತಿಕ ಬೆಂಬಲ ಇದೆ. ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಬೆಳಿಗ್ಗೆ 10ಕ್ಕೆ ಆಟೋ ಚಾಲಕರಿಂದ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರ ಎಂದಿನಂತೆ ಆಟೋಗಳು ಕಾರ್ಯಾಚರಣೆ ನಡೆಸಲಿವೆ ಎಂದು ಆಟೋರಿಕ್ಷಾ ಚಾಲಕರ ಸಂಘ ಸಿಐಟಿಯು ಅಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.